ADVERTISEMENT

ಮಠಕ್ಕೆ ಸರ್ಕಾರದ ಹಣ ಬೇಡ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2011, 19:00 IST
Last Updated 19 ಏಪ್ರಿಲ್ 2011, 19:00 IST
ಮಠಕ್ಕೆ ಸರ್ಕಾರದ ಹಣ ಬೇಡ
ಮಠಕ್ಕೆ ಸರ್ಕಾರದ ಹಣ ಬೇಡ   

ಮೈಸೂರು: ’ಸರ್ಕಾರದ ಹಣವನ್ನು ಮಠಗಳು ನೆಚ್ಚಿಕೊಳ್ಳಬಾರದು. ರೈತರು ಮತ್ತು ಭಕ್ತರ ಸಹಾಯದಿಂದ ಮಠಗಳನ್ನು ನಡೆಸಬೇಕು. ಒಂದು ವೇಳೆ ಸರ್ಕಾರವನ್ನು ನೆಚ್ಚಿಕೊಂಡಿದ್ದೇ ಆದಲ್ಲಿ ಮುಂದೆ ಮಠಗಳನ್ನು ಜಫ್ತಿ ಮಾಡುವ ಸರ್ಕಾರಗಳು ಬರಬಹುದು’ ಎಂದು ಹರಿಹರ ಪಂಚಮಸಾಲಿ ಜಗದ್ಗುರು ಪೀಠದ 2008ನೇ ಸಿದ್ದಲಿಂಗೇಶ್ವರ ಸ್ವಾಮೀಜಿ ಎಚ್ಚರಿಸಿದ್ದಾರೆ.

ಇಲ್ಲಿಗೆ ಸಮೀಪದ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ವೀರಶೈವ ಮಹಾಸಭೆಯ 22ನೇ ಅಧಿವೇಶನದ ಮೂರನೇ ದಿನವಾದ ಮಂಗಳವಾರ ನಡೆದ ಮಠಾಧೀಶರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರ ಮಠಗಳಿಗೆ ಹಣ ನೀಡುವುದನ್ನು ವಿರೋಧಿಸಿದರು.

’ಭ್ರಷ್ಟಾಚಾರವನ್ನು ಮಠಗಳು ಎಂದಿಗೂ ಬೆಂಬಲಿಸುವುದಿಲ್ಲ. ಲೋಕಪಾಲ ಮಸೂದೆ ಶೀಘ್ರವೇ ಜಾರಿಯಾಗಬೇಕು. ಗಾಂಧಿವಾದಿ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಸ್ವಾಮೀಜಿಗಳ ಸಂಬಂಧಿಕರಿಗೆ ಮಠದ ಉತ್ತರಾಧಿಕಾರ ನೀಡುವುದು ಬೇಡ. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ರಾಜಕಾರಣಿಗೆ ವಹಿಸುವುದು ಬೇಡ. ಧಾರ್ಮಿಕ ಮುಖಂಡರು ಅಧ್ಯಕ್ಷರಾಗಬೇಕು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಒಳಿತು’ ಎಂದರು.

‘ಜಾತಿ ವ್ಯವಸ್ಥೆಯಿಂದ ಸಮಾಜ ನರಳುತ್ತಿದೆ. ವೀರಶೈವ ಸಮಾಜದಲ್ಲೂ ಒಳ ಪಂಗಡಗಳು ಇವೆ. ಹಾವನೂರು ವರದಿಯನ್ನು ಸ್ವತಃ ಭೀಮಣ್ಣ ಖಂಡ್ರೆ ಅವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅವರಿಗೆ ಹೆಚ್ಚಿನ ಬೆಂಬಲ ಸಿಗಲಿಲ್ಲ’ ಎಂದು ತಿಳಿಸಿದರು.

‘ಧರ್ಮ ಮತ್ತು ಮಠಗಳು’ ವಿಷಯ ಕುರಿತು ಮೈಸೂರಿನ ಕುಂದೂರು ಮಠದ ಶರತ್‌ಚಂದ್ರ ಸ್ವಾಮೀಜಿ ಮಾತನಾಡಿ, ‘ಧರ್ಮ ಮತ್ತು ಮಠ ಒಂದೇ ನಾಣ್ಯದ ಎರಡು ಮುಖಗಳು. ಮಠಗಳು ಉಳಿದು ಬೆಳೆಯಲು ಧರ್ಮವೇ ಕಾರಣ. ಮನುಷ್ಯನಿಗೆ ಶ್ರೇಯಸ್ಸು ತಂದುಕೊಡುವುದು ಧರ್ಮ. ಧರ್ಮ ಬಿಟ್ಟರೆ ಮಠಗಳಿಗೆ ಉಳಿಗಾಲವಿಲ್ಲ’ ಎಂದು ತಿಳಿಸಿದರು.

‘ಲಿಂಗಪೂಜೆ ಮಾಡುವ ವಿಧಾನ ಮತ್ತು ಕ್ರಿಯಾಕರ್ಮಗಳನ್ನು ಭಕ್ತರಿಗೆ ಹೇಳಿಕೊಡುವಲ್ಲಿ ಮಠಾಧೀಶರು ವಿಫಲರಾಗಿದ್ದಾರೆ. ಕೆಲವರಿಗೆ ಲಿಂಗಧಾರಣೆ ಬಗ್ಗೆ ಅರಿವಿಲ್ಲ.ಹುಟ್ಟಿನಿಂದಲೇ ಯಾರೂ ಲಿಂಗಾಯತನಾಗುವುದಿಲ್ಲ. ವೀರಶೈವ ಲಿಂಗಾಯತ ಮಠಗಳು ಪರಸ್ಪರ ಸೌಹಾರ್ದವಾಗಿ ಇರಬೇಕು. ಜಾತಿ ಬೇಡವೆಂದು ಹುಟ್ಟಿಕೊಂಡ ವೀರಶೈವ ಧರ್ಮ ಜಾತಿಯಾಗಿ ಉಳಿದುಬಿಟ್ಟಿದೆ. ಅಸ್ಪೃಶ್ಯತೆ ಮತ್ತು ವರ್ಣಾಶ್ರಮವನ್ನು ಮಠಾಧಿಪತಿಗಳು ವಿರೋಧಿಸಬೇಕಿದೆ. ಹಿಂದೆ 5 ಸಾವಿರ ಮಠಗಳಿದ್ದವು. ಈಗ ಒಂದು ಸಾವಿರ ಮಠಗಳಿವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.