ADVERTISEMENT

ಭೂ ಕಬಳಿಕೆ ವಿರುದ್ಧ ಕ್ರಮ ಕೈಗೊಳ್ಳಿ: ಭಾರದ್ವಾಜ್‌

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST
ಭಾರತೀಯ ಅಂತರರಾಷ್ಟ್ರೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯು ನಗರದ ನಿಮ್ಹಾನ್ಸ್‌ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ ಸಾಧಕರಿಗೆ ‘ಲೆಜೆಂಡ್ಸ್‌ ಆಫ್‌ ಬೆಂಗಳೂರು’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಅವರು ಪ್ರಶಸ್ತಿ ಪುರಸ್ಕೃತರೊಂದಿಗೆ ಮಾತನಾಡಿದರು. ಪ್ರಶಸ್ತಿ ಪಡೆದ ಕೆನರಾ ಬ್ಯಾಂಕ್‌ ಅಧ್ಯಕ್ಷ ಆರ್‌.ಕೆ.ದುಬೆ, ಜ್ಞಾನ ಟ್ರಸ್ಟ್‌ ಟ್ರಸ್ಟಿ ನೈನಾ ಗಾಡಿಯಾ, ಮಂತ್ರಿ ಡೆವಲಪರ್ಸ್‌ ಕಂಪೆನಿಯ ಅಧ್ಯಕ್ಷ ಸುಶೀಲ್‌ ಮಂತ್ರಿ, ಶೋಭಾ ಡೆವೆಲಪರ್ಸ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಜೆ.ಸಿ.ಶರ್ಮಾ, ಸತ್ವ ಸಮೂಹದ ನೀರು ಅಗರವಾಲ್‌ ಚಿತ್ರದಲ್ಲಿದ್ದಾರೆ 	– ಪ್ರಜಾವಾಣಿ ಚಿತ್ರ.

ಬೆಂಗಳೂರು: ‘ರಾಜ್ಯದಲ್ಲಿ ಸರ್ಕಾರಿ ಭೂಮಿಯ ಕಬಳಿಕೆ ಹಾಗೂ ಅಕ್ರಮ ಕಟ್ಟಡಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಸಮಸ್ಯೆಗಳು ಹೆಚ್ಚಾಗಿದ್ದು, ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಹೇಳಿದರು.

ಭಾರತೀಯ ಅಂತರರಾಷ್ಟ್ರೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯು ನಗರದ ನಿಮ್ಹಾನ್ಸ್‌ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ ಸಾಧಕರಿಗೆ ‘ಲೆಜೆಂಡ್ಸ್‌ ಆಫ್‌ ಬೆಂಗಳೂರು’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಬೆಂಗಳೂರು ಸುಂದರವಾದ ನಗರ. ಇಲ್ಲಿ ಒಳ್ಳೆಯ ವಾತಾವರಣವಿದೆ. ಹಸಿರು ತುಂಬಿದೆ. ಆದರೆ, ಇಲ್ಲಿ ಜನರು ಬಡತನ, ಹಸಿವಿನಿಂದ ಕಂಗೆಟ್ಟಿದ್ದಾರೆ. ಜನರಿಗೆ ಉತ್ತಮವಾದ, ಆರೋಗ್ಯವಾದ ಜೀವನವನ್ನು ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ, ಸರ್ಕಾರ ಜನರ ಹಕ್ಕುಗಳಾದ ಉತ್ತಮ ರಸ್ತೆ, ವಸತಿ ಸೌಲಭ್ಯ ಕಲ್ಪಿಸಿಲ್ಲ’ ಎಂದು ಹೇಳಿದರು.

‘ನಗರದಲ್ಲಿ ಜನರು ಡೆಂಗೆ, ಹಂದಿ ಜ್ವರದಂತಹ ಮಾರಕ ರೋಗಗಳಿಂದ ಬಳಲಿದ್ದಾರೆ. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಔಷಧಿಗಳ ಸಂಶೋಧನಾ ಕೇಂದ್ರವನ್ನು ತೆರೆಯಲು ವಿಶ್ವ ಆರೋಗ್ಯ ಸಂಸ್ಥೆಯವರು ಒಂದು ಯೋಜನೆಯನ್ನು ರೂಪಿಸಿದ್ದರು. ಆದರೆ, ಬಿಬಿಎಂಪಿ ಯೋಜನೆಗೆ ಇದುವರೆಗೂ ಒಪ್ಪಿಗೆಯನ್ನೇ ನೀಡಿಲ್ಲ.   ನನ್ನ ಅಧಿಕಾರಾವಧಿಯಲ್ಲಿ ಈ ಯೋಜನೆಗೆ ಚಾಲನೆ ನೀಡಬೇಕೆಂಬುದು ನನ್ನ ಕನಸು’ ಎಂದರು.

