ADVERTISEMENT

ಭದ್ರಾ ಮೇಲ್ದಂಡೆ ಯೋಜನೆ:ಮೊದಲ ಹಂತದ ಕಾಮಗಾರಿ 2013ಕ್ಕೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST

ಬೆಂಗಳೂರು: `ಬಯಲುಸೀಮೆಗೆ ನೀರು ಒದಗಿಸುವ ಭದ್ರಾ ಮೇಲ್ದಂಡೆ ಯೋಜನೆಯ ಮೊದಲ ಹಂತದ ಕಾಮಗಾರಿ 2013ರ ವೇಳೆಗೆ ಪೂರ್ಣಗೊಳ್ಳಲಿದೆ~ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಮಂಗಳವಾರ ಇಲ್ಲಿ ತಿಳಿಸಿದರು.

`ಮೊದಲ ಹಂತದ ಕಾಮಗಾರಿಯನ್ನು 3,388 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು, ಕೆಲಸ ಭರದಿಂದ ಸಾಗಿದೆ. ಇದು 2013ರ ವೇಳೆಗೆ ಪೂರ್ಣವಾಗಲಿದ್ದು, ಆ ನಂತರ ಅದರ ಉಪಯೋಗವನ್ನು ರೈತರು ಪಡೆಯಲಿದ್ದಾರೆ~ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಎರಡನೇ ಹಂತದ ಕಾಮಗಾರಿಯನ್ನೂ ಆದಷ್ಟು ಬೇಗ ಕೈಗೆತ್ತಿಕೊಳ್ಳಲಾಗುವುದು. ಇದರ ಅಂದಾಜು ವೆಚ್ಚ 2,597 ಕೋಟಿ ರೂಪಾಯಿ. ಇದನ್ನೂ 2014ರ ವೇಳೆಗೆ ಪೂರ್ಣಗೊಳಿಸಲು ಸಿದ್ಧತೆ ನಡೆದಿದೆ ಎಂದರು.

ಮೊದಲ ಹಂತದ ಯೋಜನೆಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಮತ್ತು 50 ದೊಡ್ಡ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬಹುದು. ಇದರ ಜತೆಗೆ ತರೀಕೆರೆ ವ್ಯಾಪ್ತಿಯ 10 ಸಾವಿರ ಎಕರೆಗೂ ನೀರಾವರಿ ಸೌಲಭ್ಯ ಕಲ್ಪಿಸಬಹುದು ಎಂದರು.

ತರೀಕೆರೆ ಸಮೀಪ ಸುರಂಗ ಕೊರೆದು ನೀರು ಸಾಗಿಸುವ ಕಾಮಗಾರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ನಂತರ ಭೂಮಿಯೊಳಗೇ ಸುರಂಗವನ್ನು ಕಾಂಕ್ರೀಟ್‌ನಿಂದ ನಿರ್ಮಿಸಿ, ನೀರು ಹರಿಸುವ ವ್ಯವಸ್ಥೆಗೆ ಸ್ಥಳೀಯರು ಒಪ್ಪಿದ್ದು, ಇದರಿಂದ ಅಂತರ್ಜಲಕ್ಕೆ ತೊಂದರೆ ಇಲ್ಲ. ಇದರ ಕಾಮಗಾರಿಯೂ 15 ದಿನಗಳಲ್ಲಿ ಆರಂಭವಾಗಲಿದೆ ಎಂದು ತಿಳಿಸಿದರು.

ಎರಡನೇ ಹಂತದ ಕಾಮಗಾರಿಯಿಂದ ತುಮಕೂರು ಮತ್ತು ಕೋಲಾರ ಜಿಲ್ಲೆಗಳ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಲೋಪ ಇಲ್ಲ: ಮೊದಲ ಹಂತದ ಕಾಮಗಾರಿಯನ್ನು ನಿಯಮ ಪ್ರಕಾರವೇ ಮಂಜೂರು ಮಾಡಲಾಗಿದೆ. ಹಿಂದಿನ ಸರ್ಕಾರಗಳು ಈ ಯೋಜನೆಗೆ ಪ್ರಾಥಮಿಕ ಹಂತದ ಒಪ್ಪಿಗೆ ಕೊಟ್ಟಿದ್ದು, ಅದರ ನಂತರ ಅದನ್ನು 2008ರ ಆಗಸ್ಟ್ 27ರಂದು ನಡೆದ ಸಂಪುಟ ಸಭೆಯಲ್ಲಿ ಮಂಜೂರು ಮಾಡಲಾಗಿದೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.

ತಜ್ಞರ ಸಲಹೆ ಪ್ರಕಾರವೇ ಎಲ್ಲ ತೀರ್ಮಾನಗಳನ್ನೂ ತೆಗೆದುಕೊಳ್ಳಲಾಗಿದೆ. ಈ ವಿಷಯದಲ್ಲಿ ಯಾವ ಅಕ್ರಮವೂ ನಡೆದಿಲ್ಲ ಎಂದೂ ಹೇಳಿದರು.

ಪ್ಯಾಕೇಜ್-2ರ ಟೆಂಡರ್ ಅನ್ನು ಅತಿ ಕಡಿಮೆ ಮೊತ್ತಕ್ಕೆ (ರೂ 1033 ಕೋಟಿ) ಬಿಡ್ ಮಾಡಿದ್ದ ಆರ್‌ಎನ್‌ಎಸ್- ಜ್ಯೋತಿ ಸಂಸ್ಥೆಗೆ ನೀಡಿದ್ದು, ಇದರಲ್ಲಿಯೂ ಅಕ್ರಮ ನಡೆದಿಲ್ಲ. ತಾಂತ್ರಿಕ ಸಮಿತಿಯ ಸಲಹೆಯಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.