ADVERTISEMENT

ಮಂಡ್ಯ ನಗರಸಭೆ ಅಧ್ಯಕ್ಷರಾಗಿ ಸಿದ್ದರಾಜು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 14:14 IST
Last Updated 17 ಸೆಪ್ಟೆಂಬರ್ 2013, 14:14 IST

ಮಂಡ್ಯ: ಮಂಡ್ಯ ನಗರಸಭೆಯ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಸಹ ಸದಸ್ಯ ಸಿದ್ದರಾಜು ಹಾಗೂ ಅದೇ ಪಕ್ಷದ ಎಂ.ಎಸ್. ಚಂದ್ರಕಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ನಗರಸಭೆಗೆ ಮೂರನೇ ಬಾರಿ ಆಯ್ಕೆಯಾಗಿದ್ದ ಹೊಸಹಳ್ಳಿ ಬೋರೇಗೌಡ ಅವರೂ ಕಾಂಗ್ರೆಸ್ ನಿಂದ ಅಧ್ಯಕ್ಷ ಗಾದಿಯ ಆಕಾಂಕ್ಷಿಯಾಗಿ ಕಣಕ್ಕೆ ಇಳಿದಿದ್ದರು. ಆದರೆ, ಅವರು (ತಮ್ಮದೊಂದೇ) ಏಕಮಾತ್ರ ಮತ ಪಡೆಯುವ ಮೂಲಕ ಹೀನಾಯವಾಗಿ ಸೋತಿದ್ದಾರೆ.

ಪಕ್ಷೇತರರಾಗಿ ಗೆದ್ದು, ಕಾಂಗ್ರೆಸ್ ಸಹ ಸದಸ್ಯರಾಗಿರುವ ವಾರ್ಡ್ ಸಂಖ್ಯೆ 28ರ ಸದಸ್ಯ ಸಿದ್ದರಾಜು ಹಾಗೂ  ವಾರ್ಡ್ ಸಂಖ್ಯೆ 16ರ ಕಾಂಗ್ರೆಸ್ ಸದಸ್ಯೆ ಎಂ.ಎಸ್. ಚಂದ್ರಕಲಾ ಅವರನ್ನು ಸಚಿವ ಅಂಬರೀಷ್ ಹಾಗೂ ಸಂಸದೆ ರಮ್ಯಾ ಸೇರಿದಂತೆ ಪಕ್ಷದ ಎಲ್ಲ ಸದಸ್ಯರೂ ಬೆಂಬಲಿಸಿದರು.

ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿದ್ದರಾಜು ಅವರಿಗೆ 27 ಮತಗಳು ಬಿದ್ದರೆ, ಪ್ರತಿಸ್ಪರ್ಧಿ ಎಂ.ಜೆ. ಚಿಕ್ಕಣ್ಣ ಅವರಿಗೆ ಏಳು ಮತಗಳು ಲಭಿಸಿದವು. ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಚಂದ್ರಕಲಾ ಅವರಿಗೆ 27 ಮತಗಳು ಬಿದ್ದರೆ, ಪ್ರತಿಸ್ಪರ್ಧಿ ಸುನೀತಾ ಅವರಿಗೆ 9 ಮತಗಳು ಬಿದ್ದಿವೆ. ಹೊಸಹಳ್ಳಿ ಬೋರೇಗೌಡ ಅವರು ಉಪಾಧ್ಯಕ್ಷ ಸ್ಥಾನದ ಚುನಾವಣೆ ಬಹಿಷ್ಕರಿಸಿ ಹೊರನಡೆದರು.

ಚುನಾವಣೆಯಲ್ಲಿ ಸೋಲನ್ನು ಅನುಭವಿಸುತ್ತಿದ್ದಂತೆಯೇ ಕಣ್ಣೀರಿಡುತ್ತಾ ಹೊರಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಬೋರೇಗೌಡ ಅವರು, ಕಾಂಗ್ರೆಸ್ ಮುಖಂಡರೊಬ್ಬರು ಅಧ್ಯಕ್ಷನನ್ನಾಗಿಸಲು 50 ಲಕ್ಷ ರೂಪಾಯಿ ಕೇಳಿದರು. ನನ್ನ ಸಹೋದರ ಹಣ ತೆಗೆದುಕೊಂಡು ಹೋದರೂ, ಅಧ್ಯಕ್ಷರನ್ನಾಗಿಸಲಿಲ್ಲ. ಹಣ ಇದ್ದವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದರು.

ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ನಾಮಪತ್ರ ಹಿಂತೆಗೆದುಕೊಳ್ಳಲು 20 ಲಕ್ಷ ರೂಪಾಯಿ ಆಮಿಷ ಒಡ್ಡಲಾಯಿತು. ಆದರೆ, ನಾನು ಕಣದಿಂದ ಹಿಂದೆ ಸರಿಯಲಿಲ್ಲ. ಕಾಂಗ್ರೆಸ್ಸಿನಲ್ಲಿರುವ ಕೆಲ ಕೆಟ್ಟವರಿಂದಾಗಿ ಅಧ್ಯಕ್ಷನಾಗಲು ಆಗಲಿಲ್ಲ ಎಂದರು.

ಒಟ್ಟು 35 ಸದಸ್ಯರಿದ್ದು, ಸಚಿವ ಅಂಬರೀಷ್ ಹಾಗೂ ಸಂಸದೆ ರಮ್ಯಾ ಸೇರಿ 37 ಮಂದಿ ಮತದಾನದ ಹಕ್ಕು ಹೊಂದಿದ್ದರು. 15 ಮಂದಿ ಕಾಂಗ್ರೆಸ್, 10 ಮಂದಿ ಪಕ್ಷೇತರರು, 9 ಮಂದಿ ಜೆಡಿಎಸ್ ಹಾಗೂ ಒಬ್ಬರು ಬಿಜೆಪಿ ಸದಸ್ಯರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.