ADVERTISEMENT

ಮಣಿಪಾಲ ಅತ್ಯಾಚಾರ ಪ್ರಕರಣ: ಮಹತ್ವದ ಸುಳಿವು ಲಭ್ಯ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 19:59 IST
Last Updated 22 ಜೂನ್ 2013, 19:59 IST

ಉಡುಪಿ: `ಮಣಿಪಾಲದ ಕಸ್ತೂರ್ಬಾ ವೈದ್ಯ ಕಾಲೇಜಿನ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಮಹತ್ವದ ಸುಳಿವು ಲಭ್ಯವಾಗಿದೆ' ಎಂದು ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿಹೇಳಿದರು.

ಉಡುಪಿಗೆ ಶನಿವಾರ ಭೇಟಿ ನೀಡಿದ ಅವರು ಅಧಿಕಾರಿಗಳ ಜೊತೆ ಪ್ರಕರಣದ ಬಗ್ಗೆ ಚರ್ಚಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಖಚಿತವಾಗಿದೆ. ಆರೋಪಿಗಳನ್ನು ಬಂಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಂ.ಬಿ. ಬೋರಲಿಂಗಯ್ಯ ಅವರ ನೇತೃತ್ವದಲ್ಲಿ ಎಂಟು ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

`ನಾವು ನೇರವಾಗಿ ವಿದ್ಯಾರ್ಥಿನಿಯಿಂದ ದೂರು ಪಡೆದಿಲ್ಲ. ಬದಲಾಗಿ ಕಾಲೇಜು ಆಡಳಿತ ಮಂಡಳಿಯವರಿಂದ ದೂರು ಪಡೆದು ಪ್ರಕರಣ ದಾಖಲಿಸಿದ್ದೇವೆ. ವೈದ್ಯರು, ಆಪ್ತ ಸಮಾಲೋಚಕರ ಸಹಾಯದಿಂದ ಮಾಹಿತಿ ಸಂಗ್ರಹಿಸಿದ್ದೇವೆ. ತನಿಖೆಯ ದೃಷ್ಟಿಯಿಂದ ಇದು ಸ್ವಲ್ಪ ತೊಡಕು ಎನಿಸಿದರೂ ವಿದ್ಯಾರ್ಥಿನಿಯ ಭವಿಷ್ಯದ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ' ಎಂದರು.

ಸ್ಥಳೀಯರು ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆಟೊ ಚಾಲಕ ವಾಹನ ಚಾಲನೆ ಮಾಡಿಕೊಂಡು ಪರಾರಿಯಾಗಿರುವ ರೀತಿಯೂ ಆತ ಸ್ಥಳೀಯ ಎಂಬುದನ್ನು ಖಚಿತಪಡಿಸುತ್ತದೆ ಎಂದು ಪ್ರತಾಪ್ ರೆಡ್ಡಿ ಅವರು ಮಾಹಿತಿ ನೀಡಿದರು.

ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಭಾನುವಾರ ಉಡುಪಿಗೆ ಭೇಟಿ ನೀಡಲಿದ್ದಾರೆ ಎಂದರು. ತೀವ್ರ ನಿಗಾ ಘಟಕದಲ್ಲಿದ್ದ ಯುವತಿ ಚೇತರಿಸಿಕೊಂಡಿರುವುದರಿಂದ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಯುವತಿಯ ಪೋಷಕರು ಮತ್ತು ಸಂಬಂಧಿಕರು ಆಸ್ಪತ್ರೆಗೆ ಬಂದಿದ್ದಾರೆ.

ಪೊಲೀಸ್ ತಂಡಗಳು ಉಡುಪಿ ನಗರದಲ್ಲಿ ಶನಿವಾರ ಆಟೊ ರಿಕ್ಷಾಗಳ ತಪಾಸಣೆ ನಡೆಸಿ  ಮಾಹಿತಿ ಸಂಗ್ರಹಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.