ADVERTISEMENT

ಭ್ರಷ್ಟರ ವಿಚಾರಣೆ: ಅನುಮತಿ ವಿಳಂಬಕ್ಕೆ ಗರಂ

ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಅಸಮಾಧಾನ ಹೊರಹಾಕಿದ ಲೋಕಾಯುಕ್ತ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2013, 19:30 IST
Last Updated 22 ಡಿಸೆಂಬರ್ 2013, 19:30 IST

ಬೆಂಗಳೂರು: ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಮತ್ತಿತರ ಆರೋಪ ಎದುರಿಸು­ತ್ತಿರುವ ಸರ್ಕಾರಿ ನೌಕರರು ಮತ್ತು ಚುನಾಯಿತ ಪ್ರತಿನಿಧಿಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ವಿಷಯದಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಲೋಕಾಯುಕ್ತ ನ್ಯಾಯಮೂರ್ತಿ­ ವೈ.ಭಾಸ್ಕರ್‌ ರಾವ್‌ ಅವರು, ರಾಜ್ಯ ­ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಬಿಸಿ ಮುಟ್ಟಿಸಿದ್ದಾರೆ.

ಒಟ್ಟು 93 ಪ್ರಕರಣಗಳು ಸರ್ಕಾರದ ಅನುಮತಿಗೆ ಕಾದಿವೆ. ಲಂಚ ಪಡೆ­ಯುತ್ತಿರುವಾಗ ಸಿಕ್ಕಿಬಿದ್ದ ಆರೋಪಕ್ಕೆ ಸಂಬಂಧಿಸಿದಂತೆ 58 ಪ್ರಕರಣಗಳಲ್ಲಿ ಆರೋಪಿಗಳ ವಿಚಾ­ರಣೆಗೆ ಸರ್ಕಾರ ಅನುಮತಿ ನೀಡಬೇಕಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಎದುರಿಸು­ತ್ತಿರುವ 21 ಸರ್ಕಾರಿ ಅಧಿಕಾರಿ­ಗಳ ವಿರುದ್ಧ ಆರೋಪಪಟ್ಟಿ ಸಲ್ಲಿಕೆಗೆ ಅನುಮತಿ ಕೋರಿರುವ ಪ್ರಸ್ತಾವಗಳನ್ನು ಸರ್ಕಾರ ತನ್ನ ಬಳಿಯೇ ಇರಿಸಿಕೊಂಡಿದೆ. ಅಧಿಕಾರ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದ 14 ಪ್ರಕರಣಗಳಲ್ಲೂ ಅನುಮತಿ ನೀಡುವ ವಿಚಾರದಲ್ಲೂ ಸರ್ಕಾರ ಸುಮ್ಮನಿದೆ.

25 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ಲೋಕಾಯುಕ್ತ ಪೊಲೀಸರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಒಂದು ವರ್ಷಕ್ಕೂ ಹೆಚ್ಚು ಅವಧಿ ಮುಗಿದಿದೆ. 24 ಪ್ರಕರಣಗಳಲ್ಲಿ ಪ್ರಸ್ತಾವ ಸಲ್ಲಿಕೆ­ಯಾಗಿ ಆರರಿಂದ 12 ತಿಂಗಳಾಗಿದೆ. 33 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿ­ಸಲು ಅನುಮತಿ ಕೋರಿ ತನಿಖಾಧಿಕಾರಿ­ಗಳು ಪ್ರಸ್ತಾವ ಸಲ್ಲಿಸಲು ಮೂರರಿಂದ ಆರು ತಿಂಗಳಾಗಿದೆ. 13 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲು ಒಪ್ಪಿಗೆ ನೀಡುವಂತೆ ಕೇಳಿಸುವ ಪ್ರಸ್ತಾವಗಳು ಇತ್ತೀಚೆಗಷ್ಟೆ (ಮೂರು ತಿಂಗಳಿಂದ ಈಚೆಗೆ) ಸರ್ಕಾರಕ್ಕೆ ಸಲ್ಲಿಕೆಯಾಗಿವೆ.

