ADVERTISEMENT

ಭೂಮಿ-ಬ್ಯಾಂಕ್ ಯೋಜನೆ ತ್ವರಿತಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಮೇ 2012, 19:30 IST
Last Updated 29 ಮೇ 2012, 19:30 IST
ಭೂಮಿ-ಬ್ಯಾಂಕ್ ಯೋಜನೆ ತ್ವರಿತಕ್ಕೆ ಸಲಹೆ
ಭೂಮಿ-ಬ್ಯಾಂಕ್ ಯೋಜನೆ ತ್ವರಿತಕ್ಕೆ ಸಲಹೆ   

ಬೆಂಗಳೂರು: `ಭೂಮಿ-ಬ್ಯಾಂಕ್ ಸಮೀಕರಣ~ ಯೋಜನೆಯ ಜಾರಿ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೀವ್ ಚಾವ್ಲಾ ಅವರು ಬ್ಯಾಂಕ್‌ಗಳ ಮುಖ್ಯಸ್ಥರನ್ನು ಕೋರಿದರು.

ವಿಧಾನಸೌಧದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಯ (ಎಸ್‌ಎಲ್‌ಬಿಸಿ) 121ನೇ ಸಭೆಯಲ್ಲಿ ಮಾತನಾಡಿದ ಅವರು, `ಭೂಮಿ-ಬ್ಯಾಂಕ್ ಸಮೀಕರಣ ಯೋಜನೆಯ ಅನುಷ್ಠಾನದಲ್ಲಿ ಕೆಲವು ಬ್ಯಾಂಕ್‌ಗಳು ನಿರೀಕ್ಷಿತ ವೇಗದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾತಿದೆ. ಹೊಸ ಯೋಜನೆಯ ಅನುಷ್ಠಾನವನ್ನು ಬ್ಯಾಂಕ್‌ಗಳು ತ್ವರಿತಗತಿಯಲ್ಲಿ ಮಾಡಬೇಕು~ ಎಂದು ಸಲಹೆ ಮಾಡಿದರು.

ಈ ಯೋಜನೆ ಕೋಲಾರ, ತುಮಕೂರು, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಪ್ರಯೋಗಾರ್ಥವಾಗಿ ಅನುಷ್ಠಾನಕ್ಕೆ ಬಂದ ನಂತರ ಇದರ ಉಪಯೋಗ ಉದ್ದೇಶಿತ ಪ್ರಮಾಣದಲ್ಲಿ ಆಗುತ್ತಿಲ್ಲ ಎಂದು ಚಾವ್ಲಾ ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ಈ ಯೋಜನೆಯ ಅನುಷ್ಠಾನಕ್ಕೆ ವೇಗ ನೀಡುವ ಉದ್ದೇಶದಿಂದ ಎಸ್‌ಎಲ್‌ಬಿಸಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಮೂರು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. 100ಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಲಾಗಿದೆ ಎಂದು ಎಸ್‌ಎಲ್‌ಬಿಸಿ ಸಂಚಾಲಕ ಕೆ.ಪಿ. ಮುರಳೀಧರನ್ ತಿಳಿಸಿದರು.

ಕೋಲಾರ, ತುಮಕೂರು, ಮಂಡ್ಯ ಹಾಗೂ ಮೈಸೂರಿನಲ್ಲಿ ಈ ಯೋಜನೆಯ ಪ್ರಗತಿ ಕುರಿತು ಎಸ್‌ಎಲ್‌ಬಿಸಿ ನಿಗಾ ವಹಿಸಿದೆ ಎಂದು ಹೇಳಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಮಾತನಾಡಿ, `ಸ್ವರ್ಣ ಜಯಂತಿ ಗ್ರಾಮ ಸ್ವರಾಜ್ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಬ್ಯಾಂಕ್‌ಗಳ ಸಹಕಾರ ಇನ್ನಷ್ಟು ಬೇಕು. ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಿದರೆ ಸಾಲದು, ಫಲಾನುಭವಿಗಳನ್ನು ಆರ್ಥಿಕ ಒಳಗೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.

15 ಲಕ್ಷ ಕಿಸಾನ್ ಕ್ರೆಡಿಟ್ ಚೀಟಿಗಳನ್ನು ವಿತರಿಸುವ ಉದ್ದೇಶ ಹೊಂದಲಾಗಿದ್ದರೂ ಅದನ್ನು ಏಳು ಲಕ್ಷಕ್ಕೆ ಸೀಮಿತಗೊಳಿಸಿರುವುದು ಸಲ್ಲದು. ಹಾಗೆಯೇ ಕೃಷಿ ಸಾಲ ನೀಡಿಕೆ ಪ್ರಮಾಣವನ್ನೂ ಹೆಚ್ಚಿಸಬೇಕು ಎಂದು ಅವರು ಹೇಳಿದರು.

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೀರ್ ಹರಿಸಿಂಗ್, ಸಿಂಡಿಕೇಟ್ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎಂ. ಆಂಜನೇಯ ಪ್ರಸಾದ್, ಎಸ್‌ಎಲ್‌ಬಿಸಿ ಅಧ್ಯಕ್ಷ ಎಂ.ಜಿ. ಸಂಘ್ವಿ, ಆರ್‌ಬಿಐನ ಪ್ರಾದೇಶಿಕ ನಿರ್ದೇಶಕಿ ಉಮಾ ಶಂಕರ್, ನಬಾರ್ಡ್‌ನ ಪ್ರಧಾನ ವ್ಯವಸ್ಥಾಪಕ ಎಸ್.ಎನ್.ಎ. ಜಿನ್ನಾ ಮತ್ತಿತರರು  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.