ADVERTISEMENT

ಭೂ ಹಗರಣದ ಸಮಗ್ರ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:25 IST
Last Updated 13 ಜನವರಿ 2012, 19:25 IST

ಬೆಂಗಳೂರು: ಈಗಿನ ಬಿಜೆಪಿ ಸರ್ಕಾರ ಮತ್ತು ಹಿಂದೆ ವಿವಿಧ ಪಕ್ಷಗಳ ಸರ್ಕಾರಗಳ ಅವಧಿಯಲ್ಲಿ ನಡೆದ ಎಲ್ಲ ಭೂ ಹಗರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಭಾರತ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ (ಸಿಪಿಎಂ) ಆಗ್ರಹಿಸಿದೆ.

ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಸಿಪಿಎಂ ರಾಜ್ಯ ಸಮ್ಮೇಳನದಲ್ಲಿ ಅಂಗೀಕರಿಸಿದ ನಿರ್ಣಯಗಳನ್ನು ಕುರಿತು ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಪಿಎಂ ರಾಜ್ಯ ಮಂಡಳಿಯ ನೂತನ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ ಅವರು, `ರಾಜ್ಯ ಸರ್ಕಾರದಲ್ಲಿ ಹಾಲಿ ಸಚಿವರಾಗಿರುವ ಮತ್ತು ಹಿಂದೆ ಸಚಿವರಾಗಿದ್ದ ಎಂಟು ಮಂದಿ ಭೂ ಹಗರಣದ ಆರೋಪ ಎದುರಿಸುತ್ತಿದ್ದಾರೆ. ಭೂ ಹಗರಣಗಳು ಈ ವ್ಯಕ್ತಿಗಳಿಗೆ ಸೀಮಿತವಾಗಿಲ್ಲ, ಬಿಜೆಪಿ ಮತ್ತು ಸಂಘ ಪರಿವಾರ ಕೂಡ ಪಾಲುದಾರಿಕೆ ಹೊಂದಿದೆ~ ಎಂದು ಆರೋಪಿಸಿದರು.

ಬಿಜೆಪಿಯಷ್ಟೇ ಅಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲವರೂ ಭೂ ಹಗರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. ಕೈಗಾರಿಕೆಗಳು ಮತ್ತು ವಸತಿ ಬಡಾವಣೆಗಳ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ರಾಜಕಾರಣಿಗಳು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು ವೈಯಕ್ತಿಕ ಲಾಭ ಮಾಡಿಕೊಳ್ಳುವುದನ್ನು ವಿರೋಧಿಸಲು ಪಕ್ಷ ನಿರ್ಧರಿಸಿದೆ. ಇಂತಹ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲ ರಾಜಕಾರಣಿಗಳು, ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿ ಹೋರಾಟ ನಡೆಸಲಾಗುವುದು ಎಂದರು.

ಮಠಗಳಲ್ಲಿ ಪಂಕ್ತಿಭೇದವನ್ನು ವಿರೋಧಿಸಿ ಗಣರಾಜ್ಯೋತ್ಸವ ದಿನ (ಜನವರಿ 26) ಪಕ್ಷದ ವತಿಯಿಂದ ಉಡುಪಿ ಶ್ರೀಕೃಷ್ಣ ಮಠದ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು. ಪಕ್ಷ ಸಂಗ್ರಹಿಸಿರುವ ಮಾಹಿತಿ ಪ್ರಕಾರ ರಾಜ್ಯದ 250ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಪಂಕ್ತಿಭೇದ ಆಚರಣೆಯಲ್ಲಿದೆ. ಮುಖ್ಯವಾಗಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಈ ಪದ್ಧತಿ ಇದೆ. ಸಂವಿಧಾನವನ್ನು ಒಪ್ಪಿಕೊಂಡ ದಿನ ಉಡುಪಿಯಿಂದಲೇ ಹೋರಾಟ ಆರಂಭಿಸಲು ಪಕ್ಷದ ರಾಜ್ಯ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

33 ನಿರ್ಣಯ: ಬೆಲೆ ಏರಿಕೆ, ಗುತ್ತಿಗೆ ಕಾರ್ಮಿಕರ ಪದ್ಧತಿ, ಸರ್ಕಾರಿ ಕಂಪೆನಿಗಳ ಖಾಸಗೀಕರಣದ ವಿರುದ್ಧ ಫೆಬ್ರುವರಿ 28ರಂದು ಪಕ್ಷದ ವತಿಯಿಂದ ನಡೆಸುವ ರಾಷ್ಟ್ರವ್ಯಾಪಿ ಮುಷ್ಕರವನ್ನು ಯಶಸ್ವಿಗೊಳಿಸುವುದು ಸೇರಿದಂತೆ ರಾಜ್ಯ ಸಮ್ಮೇಳನದಲ್ಲಿ 33 ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದು ವಿವರಿಸಿದರು.

ಅಧಿಕಾರಕ್ಕೆ ಬಂದ ನಂತರ ರಾಜ್ಯ ಸರ್ಕಾರದ ಸಾಲವನ್ನು ಒಂದು ಲಕ್ಷ ಕೋಟಿ ರೂಪಾಯಿಯಷ್ಟು ಹೆಚ್ಚಿಸಿರುವುದೇ ಬಿಜೆಪಿ ಸರ್ಕಾರದ ಸಾಧನೆ. ಬಿಜೆಪಿ ಮುಖಂಡರು ಪರಸ್ಪರ ಕಿತ್ತಾಟದಲ್ಲಿ ಮುಳುಗಿರುವುದರಿಂದ ರಾಜ್ಯದ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ ಎಂದು ಶ್ರೀರಾಮ ರೆಡ್ಡಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.