ಮುಖ್ಯ ಕಾರ್ಯದರ್ಶಿಗೆ ಪತ್ರ: ಸರ್ಕಾರ ವಿಳಂಬ ನೀತಿ ಅನುಸರಿ­ಸುತ್ತಿ­ರುವುದಕ್ಕೆ ಲೋಕಾಯುಕ್ತ ನ್ಯಾಯ­ಮೂರ್ತಿ ಡಾ.ವೈ.ಭಾಸ್ಕರ್‌ ರಾವ್‌ ಅವರು ಗರಂ ಆಗಿದ್ದಾರೆ. ನೇರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಅವರಿಗೆ ಪತ್ರ ಬರೆದು ಅಸಮಾಧಾನ ಹೊರ­ಹಾಕಿ­ದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಚಾರಣೆಗೆ ಅನುಮತಿ ನೀಡುವ ಅಧಿಕಾರ ಹೊಂದಿರುವ ಸರ್ಕಾರದ ಅಧಿಕಾರಿಗಳು (ಸಕ್ಷಮ ಪ್ರಾಧಿಕಾರಿ­ಗಳು), ಲೋಕಾಯುಕ್ತ ಪೊಲೀಸರು ಕಳುಹಿಸುವ ಪ್ರಸ್ತಾವವನ್ನು ಬಾಕಿ ಇರಿಸಿ­ಕೊಂಡು ಕಾಲಹರಣ ಮಾಡುತ್ತಿರುವ ಕುರಿತು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಬಾಕಿ ಇರುವ ಪ್ರಸ್ತಾವಗಳನ್ನು ಕೂಡಲೇ ಪರಿಶೀಲಿಸಿ, ತ್ವರಿತವಾಗಿ ವಿಚಾರಣೆಗೆ ಒಪ್ಪಿಗೆ ನೀಡುವಂತೆ ಲೋಕಾಯುಕ್ತರು ಕೋರಿದ್ದಾರೆ ಎಂದು ಗೊತ್ತಾಗಿದೆ.

ಮತ್ತೆ ಹಳೆಯ ಹಾದಿಗೆ: ಜುಲೈ ವೇಳೆಗೆ ಸರ್ಕಾರದಲ್ಲಿ ಬಾಕಿ ಇದ್ದ ಪ್ರಕರಣಗಳ ಸಂಖ್ಯೆ 150ಕ್ಕೂ ಹೆಚ್ಚಿತ್ತು. ಆಪಾದಿತ ಸಾರ್ವಜನಿಕ ನೌಕರರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಿ­ಸಲು ಅನುಮತಿ ನೀಡುವ ವಿಚಾರದಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿ­ಸುತ್ತಿ­ರುವು­ದಕ್ಕೆ ಲೋಕಾಯುಕ್ತರು ಬಹಿರಂಗ­ವಾಗಿಯೇ ಅಸಮಾಧಾನ ವ್ಯಕ್ತ­ಪಡಿಸಿದ್ದರು.

ಅದರ ಬೆನ್ನಿಗೇ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆರೋಪಪಟ್ಟಿ ಸಲ್ಲಿಕೆಗೆ ಅನುಮತಿ ನೀಡುವ ವಿಚಾರದಲ್ಲಿ ಬಾಕಿ ಇರುವ ಎಲ್ಲ ಕಡತಗಳನ್ನೂ ತ್ವರಿತವಾಗಿ ವಿಲೇ­ವಾರಿ ಮಾಡುವುದಾಗಿ ಪ್ರಕಟಿಸಿದ್ದರು. ಜುಲೈ ಎರಡನೇ ವಾರದಲ್ಲಿ 70ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡಲಾಗಿತ್ತು.

