ADVERTISEMENT

ಭಾರತದ ಬೆಳವಣಿಗೆ ಚೀನಾಕ್ಕೆ ಆತಂಕ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2011, 19:30 IST
Last Updated 13 ಏಪ್ರಿಲ್ 2011, 19:30 IST
ಭಾರತದ ಬೆಳವಣಿಗೆ ಚೀನಾಕ್ಕೆ ಆತಂಕ
ಭಾರತದ ಬೆಳವಣಿಗೆ ಚೀನಾಕ್ಕೆ ಆತಂಕ   

ಬೆಂಗಳೂರು: ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳುತ್ತಿರುವ ಭಾರತದ ಬಗ್ಗೆ ನೆರೆಯ ರಾಷ್ಟ್ರಗಳಲ್ಲಿ ಆತಂಕ ಮನೆಮಾಡಿದೆ. ಇವುಗಳಲ್ಲಿ ಮುಖ್ಯವಾಗಿ ಚೀನಾ ತೀವ್ರ ಆತಂಕಕ್ಕೆ ಒಳಗಾಗಿದೆ.ಇದಲ್ಲದೇ ಅಮೆರಿಕದೊಂದಿಗಿನ ಬಾಂಧವ್ಯ ಗಟ್ಟಿಯಾದಷ್ಟು ಅದು (ಚೀನಾ) ನಮ್ಮ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಒತ್ತಡ ಹೇರುತ್ತಿದೆ ಎಂದು ನವದೆಹಲಿಯ ಶಾಂತಿ ಹಾಗೂ ಬಿಕ್ಕಟ್ಟು ಅಧ್ಯಯನಗಳ ಸಂಸ್ಥೆಯ ರಾಯಭಾರಿ ಅರುಂಧತಿ ಘೋಷ್ ಹೇಳಿದರು.

‘ಅಭಿವೃದ್ಧಿಯಾಗುತ್ತಿರುವ ಭಾರತ; ಸವಾಲುಗಳು ಹಾಗೂ ಅವಕಾಶಗಳು’ ಕುರಿತು ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಮಾತನಾಡಿದರು. ‘ಬೌದ್ಧ ಗುರು ದಲೈ ಲಾಮಾ ಅವರಿಗೆ ಆಶ್ರಯ ನೀಡಿದಾಗಿನಿಂದ ಚೀನಾ ನಮ್ಮನ್ನು ಸಂಶಯದಿಂದ ನೋಡುತ್ತಿದೆ. ನಮ್ಮ ಏಳಿಗೆ, ಬೆಳವಣಿಗೆಯನ್ನು ಸಹಿಸುತ್ತಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಅಮೆರಿಕ ಅಥವಾ ತನ್ನ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಚೀನಾ ಒತ್ತಡ ಹಾಕಿತ್ತು’ ಎಂದು ಅವರು ತಿಳಿಸಿದರು.

‘ಭಾರತ ಪರಮಾಣು ಪರೀಕ್ಷೆ ನಡೆಸುವ ಸಂದರ್ಭದಲ್ಲಿಯೂ ಚೀನಾ ಇಂತಹದೊಂದು ಒತ್ತಡ ಹಾಕಿತ್ತು. ಆಗ ಭಾರತ ಧೈರ್ಯದಿಂದ ಅಮೆರಿಕದ ಜೊತೆ ಅಣು ಒಪ್ಪಂದಕ್ಕೆ ಸಹಿ ಹಾಕಿತು. ಇದು ಅತ್ಯುತ್ತಮ ನಿರ್ಧಾರವಾಗಿತ್ತು’ ಎಂದು ಅವರು ನುಡಿದರು. ‘ಪಾಕಿಸ್ತಾನ, ಶ್ರೀಲಂಕಾ, ಭೂತಾನ್, ಬಾಂಗ್ಲಾದೇಶ, ಮ್ಯಾನ್ಮಾರ್ ಹೀಗೆ ವಿವಿಧ ದೇಶಗಳ ಜೊತೆಯೂ ಕೂಡ ಭಾರತದ ಬಾಂಧವ್ಯ ನಿರೀಕ್ಷಿಸಿದಷ್ಟು ಸೌಹಾರ್ದಯುತವಾಗಿಲ್ಲ. ಇದು ದೇಶದ ಆರ್ಥಿಕ ಬೆಳವಣಿಗೆ ಮೇಲೆ ಅಷ್ಟಾಗಿ ಪರಿಣಾಮ ಬೀರದು. ಈ ದೇಶಗಳ ಜೊತೆಗಿನ ಆರ್ಥಿಕ ವಹಿವಾಟು ಅಷ್ಟಾಗಿ ಇಲ್ಲ’ ಎಂದರು.

ಭಾರತ ಕೇವಲ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿಲ್ಲ, ಜಾಗತಿಕ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳುವಷ್ಟರ ಮಟ್ಟಿಗೆ ಬೆಳೆಯುತ್ತಿದೆ. ಇದು ಕೂಡ ಏಷ್ಯಾ ದೇಶಗಳಲ್ಲಿ ಆತಂಕ ಮನೆ ಮಾಡಿದೆ ಎಂದು ಅವರು ನುಡಿದರು. ‘ಉಪಖಂಡದಲ್ಲಿ ಶಾಂತಿ ಬಯಸುವ ತನ್ನ ಬೇಡಿಕೆ ಬಗ್ಗೆ ಭಾರತ ಸ್ಪಷ್ಟವಾಗಿ ಜಿ-20 ಹಾಗೂ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ದೇಶಗಳನ್ನು ಒಳಗೊಂಡ ಸಂಘಟನೆ) ಸಮ್ಮೇಳನದ ವೇದಿಕೆಗಳಲ್ಲಿ ಹೇಳಬೇಕು’ ಎಂದು ಅವರು ತಿಳಿಸಿದರು. ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ವಿ.ಎಸ್. ರಾಮಮೂರ್ತಿ, ಡಾ.ಕೆ.ಸಂತಾನಂ, ಡಾ.ನಬೀಲ್ ಮಂಚೇರಿ, ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.