ADVERTISEMENT

ಮಡೆಸ್ನಾನ ವಿರೋಧಿಸಿ ಸುಬ್ರಹ್ಮಣ್ಯ ಚಲೋ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2012, 19:30 IST
Last Updated 5 ನವೆಂಬರ್ 2012, 19:30 IST

ಬೆಂಗಳೂರು: `ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಡೆ ಮಡೆಸ್ನಾನ ವಿರೋಧಿಸಿ ಡಿಸೆಂಬರ್ 18 ರಂದು ನಡೆಯುವ ಚಂಪಷಷ್ಠಿಯ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಚಲೋ ಕಾರ್ಯಕ್ರಮ ಆಯೋಜಿಸಲಾಗಿದೆ~ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಮಡೆ ಮಡೆಸ್ನಾನ ನಮ್ಮ ನಾಗರಿಕ ಸಮಾಜಕ್ಕೆ ಅಂಟಿದ ಜಾಡ್ಯವಾಗಿದೆ. ಎಂಜಲೆಲೆಯ ಮೇಲೆ ಹೊರಳಾಡುವ ಪದ್ಧತಿಯು ಅಸಂವಿಧಾನಿಕ ಮತ್ತು ಅಮಾನವೀಯವಾಗಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸುಬ್ರಹ್ಮಣ್ಯ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ~ ಎಂದರು.

`ಮಡೆ ಮಡೆಸ್ನಾನದ ಬಗ್ಗೆ ಗಂಭೀರ ಚರ್ಚೆಗಳು ನಡೆದ ಸಂದರ್ಭದಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು `ನಾನು ಮಡೆ ಮಡೆ ಸ್ನಾನದ ಪರವೂ ಇಲ್ಲ, ವಿರೋಧವೂ ಇಲ್ಲ. ಅದು ಭಕ್ತರ ತೀರ್ಮಾನಕ್ಕೆ ಬಿಟ್ಟ ವಿಚಾರ~ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟವರಂತೆ ಮಾತನಾಡಿದ್ದರು. ಧಾರ್ಮಿಕ ಆಚರಣೆಗಳ ಹೆಸರಲ್ಲಿ ಮೌಢ್ಯವನ್ನು ಪೋಷಿಸುವ ಸಲುವಾಗಿ ಮಡೆ ಸ್ನಾನವನ್ನು ಜೀವಂತವಾಗಿರಿಸುವ ಉದ್ದೇಶ ವಿಶ್ವೇಶತೀರ್ಥ ಸ್ವಾಮೀಜಿ ಅವರದ್ದಾಗಿದೆ~ ಎಂದು ಆರೋಪಿಸಿದರು.

`ಪುರೋಹಿತಶಾಹಿಯು ಮಡೆ ಮಡೆಸ್ನಾನವನ್ನು ಜೀವಂತವಾಗಿಡಲು ಹುನ್ನಾರ ನಡೆಸುತ್ತಿದೆ. ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಸಂವಾದವೊಂದು ಇದಕ್ಕೆ ಸಾಕ್ಷಿಯಾಗಿದೆ. ಆ ಸಂವಾದದಲ್ಲಿ ಮಡೆ ಮಡೆಸ್ನಾನದ ಪರವಾದ ಚರ್ಚೆ ನಡೆಸಿ, ಇದನ್ನು ಸಂಪೂರ್ಣವಾಗಿ ರದ್ದುಗೊಳಿಸದಂತೆ ಸರ್ಕಾರಕ್ಕೆ ಸಲಹೆ ನೀಡುವ ನಿರ್ಣಯ ಕೈಗೊಳ್ಳಲಾಗಿದೆ~ ಎಂದರು.

`ಎಂಜಲೆಲೆಯಲ್ಲಿ ಉರುಳುವ ಬದಲು ದೇವಸ್ಥಾನದ ಗರ್ಭಗುಡಿಯ ಸುತ್ತಲೂ ಊಟ  ಬಡಿಸಿಟ್ಟು, ಅದನ್ನು ಸಾಂಕೇತಿಕವಾಗಿ ದನಗಳಿಂದ ತಿನ್ನಿಸಿ ಅದರಲ್ಲಿ ಶೂದ್ರರು ಹೊರಳಾಡಿ ತಮ್ಮ ಹರಕೆ ತೀರಿಸಿಕೊಳ್ಳಬಹುದು ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಮೂಲಕ ಮಡೆ ಮಡೆಸ್ನಾನವನ್ನು ಮತ್ತೊಂದು ರೂಪದಲ್ಲಿ ಮುಂದುವರಿಸಿಕೊಂಡು ಹೋಗುವ ಜಾಣ್ಮೆಯನ್ನು ಪ್ರದರ್ಶಿಸಲಾಗುತ್ತಿದೆ~ ಎಂದು ಅವರು ಹೇಳಿದರು.

`ಪಂಕ್ತಿಭೇದ ಹಾಗೂ ಮಡೆ ಮಡೆಸ್ನಾನ ಪದ್ಧತಿಗಳನ್ನು ನಿಷೇಧಿಸಲು ಆಗ್ರಹಿಸಿ ನ.10 ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ಹಾಗೂ ಜನ ಜಾಗೃತಿ ಸಮಾವೇಶವನ್ನು ನಡೆಸಲಾಗುವುದು. ನ.20 ರಂದು ಮೈಸೂರಿನ ಗಾಂಧಿ ಪ್ರತಿಮೆ ಎದುರು ಮತ್ತು ಡಿ.5 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ~ ಎಂದರು.

ಸಾಹಿತಿ ಬಿ.ಟಿ.ಲಲಿತಾನಾಯಕ್ ಮಾತನಾಡಿ, `ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂದಿನವರೆಗೂ ಇಂತಹ ಅಸಂಬದ್ಧ ಮತ್ತು ಅಸಂವಿಧಾನಿಕವಾದ ಮಡೆ ಮಡೆಸ್ನಾನ ಎಂಬ ಆಚರಣೆಯು ಪ್ರಚಲಿತದಲ್ಲಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ~ ಎಂದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.