ADVERTISEMENT

ಭಾರತೀಯ ವಿವಾಹ ಪದ್ಧತಿಗೆ ಮಾರುಹೋದ ವಿದೇಶಿ ಜೋಡಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 19:59 IST
Last Updated 26 ಡಿಸೆಂಬರ್ 2012, 19:59 IST

ಶಿಗ್ಗಾವಿ (ಹಾವೇರಿ ಜಿಲ್ಲೆ): ಭಾರತೀಯ ವಿವಾಹ ಪದ್ಧತಿ ಹಾಗೂ ಸಂಸ್ಕೃತಿಗೆ ಶರಣಾಗಿ ಸ್ಪೇನ್ ದೇಶದ ಅಭೇಲ್ ಮತ್ತು ಮಾರ್ (ಗಂಗಾ) ಅವರು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ ಆಶೀರ್ವಾದ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಹುಚ್ಚೇಶ್ವರ ಮಠದಲ್ಲಿ ಬುಧವಾರ ನಡೆದ ಎಂಟನೇ ವರ್ಷದ ಇಷ್ಟಲಿಂಗ ಪೂಜೆ, ಸಿದ್ಧಾಂತ ಶಿಖಾಮಣಿ, ಭಗವದ್ಗೀತಾ ಪ್ರವಚನ ಹಾಗೂ ಶಿವದೀಕ್ಷಾ, ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಈ ವಿದೇಶಿ ಜೋಡಿ ಮದುವೆಯಾದರು.

`ವಿದೇಶಗಳಲ್ಲಿ ವಿವಾಹ ವಿಚ್ಛೇದನ ಹೆಚ್ಚಾಗುತ್ತಿದ್ದು, ವಿದೇಶಿಯರು ಭಾರತೀಯ ವಿವಾಹ ಪದ್ಧತಿಗೆ ಶರಣಾಗುತ್ತಿದ್ದಾರೆ` ಎಂದು ಡಾ.ಚಂದ್ರಶೇಖರ ಸ್ವಾಮೀಜಿ ಈ ಸಂದರ್ಭದಲ್ಲಿ ಹೇಳಿದರು.

`ನಾಡು-ನುಡಿ ಹಾಗೂ ರಕ್ತ ಸಂಬಂಧಗಳಿಗಿಂತ ಭಾರತೀಯ ಸಂಸ್ಕೃತಿ ಶ್ರೇಷ್ಠವಾಗಿದೆ. ಹೀಗಾಗಿ ನನ್ನ ದೇಶ, ಸಂಬಂಧಿಗಳನ್ನು ಬಿಟ್ಟು ಭಾರತೀಯ ಸಂಸ್ಕೃತಿ ಪ್ರಕಾರ ಗಂಗಾ ಎಂದು ನಾಮಕರಣ ಮಾಡಿಕೊಂಡು ವಿವಾಹವಾಗುತ್ತಿದ್ದೇವೆ. ಇಲ್ಲಿನ ಜನರ ಪ್ರೀತಿ, ವಿಶ್ವಾಸವನ್ನು ಎಂದೂ ಮರೆಯುವುದಿಲ್ಲ. ನಮಗೆ ಸ್ವಾಮೀಜಿಗಳ ಆಶೀರ್ವಾದವಿದೆ` ಎಂದು ಸ್ಪೇನ್ ದೇಶದ ಅಭೇಲ್- ಮಾರ್ ಹರ್ಷ ವ್ಯಕ್ತಪಡಿಸಿದರು.

ಧಾರವಾಡದ ಬಸವರಾಜ ಕುಟುಂಬದವರು ವಿದೇಶ ಪ್ರವಾಸಕ್ಕೆ ಹೋದಾಗ ಇವರ ಪರಿಚಯವಾಗಿತ್ತು. ನಂತರ ಕಾಶಿ ಕ್ಷೇತ್ರಕ್ಕೆ ಬರುವುದಾಗಿ ಹೇಳಿದ ಅವರು, `ನಾವಿಬ್ಬರೂ ಪ್ರೀತಿಸುತ್ತಿದ್ದೇವೆ. ಆದರೆ ಭಾರತೀಯ ವಿವಾಹ ಪದ್ಧತಿಯಂತೆ ವಿವಾಹ ಮಾಡಬೇಕು` ಎಂದು ಅಭೇಲ್ ಪ್ರಸ್ತಾಪಿಸಿದಾಗ ಬಸವರಾಜ ಅವರು ಅಭೇಲ್ ಅವರನ್ನು ಕಾಶಿ ಶ್ರೀಗಳಿಗೆ ಪರಿಚಯಿಸಿದರು. ಬಂಕಾಪುರದಲ್ಲಿ ನಡೆಯುವ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ವಿವಾಹ ಮಾಡುವುದಾಗಿ ಶ್ರೀಗಳು ಭರವಸೆ ನೀಡಿದ್ದರು. ಅದರಂತೆಯೇ ಬುಧವಾರ ಈ ವಿವಾಹ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.