ADVERTISEMENT

ಭಾಷಣಕ್ಕೆ ಬದಲು ಬರೀ ಮಂಡನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2011, 6:40 IST
Last Updated 7 ಜನವರಿ 2011, 6:40 IST

ಬೆಂಗಳೂರು: ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರವು ಬರೆದುಕೊಟ್ಟಿರುವ ಭಾಷಣವನ್ನು ಓದುವ ಅಗತ್ಯವಿಲ್ಲ ಎಂದು ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡದೆ ಕೇವಲ ಪ್ರತಿಯನ್ನು ಮಂಡಿಸಿ, ಸದನದಿಂದ ಹೊರನಡೆದ ಅಪರೂಪದ ಪ್ರಸಂಗ ಗುರುವಾರ ವಿಧಾನ ಸಭೆಯಲ್ಲಿ ನಡೆಯಿತು.

ಸಂಪ್ರದಾಯದಂತೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಭಾರದ್ವಾಜ್ ಎದ್ದು ನಿಲ್ಲುತ್ತಿದ್ದಂತೆಯೇ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ, ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್, ಆರ್.ರೋಷನ್ ಬೇಗ್ ಸೇರಿದಂತೆ ಪ್ರತಿಪಕ್ಷಗಳ ಬಹುತೇಕ ಎಲ್ಲ ಶಾಸಕರು ಒಟ್ಟಿಗೆ ಎದ್ದುನಿಂತು ಏರುಧ್ವನಿಯಲ್ಲಿ ಘೋಷಣೆಗಳನ್ನು ಕೂಗುತ್ತಾ ಭಾಷಣಕ್ಕೆ ಅಡ್ಡಿಪಡಿಸಿದರು.

‘ಗೌರವಾನ್ವಿತ ಸಭಾಪತಿ, ಸಭಾಧ್ಯಕ್ಷರೇ, ಸದಸ್ಯರೇ... ನನ್ನ ಸರ್ಕಾರ..’ ಎಂದು ರಾಜ್ಯಪಾಲರು ಮಾತು ಆರಂಭಿಸುತ್ತಿದ್ದಂತೆಯೇ ಎದ್ದುನಿಂತ ಸಿದ್ದರಾಮಯ್ಯ, ‘ನಿಮ್ಮ ಬಗ್ಗೆ ನಮಗೆ ಗೌರವವಿದೆ. ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅಂತಹ ಸರ್ಕಾರ ಬರೆದುಕೊಟ್ಟಿರುವ ಸುಳ್ಳು ಭಾಷಣವನ್ನು ನೀವು ಓದುವುದು ಬೇಡ ಎಂಬುದಷ್ಟೇ ನಮ್ಮ ಮನವಿ’ ಎಂದು ಪದೇ ಪದೇ ಕೋರಿದರು.

‘ಆಡಳಿತ ಪಕ್ಷದವರು ನಿಮ್ಮ ವಿರುದ್ಧವೇ ಆರೋಪಗಳನ್ನು ಮಾಡಿದ್ದಾರೆ. ರಾಜ್ಯಪಾಲರಿಗೆ ಸಕ್ರಿಯ ರಾಜಕೀಯಕ್ಕೆ ಬರುವ ಚಪಲವಿದ್ದು, ರಾಜೀನಾಮೆ ಕೊಟ್ಟು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದು ಟೀಕೆ ಮಾಡಿದ್ದಾರೆ. ಈಗ ನಿಮ್ಮ ಮೂಲಕವೇ ಭಾಷಣ ಮಾಡಿಸಲು ಹೊರಟಿದ್ದಾರೆ. ಪ್ಲೀಸ್....ಪ್ಲೀಸ್ ನೀವು ಭಾಷಣ ಮಾಡಬೇಡಿ’ ಎಂದು ಸಿದ್ದರಾಮಯ್ಯ ಕೈಮುಗಿದು ವಿನಂತಿಸಿದರು.

ಯಾವುದೇ ಕಾರಣಕ್ಕೂ ಸರ್ಕಾರ ಬರೆದುಕೊಟ್ಟಿರುವ ಭಾಷಣ ಓದಬಾರದು ಎಂದು ಪ್ರತಿಪಕ್ಷಗಳ ಸದಸ್ಯರು ಭಾಷಣದ ಪ್ರತಿಗಳನ್ನು ಕೈಯಲ್ಲಿ ಹಿಡಿದು ಕೂಗುತ್ತಾ ಗದ್ದಲ ಉಂಟುಮಾಡಿದ್ದರಿಂದ ರಾಜ್ಯಪಾಲರಿಗೂ ಏನು ಮಾಡಬೇಕೆಂದು ತೋಚದೆ ಒಂದು ಕ್ಷಣ ಅವಾಕ್ಕಾದಂತೆ ಕಂಡುಬಂದರು. ವಿಧಾನ ಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ, ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಎದ್ದು ನಿಂತು ರಾಜ್ಯಪಾಲರಿಗೆ ಕಿವಿಯಲ್ಲಿ ಗುಟ್ಟಾಗಿ ಏನನ್ನೊ ಹೇಳಿದರು.

ನಂತರ ಕಾರ್ಯದರ್ಶಿ ಎಸ್.ಬಿ.ಪಾಟೀಲ ಸಹ ಭಾರದ್ವಾಜ್ ಅವರೊಂದಿಗೆ ಮಾತನಾಡಿದರು. ಇದಾದ ಕೂಡಲೇ ‘ಭಾಷಣವನ್ನು ಸದನದಲ್ಲಿ ಓದಲಾಗಿದೆ ಎಂಬುದಾಗಿ ಭಾವಿಸುವುದು’ ಎಂದು ಹೇಳಿ ರಾಜ್ಯಪಾಲರು ಪುಸ್ತಕವನ್ನು ಮೇಜಿನ ಮೇಲೆ ಇಟ್ಟು ನಿರ್ಗಮಿಸಿದರು.

