ADVERTISEMENT

ಮತದಾರರ ಓಲೈಕೆಗೆ ಮಹಿಳಾ ಕಾಂಗ್ರೆಸ್‌ನಿಂದ ಗ್ರಾಮ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 19:56 IST
Last Updated 5 ಅಕ್ಟೋಬರ್ 2017, 19:56 IST

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಭರ್ಜರಿ ತಯಾರಿ ನಡೆಸುತ್ತಿರುವ ಬೆನ್ನಲ್ಲೆ, ಗ್ರಾಮ ವಾಸ್ತವ್ಯದ ಮೂಲಕ ಮತದಾರರನ್ನು ಓಲೈಸಲು ಪಕ್ಷದ ರಾಜ್ಯ ಮಹಿಳಾ ಘಟಕ ಮುಂದಾಗಿದೆ.

ಪಕ್ಷದ ರಾಜ್ಯ ಸಹ ಉಸ್ತುವಾರಿ ಮಧು ಯಾಸ್ಕಿಗೌಡ ಉಪಸ್ಥಿತಿಯಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್‌ ಘಟಕದ ಕಾರ್ಯಕಾರಿಣಿ ಗುರುವಾರ ನಡೆಯಿತು.

‘ಮಹಿಳಾ ಮತದಾರರ ಮೇಲೆ ಕಣ್ಣಿಟ್ಟು, ಗ್ರಾಮ ವಾಸ್ತವ್ಯ ನಡೆಸಲು ತೀರ್ಮಾನಿಸಲಾಗಿದೆ. ಇಂದಿರಾ ಗಾಂಧಿ ಅವರ 100ನೇ ಜನ್ಮದಿನಾಚರಣೆ ಅಂಗವಾಗಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು’ ಎಂದು ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ ತಿಳಿಸಿದರು.

ADVERTISEMENT

ಮನೆ ಮನೆಗೆ ತೆರಳಿ ಅರಿಶಿನ ಕುಂಕುಮ ನೀಡಿ, ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲು ಮತ್ತೊಮ್ಮೆ ಪಕ್ಷವನ್ನು ಆಶೀರ್ವದಿಸುವಂತೆ ಮನವಿ ಮಾಡಲಾಗುತ್ತದೆ. ನವರಾತ್ರಿ ಸಂದರ್ಭದಲ್ಲಿ ಆರಂಭಿಸಿದ ಈ ಕಾರ್ಯಕ್ರಮವನ್ನು ಈಗಾಗಲೇ 15 ಜಿಲ್ಲೆಗಳಲ್ಲಿ ಕೈಗೊಳ್ಳಲಾಗಿದ್ದು, ಈ ತಿಂಗಳ ಒಳಗೆ ಉಳಿದ ಜಿಲ್ಲೆಗಳಿಗೂ ವಿಸ್ತರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮಹಿಳೆಯರು ಮತ್ತು ಯುವತಿಯರನ್ನು ಪಕ್ಷದ ಪರವಾಗಿ ಭಾಗವಹಿಸುವಂತೆ ಮಾಡಲು ಅಕ್ಟೋಬರ್‌ನಲ್ಲಿ ಎರಡು ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲು ಮತ್ತು ಈ ಕಾರ್ಯಕ್ರಮಕ್ಕೆ ಎಐಸಿಸಿ ಮಹಿಳಾ ಸಮಿತಿ ಅಧ್ಯಕ್ಷೆಯನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ನವೆಂಬರ್‌ನಲ್ಲಿ ‘ಇಂದಿರಾ ನಮನ’ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.