ಆದರೆ, ನಾಲ್ಕು ತಿಂಗಳಿನಿಂದ ಈಚೆಗೆ ಮತ್ತೆ ಸರ್ಕಾರ ವಿಳಂಬ ಧೋರಣೆಯತ್ತ ಸಾಗಿತ್ತು. ಅನುಮತಿ ಬಾಕಿ ಇರುವ ಬಹುತೇಕ ಪ್ರಕರಣಗಳಲ್ಲಿ ಆರೋಪಿತ ನೌಕರರು, ಚುನಾಯಿತ ಪ್ರತನಿಧಿಗಳೇ ಸಕ್ಷಮ ಪ್ರಾಧಿಕಾರಿಗಳಿಗೆ ನೇರವಾಗಿ ಮನವಿ ಸಲ್ಲಿಸಿ, ಪ್ರಸ್ತಾವವನ್ನು ತಿರಸ್ಕರಿ­ಸು­ವಂತೆ ಕೋರಿದ್ದಾರೆ. ಈ ಮನವಿ­ಗಳನ್ನೇ ವಿಳಂಬ ಧೋರಣೆಗೆ ಪೂರಕ-­ವಾಗಿ ಬಳಸಿಕೊಳ್ಳಲಾಗುತ್ತಿದೆ.

ಪತ್ರ ಬರೆದು ಸುಸ್ತಾದರು: ಕೆಲವು ಪ್ರಕ­ರಣ­ಗಳಲ್ಲಿ ಲೋಕಾಯುಕ್ತ ಪೊಲೀಸರು ತನಿಖೆ ಪೂರ್ಣಗೊಳಿಸಿ ವರ್ಷಗಳೇ ಕಳೆ­ದರೂ ಆರೋಪಪಟ್ಟಿ ಸಲ್ಲಿಸಲು ಸಾಧ್ಯ­ವಾಗಿಲ್ಲ. ಸದ್ಯ ಸರ್ಕಾರದ ಅನುಮತಿಗೆ ಕಾದಿರುವ ಅತ್ಯಂತ ಹಳೆಯ ಪ್ರಕರಣ ಮುಖ್ಯ ಎಂಜಿನಿಯರ್‌ ಜಿ.ಗುರು­ಪ್ರಸಾದ್‌ ಅವರದ್ದು. ಅವರ ವಿರುದ್ಧ ಆರೋಪ­ಪಟ್ಟಿ ಸಲ್ಲಿಸಲು ಅನುಮತಿ ಕೋರಿರುವ ಕಡತ ನಾಲ್ಕು  ವರ್ಷಗಳಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲೇ ಇದೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿ­ರುವ ಆರೋಪದ ಮೇಲೆ 2007ರ ಡಿಸೆಂಬರ್‌ನಲ್ಲಿ ಗುರುಪ್ರಸಾದ್‌ ವಿರುದ್ಧ ದಾಳಿ ನಡೆದಿತ್ತು. ತನಿಖೆ ಪೂರ್ಣ­ಗೊಳಿಸಿದ ಲೋಕಾಯುಕ್ತ ಪೊಲೀಸರು ಅಕ್ಟೋಬರ್‌ 22ರಂದು ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಿದ್ದರು. 2010ರ ಮೇ 15, 2012ರ ಫೆಬ್ರುವರಿ 18, ಆಗಸ್ಟ್ 28, ಪ್ರಸಕ್ತ ವರ್ಷದ ಏಪ್ರಿಲ್‌ 5, ಸೆಪ್ಟೆಂಬರ್‌ 25 ಹೀಗೆ ಐದು ನೆನಪೋಲೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಬರೆದ ಲೋಕಾಯುಕ್ತ ಪೊಲೀಸರು, ಕಡತ ಬಾಕಿ ಇರುವ ಬಗ್ಗೆ ಎಚ್ಚರಿಸಿದ್ದಾರೆ. ಆದರೂ, ಯಾವುದೇ ಪ್ರತಿಕ್ರಿಯೆಯೂ ಬಂದಿಲ್ಲ.

