ADVERTISEMENT

ಬ್ಲೂ ಫಿಲ್ಮ್ ವೀಕ್ಷಣೆ: ಮಾಜಿ ಸಚಿವರ ವಿರುದ್ಧ ತನಿಖೆಗೆ ಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಬೆಂಗಳೂರು: ಸದನದಲ್ಲಿ `ಬ್ಲೂ ಫಿಲಂ~ ವೀಕ್ಷಿಸಿದ ವಿವಾದದಲ್ಲಿ ಸಿಲುಕಿರುವ ಮಾಜಿ ಸಚಿವರಾದ ಲಕ್ಷ್ಮಣ ಸವದಿ ಹಾಗೂ ಸಿ.ಸಿ.ಪಾಟೀಲ್ ಮತ್ತು ಅಶ್ಲೀಲ ವಿಡಿಯೊ ತುಣುಕುಗಳಿದ್ದ ಮೊಬೈಲ್ ಫೋನ್ ನೀಡಿದ ಆರೋಪ ಹೊತ್ತ ಮಾಜಿ ಸಚಿವ ಕೃಷ್ಣ ಪಾಲೆಮಾರ್ ವಿರುದ್ಧ ತನಿಖೆ ನಡೆಸಿ ವರದಿ ನೀಡುವಂತೆ 8ನೇ ಎಸಿಎಂಎಂ ಕೋರ್ಟ್ ವಿಧಾನಸೌಧ ಪೊಲೀಸರಿಗೆ ಸೋಮವಾರ ನಿರ್ದೇಶಿಸಿದೆ.

ವಕೀಲ ಧರ್ಮಪಾಲ ಗೌಡ ಅವರು ಸಲ್ಲಿಸಿರುವ ಖಾಸಗಿ ದೂರಿಗೆ ಸಂಬಂಧಿಸಿದಂತೆ ನ್ಯಾಯಾಧೀಶ ಕಿರಣ್ ಕಿಣಿ ಈ ಆದೇಶ ಹೊರಡಿಸಿದ್ದಾರೆ. ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆಯ 156 (3) ಕಲಮಿನ ಅಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುವಂತೆ ಆದೇಶಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲು ಮಾಡಿದ ನಂತರ ಪೊಲೀಸರು ತನಿಖೆ ನಡೆಸಬೇಕಿದೆ. ಇದೇ 27ರೊಳಗೆ ತನಿಖಾ ವರದಿಯನ್ನು ಸಲ್ಲಿಸಲು ಗಡುವು ನೀಡಲಾಗಿದೆ.

ಅರ್ಜಿದಾರರ ದೂರೇನು: `ಸದನದಲ್ಲಿ ಮೊಬೈಲ್ ದೂರವಾಣಿಯಲ್ಲಿ ಮಾತನಾಡುವುದು, ಹಾಡು ಕೇಳುವುದು, ವಿಡಿಯೊ ವೀಕ್ಷಣೆ ನಿಷಿದ್ಧ. ಆದರೆ ಸಚಿವರಾಗಿದ್ದವರು ತಪ್ಪು ಎಸಗಿದ್ದಾರೆ. ಅವರು ಚಿತ್ರ ವೀಕ್ಷಣೆ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ಸಚಿತ್ರ ವರದಿಯಾಗಿದ್ದರೂ, ತಾವು ವೀಕ್ಷಣೆ ಮಾಡಿದ್ದು ಅಶ್ಲೀಲ ಚಿತ್ರ ಅಲ್ಲ ಎಂಬುದಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ. 