‘ನವದೆಹಲಿ ಮತ್ತು ಮುಂಬೈ ಸುಂದರ ನಗರಗಳು. ಆದರೆ, ಅಲ್ಲಿ ನಡೆಯುತ್ತಿರುವ ಅಕ್ರಮ ಕಟ್ಟಡಗಳ ನಿರ್ಮಾಣ, ಸರ್ಕಾರಿ ಭೂಮಿಯ ಕಬಳಿಕೆಯಿಂದ ಆ ನಗರಗಳು ಇಂದು ತಮ್ಮ ಸುಂದರತೆಯನ್ನು ಕಳೆದುಕೊಂಡಿವೆ. ಮಳೆ ಬಂದರೆ, ಪ್ರವಾಹ ಉಂಟಾಗುತ್ತದೆ. ಸಂಚಾರ ದಟ್ಟಣೆಯಿಂದ ನಗರ ಪ್ರವೇಶ ಕಷ್ಟಸಾಧ್ಯವಾಗಿದೆ. ಇದೇ ರೀತಿಯ ಸಮಸ್ಯೆಯನ್ನು ಬೆಂಗಳೂರು ನಗರವೂ  ಎದುರಿಸುತ್ತಿದೆ’ ಎಂದು ಹೇಳಿದರು.

‘ಕಟ್ಟಡ ನಿರ್ಮಾಣಗಾರರು ಒಳ್ಳೆಯ ಮತ್ತು ನಗರಕ್ಕೆ ಹೊಂದಿಕೊಳ್ಳುವಂತಹ ಕಟ್ಟಡಗಳನ್ನು ನಿರ್ಮಾಣ ಮಾಡಲು ಗಮನ ಹರಿಸಬೇಕು. ನಗರದ ಮತ್ತು ರಾಜ್ಯದ ಅಭಿವೃದ್ಧಿ ಅವರ ಮೇಲೂ  ಅವಲಂಬಿತವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು’ ಎಂದರು.

‘ರಾಜಭವನದ ಬಾಗಿಲು ಎಲ್ಲರಿಗೂ ಎಲ್ಲಾ ಕಾಲಕ್ಕೂ ತೆರೆದಿದೆ. ರಾಜಭವನದ ಒಂದು ಕೋಣೆಯಲ್ಲಿ ಮಾತ್ರ ನಾನಿರುವುದು. ನಾನು ಒಂದು ಫೈವ್‌ ಸ್ಟಾರ್‌ ಹೋಟೆಲ್‌ ನಡೆಸುತ್ತಿದ್ದೇನೆ ಎಂಬ ಭಾವ ಮೂಡುತ್ತದೆ’ ಎಂದು ಅವರು ನಗೆ ಚಟಾಕಿ ಹಾರಿಸಿದರು.

ಶಿಸ್ತು ಮರೆತ ಸರ್ಕಾರ
ರಾಜ್ಯ ಸರ್ಕಾರ ಶಿಸ್ತಿನಿಂದ ಕೆಲಸ ನಿರ್ವಹಿಸುತ್ತಿಲ್ಲ. ಜನರಿಗೆ ಉತ್ತಮ ಆರೋಗ್ಯ ಮತ್ತು ಸೂಕ್ತ ವಸತಿ ಸೌಲಭ್ಯ ನೀಡಲು ಸರ್ಕಾರ ಗಮನ ಹರಿಸು­ತ್ತಿಲ್ಲ. ಮೂಲ­ಸೌಕರ್ಯ­ಗಳನ್ನು ಒದಗಿ­ಸಲು ಸರ್ಕಾರ ವಿಫಲ­ವಾಗಿದೆ.
ಎಚ್‌.ಆರ್‌.ಭಾರದ್ವಾಜ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.