ಸುಪ್ರೀಂಕೋರ್ಟ್‌ ಆದೇಶವೂ ನಿರ್ಲಕ್ಷ್ಯ
ಆರೋಪಿತ ಸಾರ್ವಜನಿಕ ನೌಕರರ ವಿರುದ್ಧ ವಿಚಾರಣೆ ಆರಂಭಿಸಲು ಅನುಮತಿ ನೀಡುವಂತೆ ಕೋರಿ ತನಿಖಾ ಸಂಸ್ಥೆಗಳು ಸಲ್ಲಿಸುವ ಪ್ರಸ್ತಾವವನ್ನು ಮೂರು ತಿಂಗಳೊಳಗೆ ವಿಲೇವಾರಿ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಹಲವು ಬಾರಿ ಹೇಳಿದೆ. 1998ರಲ್ಲಿ ವಿನೀತ್‌ ನಾರಾಯಣ್‌ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದ ಆದೇಶದಲ್ಲಿ ಸುಪ್ರೀಂಕೋರ್ಟ್‌ ಈ ವಿಷಯವನ್ನು ಸ್ಪಷ್ಟಪಡಿಸಿತ್ತು. ಆ ನಂತರ ಹಲವು ಬಾರಿ ನ್ಯಾಯಾಲಯ ಈ ಮಾತನ್ನು ಪುನರುಚ್ಛರಿಸಿತ್ತು.

ಸರ್ಕಾರಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಪ್ರಸ್ತಾವಗಳನ್ನು ಮೂರು ತಿಂಗಳೊಳಗೆ ವಿಲೇವಾರಿ ಮಾಡಬೇಕು ಎಂದು ಸೂಚಿಸಿ 2011ರಲ್ಲಿ ಆಗಿನ ಮುಖ್ಯ ಕಾರ್ಯದರ್ಶಿ ಎಸ್‌.ವಿ.ರಂಗನಾಥ್‌ ಅವರು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದ್ದರು. ಈ ಸುತ್ತೋಲೆಯಲ್ಲೂ ವಿನೀತ್‌ ನಾರಾಯಣ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ಆದೇಶವನ್ನು ನೆನಪಿಸಿದ್ದರು.

ADVERTISEMENT

ಅನುಮತಿಗೆ ಕಾದಿರುವ ಪ್ರಮುಖರ ಪ್ರಕರಣಗಳು

ಐಎಎಸ್‌

ಎಂ.ಕೆ.ಬಲದೇವಕೃಷ್ಣ
ಬಾಬುರಾವ್‌ ಮುಡಬಿ
ಎಸ್‌.ಎಂ.ರಾಜು
ಶಮ್ಲಾ ಇಕ್ಬಾಲ್‌
ಡಾ.ವಿ.ಚಂದ್ರಶೇಖರ್.

ಐಪಿಎಸ್‌
ಡಾ.ಡಿ.ಸಿ.ರಾಜಪ್ಪ.

ಐಎಫ್‌ಎಸ್‌
ಕೆ.ಎಂ.ನಾರಾಯಣಸ್ವಾಮಿ
ಎಚ್‌.ಸಿ.ಕಾಂತರಾಜು.

ತ್ವರಿತ ಕ್ರಮದ ಭರವಸೆ
‘ಆಪಾದಿತ ಸರ್ಕಾರಿ ನೌಕರರು ಮತ್ತು ಚುನಾಯಿತ ಪ್ರತಿನಿಧಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವುದು ವಿಳಂಬವಾಗುತ್ತಿದೆ ಎಂದು ಲೋಕಾಯುಕ್ತರು ಬರೆದಿರುವ ಪತ್ರ ಶನಿವಾರ ನನಗೆ ತಲುಪಿದೆ. ಬಾಕಿ ಇರುವ ಎಲ್ಲ ಪ್ರಸ್ತಾವಗಳನ್ನೂ ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕೌಶಿಕ್‌ ಮುಖರ್ಜಿ ತಿಳಿಸಿದರು.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ವಿಚಾರಣೆಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದ ಕಡತಗಳ ಮಾಹಿತಿ ನೀಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸೂಚನೆ ನೀಡಿದ್ದೇನೆ. ಲೋಕಾಯುಕ್ತರ ಪತ್ರ ಕುರಿತು ಮುಖ್ಯಮಂತ್ರಿಯವರ ಗಮನಕ್ಕೂ ತರುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.