ಭಾರದ್ವಾಜ್ ತಮ್ಮ ಸ್ಥಾನದಿಂದ ಇಳಿಯುತ್ತಿದ್ದಂತೆಯೇ, ಕಾಂಗ್ರೆಸ್‌ನ ವಿ.ಆರ್.ಸುದರ್ಶನ್ ಅವರು ಭ್ರಷ್ಟಾಚಾರದಲ್ಲಿ ತೊಡಗಿರುವ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಜೋರಾಗಿ ಕೂಗಿದರು. ಇತರ ಸದಸ್ಯರು ಸಹ ಇದೇ ರೀತಿ ಘೋಷಣೆಗಳನ್ನು ಕೂಗಿದರು.

ರಾಜ್ಯಪಾಲರು ಭಾಷಣ ಮಾಡದಂತೆ ಸದಸ್ಯರು ವಿನಂತಿಸಿದರಾದರೂ, ಯಾರೂ ತಮ್ಮ ಆಸನಗಳನ್ನು ಬಿಟ್ಟು ಹೊರಬರಲಿಲ್ಲ. ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳನ್ನು ಪ್ರಸ್ತಾಪಿಸುತ್ತಾ, ಭ್ರಷ್ಟ ಸರ್ಕಾರವನ್ನು ಸಮರ್ಥಿಸಿಕೊಂಡು ಭಾಷಣ ಮಾಡಬೇಡಿ ಎಂದು ಮನವಿ ಮಾಡಿದರು.

ಅಪರೂಪದ ಪ್ರಸಂಗ: ರಾಜ್ಯಪಾಲರು ಭಾಷಣ ಮಾಡುವಾಗ ಘೋಷಣೆಗಳನ್ನು ಕೂಗುತ್ತಾ, ಕಪ್ಪು ಬಾವುಟ ಪ್ರದರ್ಶಿಸಿ ಅಡ್ಡಿಪಡಿಸಿದ ಅನೇಕ ಉದಾಹರಣೆಗಳು ಇವೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಎಂಇಎಸ್ ಸದಸ್ಯರು ಹಲವು ಸಲ ಸದನದಲ್ಲಿ ಈ ರೀತಿ ವರ್ತಿಸಿದ್ದು ಉಂಟು. ಆದರೆ ಪ್ರತಿಪಕ್ಷಗಳ ಎಲ್ಲ ಸದಸ್ಯರು ಒಟ್ಟಿಗೆ ಎದ್ದುನಿಂತು ಭಾಷಣ ಮಾಡದಂತೆ ರಾಜ್ಯಪಾಲರಿಗೆ ವಿನಂತಿಸಿದ ಸಂದರ್ಭ ಅಪರೂಪ.

2005ರಲ್ಲಿ ಆಗಿನ ರಾಜ್ಯಪಾಲ ಟಿ.ಎನ್.ಚತುರ್ವೇದಿ ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವಾಗ ಕುಸಿದು ಬಿದ್ದ ಪರಿಣಾಮ ಮೊದಲ ಹಾಗೂ ಕೊನೆಯ ಪ್ಯಾರಾವನ್ನು ಮಾತ್ರ ಓದಿದ್ದರು. ಖುರ್ಷಿದ್ ಆಲಂಖಾನ್ ರಾಜ್ಯಪಾಲರಾಗಿದ್ದಾಗ ಇದೇ ರೀತಿ ಪ್ರತಿಪಕ್ಷಗಳ ಸದಸ್ಯರು ಅಡ್ಡಿಯನ್ನುಂಟು ಮಾಡಿದ್ದರು.

1966ರಲ್ಲಿ ರಾಜಸ್ತಾನದಲ್ಲಿ ಈ ರೀತಿಯ ಘಟನೆ ನಡೆದಾಗ ಗದ್ದಲವನ್ನುಂಟು ಮಾಡಿದ ಸದಸ್ಯರನ್ನು ರಾಜ್ಯಪಾಲರು ಅಮಾನತುಗೊಳಿಸಿ ಭಾಷಣ ಮಾಡಿದ್ದರು. ಅಮಾನತುಗೊಳಿಸಿದ ಕ್ರಮವನ್ನು ಸದಸ್ಯರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆದರೆ ನ್ಯಾಯಾಲಯವು ರಾಜ್ಯಪಾಲರ ಕ್ರಮವನ್ನು ಎತ್ತಿಹಿಡಿದಿತ್ತು.

ಅಲ್ಲದೆ ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಎಂ.ರಾಮಾಜೋಯಿಸ್ ಅವರು ಜಾರ್ಖಂಡ್ ಮತ್ತು ಬಿಹಾರದ ರಾಜ್ಯಪಾಲರಾಗಿದ್ದಾಗ ಇದೇ ರೀತಿ ಭಾಷಣದ ಅಂಶಗಳನ್ನು ಓದದೆ ಹೊರಹೋದ ಪ್ರಸಂಗ ನಡೆದಿತ್ತು. ಧರ್ಮವೀರ ಅವರು ಮಹಾರಾಷ್ಟ್ರ ರಾಜ್ಯಪಾಲರಾಗಿದ್ದಾಗ ಇದೇ ರೀತಿ ಮಾಡಿದ್ದರು ಎಂದು ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.