`ಕ್ಲಬ್, ಬಾರ್‌ಗಳಲ್ಲಿ ಅರೆಬೆತ್ತಲೆಯಾಗಿ ನೃತ್ಯ ಮಾಡುವ ಬಡ ಹೆಣ್ಣುಮಕ್ಕಳು ಮತ್ತು ಅದನ್ನು ವೀಕ್ಷಿಸುವ ಗಿರಾಕಿಗಳ ಮೇಲೆ ದಾಳಿ ನಡೆಸಿ ಅವರ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆ ಹೂಡುತ್ತಾರೆ. ಆದರೆ ಸಚಿವರಾಗಿದ್ದವರ ವಿರುದ್ಧ ಇದುವರೆಗೆ  ಕ್ರಮ ತೆಗೆದುಕೊಳ್ಳದೇ ಇರುವುದು ಆಶ್ಚರ್ಯ ತಂದಿದೆ.

`ಸೈಬರ್ ಕಾನೂನಿನ 66 ಮತ್ತು 67ನೇ ಕಲಮುಗಳ ಅನ್ವಯ ಅಶ್ಲೀಲ ದೃಶ್ಯಗಳನ್ನು ಮೊಬೈಲ್‌ಗೆ ರವಾನಿಸುವುದು ಹಾಗೂ ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ವೀಕ್ಷಣೆ ಮಾಡುವುದು ಅಪರಾಧ. ಇದನ್ನು ವಿಧಾನ ಸಭಾಧ್ಯಕ್ಷರ ಗಮನಕ್ಕೆ ತಂದು ಪೊಲೀಸರು ಪ್ರಕರಣ ದಾಖಲು ಮಾಡಿಕೊಳ್ಳಬೇಕಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಚಿತ್ರ, ವಿಡಿಯೊ ವೀಕ್ಷಣೆ, ಇಂತಹ ಚಿತ್ರಗಳ ರವಾನೆ ಇತ್ಯಾದಿ ಚಟುವಟಿಕೆಗಳು ಭಾರತೀಯ ದಂಡ ಸಂಹಿತೆಯ (ಐಪಿಸಿ) 292 ಹಾಗೂ 294ರ ಅಡಿಯೂ ಅಪರಾಧ. ಆದರೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ~ ಎಂದು ಅರ್ಜಿದಾರರ ಆರೋಪಿಸಿದ್ದಾರೆ.

ತನಿಖೆಯಿಂದ ನಿಜ ಸಂಗತಿ: `ಮಾಧ್ಯಮಗಳು ವಿನಾಕಾರಣ ಈ ವಿಷಯವನ್ನು ತಿರುಚಿವೆ ಎಂಬ ವಾದ ಈ ಮಾಜಿ ಸಚಿವರದ್ದು. ತಾವು ತಪ್ಪು ಮಾಡಿಲ್ಲ ಎಂದೂ ಅವರು ವಾದಿಸುತ್ತಿದ್ದಾರೆ. ಇವೆಲ್ಲದರ ಸತ್ಯಾಸತ್ಯತೆಗಳು ಕೇವಲ ತನಿಖೆಯಿಂದ ಮಾತ್ರ ಹೊರಕ್ಕೆ ಬರಲಿದೆ~ ಎಂದು ಅರ್ಜಿದಾರರು ಕೋರಿದ್ದಾರೆ.

ಈ ಮೊಕದ್ದಮೆಯನ್ನು ದಾಖಲು ಮಾಡಲು ಸ್ಪೀಕರ್ ಅವರ ಅನುಮತಿ ಪಡೆದುಕೊಂಡಿರುವುದಾಗಿಯೂ ಅವರು ತಿಳಿಸಿದ್ದಾರೆ. ವಿಚಾರಣೆಯನ್ನು 27ಕ್ಕೆ ಮುಂದೂಡಲಾಗಿದೆ.

ಐಪಿಸಿಯ 292 ಹಾಗೂ 294ನೇ ಅಡಿ ದಾಖಲಾದ ದೂರಿನ ಅನ್ವಯ ಆರೋಪ ಸಾಬೀತಾದರೆ ಕ್ರಮವಾಗಿ ಗರಿಷ್ಠ 2ವರ್ಷಗಳ ಹಾಗೂ 3ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.