ADVERTISEMENT

ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲೇ ದಾಳಿ: ಅಧ್ಯಕ್ಷ ರಹೀಂ ಉಚ್ಚಿಲ್ ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಮಂಗಳೂರು: ನಗರದ ಅತ್ತಾವರದಲ್ಲಿರುವ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲೇ  ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅವರ ಮೇಲೆ ದುಷ್ಕರ್ಮಿಗಳ ತಂಡವೊಂದು  ಗುರುವಾರ ಮಧ್ಯಾಹ್ನ  ಹಲ್ಲೆ ನಡೆಸಿದೆ. ಉದ್ದದ ಮಚ್ಚುಗಳ ಏಟಿನಿಂದ ರಹೀಂ ಅವರ ದೇಹದಲ್ಲಿ ಆಳವಾದ ಗಾಯಗಳಾಗಿವೆ. ಗಂಭೀರ ಸ್ಥಿತಿಯಲ್ಲಿರುವ ಅವರಿಗೆ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಡೆದದ್ದಿಷ್ಟು: ಗುರುವಾರ ಮಧ್ಯಾಹ್ನ 1 ಗಂಟೆಗೆ ನಾಲ್ವರು ದುಷ್ಕರ್ಮಿಗಳ ತಂಡ 2 ಮೋಟಾರ್ ಬೈಕ್‌ಗಳಲ್ಲಿ ಆಗಮಿಸಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ದುಷ್ಕರ್ಮಿಗಳು ಲಾಂಗ್ ಹಿಡಿದು ಅಕಾಡೆಮಿ ಕಚೇರಿಯೊಳಗೆ ನುಗ್ಗಿ ರಹೀಂ ಅವರ ಕುತ್ತಿಗೆ, ಎರಡೂ ಕೈಗಳು ಮತ್ತು ಹೊಟ್ಟೆಗೆ ತಲವಾರಿನಿಂದ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಅಡ್ಡ ಬಂದ ಕಚೇರಿ ಗುಮಾಸ್ತ, ಅಂಗವಿಕಲ ಸತೀಶ್ ರೈ ಅವರನ್ನು ದುಷ್ಕರ್ಮಿಗಳ ತಂಡ ಪಕ್ಕಕ್ಕೆ ದೂಡಿ ಕಚೇರಿಯ ಪೀಠೋಪಕರಣ ಧ್ವಂಸಗೊಳಿಸಿ ಪರಾರಿಯಾಗಿದೆ.

ಸತೀಶ್ ರೈ ಕಿರುಚಾಟ ಕೇಳಿ ಧಾವಿಸಿದ ಅಕ್ಕಪಕ್ಕದವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ರಹೀಂ ಅವರನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅವರು ಸದ್ಯ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ADVERTISEMENT

ತನಿಖೆ ಕೈಗೊಂಡಿರುವ ಪಾಂಡೇಶ್ವರ ಪೊಲೀಸರು, ರಾಜಕೀಯ ಕಾರಣಗಳಿಗಾಗಿ ಕೊಲೆ ಯತ್ನ ನಡೆದಿರಬಹುದು ಎಂದು ಶಂಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.