ADVERTISEMENT

ಭೂಸುಧಾರಣಾ ಕಾಯ್ದೆ ಉಲ್ಲಂಘನೆ: ಕೋಟ್ಯಂತರ ಬೆಲೆಯ ಜಮೀನು ವಶ

ಚಂದ್ರಹಾಸ ಹಿರೇಮಳಲಿ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ದಾವಣಗೆರೆ: ರೈತರ ಕೃಷಿ ಭೂಮಿಯನ್ನು ಕಾನೂನುಬಾಹಿರವಾಗಿ ಖರೀದಿಸಿದ ಭೂಗಳ್ಳರ ವಿರುದ್ಧ ಜಿಲ್ಲೆಯ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದು, ಎರಡು ತಿಂಗಳ ಅವಧಿಯಲ್ಲಿ  ಕೋಟ್ಯಂತರ ರೂಪಾಯಿ ಬೆಲೆ ಬಾಳುವ 100 ಎಕರೆಗೂ ಹೆಚ್ಚು ಕೃಷಿ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಭೂಹಗರಣ ಪ್ರಕರಣಗಳು ರಾಜ್ಯದ ಹಲವೆಡೆ ಸಂಚಲನ ಸೃಷ್ಟಿಸಿರುವ ಈ ಸಂದರ್ಭದಲ್ಲಿ, ಇತ್ತ ಜಿಲ್ಲೆಯಲ್ಲೂ ಕೃಷಿಕರಲ್ಲದವರು ಕರ್ನಾಟಕ ಭೂ ಸುಧಾರಣಾ ಕಾಯ್ದೆಯನ್ನು ಉಲ್ಲಂಘಿಸಿ ಕೃಷಿ ಭೂಮಿಯನ್ನು ಖರೀದಿಸುವ ಮೂಲಕ ಸದ್ದಿಲ್ಲದೇ ಭೂ ಕಬಳಿಕೆಯಲ್ಲಿ ತೊಡಗಿರುವ ಅಂಶ ಬೆಳಕಿಗೆ ಬಂದಿದೆ.

ಕರ್ನಾಟಕ ಭೂ ಸುಧಾರಣೆ ಕಾಯ್ದೆ 79 `ಎ~ ಪ್ರಕಾರ ಯಾವುದೇ ವ್ಯಕ್ತಿ ಕೃಷಿ ಭೂಮಿ ಖರೀದಿಸಬೇಕಾದರೆ, ಆತನ ಕುಟುಂಬದ ಕೃಷಿಯೇತರ ಮೂಲಗಳ ಒಟ್ಟು ಆದಾಯ ಎರಡು ಲಕ್ಷ ರೂ ಮೀರುವಂತಿಲ್ಲ.

ಭೂಮಿ ಖರೀದಿಸುವ ಮುನ್ನ ಐದು ವರ್ಷಗಳ ಸರಾಸರಿ ಆದಾಯದ ಸಮಂಜಸ ಮಾಹಿತಿ ಒದಗಿಸಿ ಸಂಬಂಧಿಸಿದ ತಹಶೀಲ್ದಾರ್ ಅವರಿಂದ ಆದಾಯ ದೃಢೀಕರಣ ಪಡೆದುಕೊಳ್ಳಬೇಕು. ನೋಂದಣಿಯ ನಂತರ ಉಪ ವಿಭಾಗಾಧಿಕಾರಿ ಆದಾಯದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಮಾನ್ಯ ಮಾಡಿದ ನಂತರ ಖರೀದಿಸಿದ ಜಮೀನು ಖಾತೆಯಾಗುತ್ತದೆ.

ಆತ ಹಿಂದೆ ಕೃಷಿಕನಾಗಿರದಿದ್ದರೆ ಜಮೀನು ಖರೀದಿಸುವ ಮುನ್ನ ಆದಾಯ ವಿವರ ಸಲ್ಲಿಸಿ, ಕಲಂ 80ರ ಪ್ರಕಾರ ಉಪ ವಿಭಾಗಾಧಿಕಾರಿಯ ಪೂರ್ವಾನುಮತಿ ಪಡೆಯಬೇಕು. 79 `ಬಿ~ ಪ್ರಕಾರ ಒಂದೇ ಕುಟುಂಬಕ್ಕೆ ಸೇರದೇ ಇರುವವರು ಕೂಡಿಸಿ ಜಮೀನು ಖರೀದಿಸುವಂತಿಲ್ಲ.

ಇಂತಹ ಎಲ್ಲ ನಿಯಮಗಳನ್ನು ಗಾಳಿಗೆ ತೂರಿರುವ ರಾಜ್ಯದ ವಿವಿಧ ಭಾಗಗಳ ಶ್ರೀಮಂತರು, ಅಧಿಕಾರಿಗಳು, ರಾಜಕಾರಣಿಗಳು ಜಿಲ್ಲೆಯ ರೈತರ ಫಲವತ್ತಾದ ಭೂಮಿಯನ್ನು ಖರೀದಿಸಿದ್ದಾರೆ. ಹೀಗೆ ಭೂಮಿಯನ್ನು ಕಾನೂನು ಬಾಹಿರವಾಗಿ ಖರೀದಿಸಿದವರಲ್ಲಿ ರಾಜ್ಯದ ಆಯಕಟ್ಟಿನ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಮಹಾ ನಿರ್ದೇಶಕ, ನಿವೃತ್ತ ಐಪಿಎಸ್ ಅಧಿಕಾರಿಗಳೂ ಸೇರಿದಂತೆ ಹಲವು ಗಣ್ಯರು ಒಳಗೊಂಡಿರುವ ವಿವರ ಮಾಹಿತಿ ಹಕ್ಕಿನ ಅಡಿ `ಪ್ರಜಾವಾಣಿ~ಗೆ ಲಭ್ಯವಾಗಿದೆ.

`ಭೂ ಸುಧಾರಣಾ ಕಾಯ್ದೆ ಉಲ್ಲಂಘಿಸಿ ರೈತರ ಭೂಮಿ ಖರೀದಿಸಿದ ಸಾಕಷ್ಟು ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿವೆ. ಜಿಲ್ಲೆಯ ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ಹರಿಹರ ತಾಲ್ಲೂಕಿನ ವಿವಿಧ ಗ್ರಾಮಗಳ ಸರ್ವೇ ನಂಬರ್‌ಗಳಲ್ಲಿ ಅಕ್ರಮವಾಗಿ ಖರೀದಿಸಿದ ಸಾಕಷ್ಟು ಭೂಮಿಯನ್ನು ಈಗಾಗಲೇ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಇನ್ನು ಹಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ನಿಯಮ ಉಲ್ಲಂಘಿಸಿದ ಎಲ್ಲ ಜಮೀನುಗಳನ್ನೂ ಶೀಘ್ರ ವಶಕ್ಕೆ ಪಡೆಯಲಾಗುವುದು~ ಎನ್ನುತ್ತಾರೆ ಹಿರಿಯ ಉಪ ವಿಭಾಗಾಧಿಕಾರಿ ಮಹಾಂತೇಶ್ ಬೀಳಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.