ADVERTISEMENT

`ಭಿನ್ನರನ್ನು ಬಾಣಲೆಗೆ ಹಾಕಿ ಹುರಿಯುತ್ತೇವೆ'

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಸುವರ್ಣ ವಿಧಾನಸೌಧ (ಬೆಳಗಾವಿ): `ಬುಧವಾರ ನಡೆಯಲಿರುವ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಭಿನ್ನರನ್ನೆಲ್ಲ ಬಾಣಲೆಗೆ ಹಾಕಿ ಹುರಿಯುತ್ತೇವೆ' ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಗುಡುಗು ಹಾಕಿದರು.

ವಿಧಾನ ಪರಿಷತ್ತಿನ ಮೊಗಸಾಲೆಯಲ್ಲಿ ಬಿಜೆಪಿ ಹಿರಿಯ ಸದಸ್ಯರೊಂದಿಗೆ ಮಂಗಳವಾರ ಅನೌಪಚಾರಿಕ ಸಭೆ ನಡೆಸಿದ ಅವರು, ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. `ಕೆಲವು ತಿಂಗಳಿಂದ ಎಲ್ಲ ಪಕ್ಷಗಳಲ್ಲೂ ನೈತಿಕತೆ ಮತ್ತು ಶಿಸ್ತು ಕಣ್ಮರೆಯಾಗುತ್ತಾ ಬಂದಿದೆ. ಅವುಗಳನ್ನು ಪಕ್ಷದಲ್ಲಿ ಮತ್ತೆ ತರಬೇಕು ಎಂಬ ತೀರ್ಮಾನಕ್ಕೆ ಬಿಜೆಪಿ ಬಂದಿದೆ. ಈ ನಿರ್ಧಾರದ ಫಲಶ್ರುತಿ ಏನೆಂಬುದು ಸದ್ಯದಲ್ಲೇ ನಿಮಗೆ ಗೊತ್ತಾಗಲಿದೆ' ಎಂದರು.

`ಪಕ್ಷದಿಂದ ಎಲ್ಲ ಸೌಲಭ್ಯವನ್ನೂ ಪಡೆದವರು ನಂತರ ಪಕ್ಷದ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಇದೊಂದು ದೊಡ್ಡ ವಿಪರ್ಯಾಸ. ಬಿಜೆಪಿಯಲ್ಲಿ ಕೆಲವು ತಿಂಗಳ ಹಿಂದಿನವರೆಗೆ ಏಕವ್ಯಕ್ತಿ ಕೇಂದ್ರೀಕೃತ ನಿರ್ಧಾರಗಳು ಹೊರಹೊಮ್ಮುತ್ತಿದ್ದವು. ಅದರ ಫಲವನ್ನು ನಾವು ಉಂಡಿದ್ದೇವೆ.

ಇನ್ನು ಮುಂದೆ ಪಕ್ಷದ ಹಿರಿಯರು ಒಟ್ಟಾಗಿ ಸಾಮೂಹಿಕ ತೀರ್ಮಾನ ಕೈಗೊಳ್ಳಲಿದ್ದಾರೆ' ಎಂದು ವಿವರಿಸಿದರು. `ಕೆಜೆಪಿ ಸಮಾವೇಶದಲ್ಲಿ ವೇದಿಕೆ ಏರಿದವರನ್ನು ಮಾತ್ರವಲ್ಲ, ಬಿಎಸ್‌ಆರ್ ಕಾಂಗ್ರೆಸ್ ಜೊತೆ ಗುರುತಿಸಿಕೊಂಡ ಶಾಸಕರ ವಿರುದ್ಧವೂ ಕ್ರಮ ಕೈಗೊಳ್ಳದೆ ಬಿಡುವುದಿಲ್ಲ' ಎಂದು ಸ್ಪಷ್ಟವಾಗಿ ತಿಳಿಸಿದರು.

ಸಂಕೇಶ್ವರ ವಿರುದ್ಧ ಆಕ್ರೋಶ: `ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ವಿಜಯ ಸಂಕೇಶ್ವರ ಅವರು ಕದ್ದು-ಮುಚ್ಚಿ ರಾಜೀನಾಮೆ ಕೊಟ್ಟಿದ್ದೇಕೆ. ಅಂತಹ ಯಾವ ಸನ್ನಿವೇಶ ಇತ್ತು ಎಂದು ಸದಾನಂದಗೌಡ ಕೇಳಿದರು.

`ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷರು ಮತ್ತು ಹಿರಿಯರ ಜೊತೆ ಅವರು ಚರ್ಚೆ ನಡೆಸಬಹುದಿತ್ತು. ರಾಜೀನಾಮೆ ನೀಡುವಂತಹ ವಾತಾವರಣ ಏನಿತ್ತು ಎಂಬುದನ್ನು ವಿವರಿಸಬಹುದಿತ್ತು' ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT