ಮಂಗಳೂರು: ಬೆಳುವಾಯಿಯಲ್ಲಿ ಕ್ಯಾಸನೂರು ಕಾಡಿನ ಕಾಯಿಲೆ ಅಥವಾ ಮಂಗನ ಕಾಯಿಲೆ ವರದಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಅಗತ್ಯ ಸಮೀಕ್ಷೆ ಮತ್ತು ತಪಾಸಣೆಗಳನ್ನು ಮಾಡಿದ್ದು, ಪೂನಾದ ನ್ಯಾಷನಲ್ ಇನ್ಸ್ಟಿಟ್ಯೂಷನ್ ಆಫ್ ವೈರಾಲಜಿಯಲ್ಲಿ ನಡೆದ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಈ ಕಾಯಿಲೆಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಎಚ್. ಶಿವಕುಮಾರ್ ಹೇಳಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ವೆನ್ಲಾಕ್ನಲ್ಲಿ ನಡೆಸಿದ ಎಲಿಸಾ ಪರೀಕ್ಷೆ ಸಂದರ್ಭದಲ್ಲಿ ಮಂಗನಕಾಯಿಲೆಯ ಲಕ್ಷಣಗಳು ಕಂಡು ಬಂದಿದ್ದರೂ ಪೂನಾದ ಪ್ರಯೋಗಾಲಯದಲ್ಲಿ ಇದು ಅಲ್ಲ ಎಂದು ಸಾಬೀತಾಗಿದೆ. ಆದರೂ ಶಂಕಿತ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆಯ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಹೇಳಿದರು.
ಜಗತ್ತಿನಲ್ಲಿ ಕರ್ನಾಟಕದಲ್ಲಿ ಮಾತ್ರ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. 2006ರಲ್ಲಿ ಕೊನೆಯ ಪ್ರಕರಣ ವರದಿಯಾಗಿದೆ. 2010–11ರ ಸಾಲಿನಲ್ಲಿ ಚುಚ್ಚುಮದ್ದು ನೀಡುವುದನ್ನು ನಿಲ್ಲಿಸಲಾಗಿದೆ. ಇದೀಗ ಮತ್ತೆ ಶಂಕಿತ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಚುಚ್ಚುಮದ್ದು ನೀಡಲು ಅಗತ್ಯ ಸೌಕರ್ಯ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಅಲ್ಲದೆ ಕಾಯಿಲೆ ಇರುವ ಅನುಮಾನದಲ್ಲಿ ಎರಡು ತಂಡಗಳು ಕಾರ್ಕಳ, ಉಡುಪಿ, ಮಣಿಪಾಲದಲ್ಲಿ ಸಮೀಕ್ಷೆ ನಡೆಸಿವೆ. ಅದೇ ರೀತಿ ಕಾಡುಗಳಲ್ಲಿ ಸಮೀಕ್ಷೆ ನಡೆಸಿದ್ದು ಎಲ್ಲಿಯೂ ಮಂಗ ಸತ್ತ ವರದಿಯಾಗಿಲ್ಲ. ಕಾಡಿನ ವ್ಯಾಪ್ತಿಯ ಉಣುಗನ್ನು(ಉಣ್ಣು) ತಪಾಸಣೆಗಾಗಿ ಪೂನಾಕ್ಕೆ ಕಳುಹಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಹೈಕೋರ್ಟ್ ಆದೇಶದ ಮೇರೆಗೆ ಪರಿಹಾರ ನೀಡಿರುವ ಕುರಿತು ಮಾತನಾಡಿದ ಅವರು ಏಪ್ರಿಲ್ 7ರೊಳಗೆ ಪರಿಹಾರ ವಿತರಿಸಲಾಗುವುದು. ದಕ್ಷಿಣ ಕನ್ನಡದಲ್ಲಿ 2,204 ಮಂದಿ ಸಂತ್ರಸ್ತರ ಪೈಕಿ ಈಗಾಗಲೇ 1,301 ಮಂದಿಗೆ ಆರ್ಥಿಕ ಪರಿಹಾರ ದೊರೆತಿದೆ.
389 ಮಂದಿಗೆ ತಾಂತ್ರಿಕ ಕಾರಣಗಳಿಂದ ಪರಿಹಾರ ನೀಡಿಕೆ ವಿಳಂಬವಾಗಿದ್ದು ಮುಂದಿನ ದಿನಗಳಲ್ಲಿ ವಿತರಿಸಲಾಗುವುದು.
ಮಾರ್ಚ್ 27ರವರೆಗೆ ಮರು ಸಮೀಕ್ಷೆ ನಡೆಯಲಿದ್ದು ಸಂತ್ರಸ್ತರನ್ನು ಗುರುತಿಸುವ ಕಾರ್ಯ ಮುಂದುವರೆಯಲಿದೆ ಎಂದರು.
ಸಾಮಾನ್ಯವಾಗಿ ಮಂಗಗಳು ಸಾಯುವುದೇ ಕಾಯಿಲೆಯ ಮುನ್ಸೂಚನೆ. ಆದ್ದರಿಂದ ಮಂಗಗಳು ಸತ್ತ ಸುದ್ದಿಯನ್ನು ಆರೋಗ್ಯ ಇಲಾಖೆಗೆ ತಿಳಿಸಿದರೆ ಸತ್ತ ಮಂಗಗಳ ದೇಹದ ಭಾಗಗಳನ್ನು ತೆಗೆದು ಹೆಚ್ಚಿನ ಪರೀಕ್ಷೆಗೆ ಕಳುಹಿಸಿ ಕಾಯಿಲೆಯ ಬಗ್ಗೆ ದೃಢೀಕರಿಸುತ್ತಾರೆ. ಸತ್ತ ಮಂಗಗಳನ್ನು ಸುಟ್ಟು ಐವತ್ತು ಮೀಟರ್ ಸುತ್ತಲೂ ಮೆಲಾಥಿನ್ ಪುಡಿಯನ್ನು ಸಿಂಪಡಿಸಲಾಗುತ್ತದೆ. ಸತತ ಎಂಟು ಹತ್ತು ದಿನಗಳವರೆಗೆ ಬರುವ ಜ್ವರ, ವಿಪರೀತ ತಲೆ ನೋವು, ಕೈ ಕಾಲು ಸೊಂಟ ನೋವು, ವಿಪರೀತ ನಿಶ್ಯಕ್ತಿ, ಕಣ್ಣುಗಳು ಕೆಂಪಾಗುವುದು, ಜ್ವರ ಬಂದು ನಾಲ್ಕಾರು ದಿನಗಳಲ್ಲಿ ಕಣ್ಣು, ಮೂಗು, ಬಾಯಿ, ಗುದ ದ್ವಾರದಿಂದ ರಕ್ತ ಬರುವುದು ಈ ರೋಗದ ಮುಖ್ಯ ಲಕ್ಷಣ. ಕೈಕಾಲು ಸ್ವಾಧೀನ ತಪ್ಪುವುದು, ಎಚ್ಚರ ತಪ್ಪುವುದೂ ಉಂಟು. ಈ ರೋಗ ಉಣುಗುಗಳ ಮೂಲಕ ಹರಡುತ್ತದೆ.
ಮಂಗನ ಕಾಯಿಲೆ ನಿಯಂತ್ರಿಸುವ ಲಸಿಕೆ ಇದೀಗ ಬಂದಿದ್ದು ಇದನ್ನು 6 ವರ್ಷ ಮೇಲ್ಪಟ್ಟ ಎಲ್ಲರೂ ತೆಗೆದುಕೊಳ್ಳಬಹುದು. ಎರಡನೇ ಚುಚ್ಚುಮದ್ದನ್ನು ಹಾಕಿಸಿಕೊಂಡ ಇಪ್ಪತ್ತು ದಿನಗಳ ನಂತರ ರೋಗ ನಿರೋಧಕ ಶಕ್ತಿ ಬರುತ್ತದೆ. ಆದರೆ ಈ ಕಾಯಿಲೆಗೆ ನಿರ್ದಿಷ್ಟ ಔಷಧಿ ಇಲ್ಲ. ಚುಚ್ಚುಮದ್ದನ್ನು ಹಾಕಿಸಿಕೊಳ್ಳುವುದರಿಂದ ಯಾವ ತರಹದ ದುಷ್ಪರಿಣಾಮವೂ ಇರುವುದಿಲ್ಲ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಕಾಯಿಲೆ ಲಕ್ಷಣಗಳೇನು?
ಸಾಮಾನ್ಯವಾಗಿ ಮಂಗಗಳು ಸಾಯುವುದೇ ಕಾಯಿಲೆಯ ಮುನ್ಸೂಚನೆ. ಆದ್ದರಿಂದ ಮಂಗಗಳು ಸತ್ತ ಸುದ್ದಿಯನ್ನು ಆರೋಗ್ಯ ಇಲಾಖೆಗೆ ತಿಳಿಸಿದರೆ ಸತ್ತ ಮಂಗಗಳ ದೇಹದ ಭಾಗಗಳನ್ನು ತೆಗೆದು ಹೆಚ್ಚಿನ ಪರೀಕ್ಷೆಗೆ ಕಳುಹಿಸಿ ಕಾಯಿಲೆಯ ಬಗ್ಗೆ ದೃಢೀಕರಿಸುತ್ತಾರೆ. ಸತ್ತ ಮಂಗಗಳನ್ನು ಸುಟ್ಟು ಐವತ್ತು ಮೀಟರ್ ಸುತ್ತಲೂ ಮೆಲಾಥಿನ್ ಪುಡಿಯನ್ನು ಸಿಂಪಡಿಸಲಾಗುತ್ತದೆ.
ಸತತ ಎಂಟು ಹತ್ತು ದಿನಗಳವರೆಗೆ ಬರುವ ಜ್ವರ, ವಿಪರೀತ ತಲೆ ನೋವು, ಕೈ ಕಾಲು ಸೊಂಟ ನೋವು, ವಿಪರೀತ ನಿಶ್ಯಕ್ತಿ, ಕಣ್ಣುಗಳು ಕೆಂಪಾಗುವುದು, ಜ್ವರ ಬಂದು ನಾಲ್ಕಾರು ದಿನಗಳಲ್ಲಿ ಕಣ್ಣು, ಮೂಗು, ಬಾಯಿ, ಗುದ ದ್ವಾರದಿಂದ ರಕ್ತ ಬರುವುದು ಈ ರೋಗದ ಮುಖ್ಯ ಲಕ್ಷಣ. ಕೈಕಾಲು ಸ್ವಾಧೀನ ತಪ್ಪುವುದು, ಎಚ್ಚರ ತಪ್ಪುವುದೂ ಉಂಟು. ಈ ರೋಗ ಉಣುಗುಗಳ ಮೂಲಕ ಹರಡುತ್ತದೆ.
ಮಂಗನ ಕಾಯಿಲೆ ನಿಯಂತ್ರಿಸುವ ಲಸಿಕೆ ಇದೀಗ ಬಂದಿದ್ದು ಇದನ್ನು 6 ವರ್ಷ ಮೇಲ್ಪಟ್ಟ ಎಲ್ಲರೂ ತೆಗೆದುಕೊಳ್ಳಬಹುದು. ಎರಡನೇ ಚುಚ್ಚುಮದ್ದನ್ನು ಹಾಕಿಸಿಕೊಂಡ ಇಪ್ಪತ್ತು ದಿನಗಳ ನಂತರ ರೋಗ ನಿರೋಧಕ ಶಕ್ತಿ ಬರುತ್ತದೆ. ಆದರೆ ಈ ಕಾಯಿಲೆಗೆ ನಿರ್ದಿಷ್ಟ ಔಷಧಿ ಇಲ್ಲ. ಚುಚ್ಚುಮದ್ದನ್ನು ಹಾಕಿಸಿಕೊಳ್ಳುವುದರಿಂದ ಯಾವ ತರಹದ ದುಷ್ಪರಿಣಾಮವೂ ಇರುವುದಿಲ್ಲ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.