ADVERTISEMENT

ಮತೀಯ ಆಧಾರಿತ ವಿವಿ ಸ್ಥಾಪನೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 6 ಜನವರಿ 2013, 20:31 IST
Last Updated 6 ಜನವರಿ 2013, 20:31 IST
ಮೈಸೂರಿನ ರಾಣಿ ಬಹದ್ದೂರ್ ಸಭಾಂಣಗದಲ್ಲಿ ಭಾನುವಾರ ನಡೆದ `ಟಿಪ್ಪು ಹೆಸರಿನಲ್ಲಿ ಪ್ರತ್ಯೇಕ ಮುಸ್ಲಿಂ ವಿಶ್ವವಿದ್ಯಾನಿಲಯ ಹುನ್ನಾರದ ಹಿನ್ನೆಲೆ-ಮುನ್ನೆಲೆ' ವಿಚಾರಗೋಷ್ಠಿಯಲ್ಲಿ ದೆಹಲಿ ವಿಶ್ವವಿದ್ಯಾನಿಲಯದ  ಪ್ರಾಧ್ಯಾಪಕ ರಾಕೇಶ್ ಸಿನ್ಹಾ, ಸಾಹಿತಿ ಡಾ.ಎಸ್.ಎಲ್.ಭೈರಪ್ಪ, ಸಂಶೋಧಕ ಡಾ.ಎಂ. ಚಿದಾನಂದ ಮೂರ್ತಿ, ಕೊಡವ ಅಕಾಡೆಮಿ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ, ಪ್ರೊ.ಕೆ.ಎಸ್.ಮೋಹನದಾಸ್ ಪಾಲ್ಗೊಂಡಿದ್ದರು.
ಮೈಸೂರಿನ ರಾಣಿ ಬಹದ್ದೂರ್ ಸಭಾಂಣಗದಲ್ಲಿ ಭಾನುವಾರ ನಡೆದ `ಟಿಪ್ಪು ಹೆಸರಿನಲ್ಲಿ ಪ್ರತ್ಯೇಕ ಮುಸ್ಲಿಂ ವಿಶ್ವವಿದ್ಯಾನಿಲಯ ಹುನ್ನಾರದ ಹಿನ್ನೆಲೆ-ಮುನ್ನೆಲೆ' ವಿಚಾರಗೋಷ್ಠಿಯಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ರಾಕೇಶ್ ಸಿನ್ಹಾ, ಸಾಹಿತಿ ಡಾ.ಎಸ್.ಎಲ್.ಭೈರಪ್ಪ, ಸಂಶೋಧಕ ಡಾ.ಎಂ. ಚಿದಾನಂದ ಮೂರ್ತಿ, ಕೊಡವ ಅಕಾಡೆಮಿ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ, ಪ್ರೊ.ಕೆ.ಎಸ್.ಮೋಹನದಾಸ್ ಪಾಲ್ಗೊಂಡಿದ್ದರು.   

ಮೈಸೂರು: ಮತೀಯ ಆಧಾರಿತ ವಿಶ್ವವಿದ್ಯಾನಿಲಯ ಸ್ಥಾಪನೆ ಮತ್ತು ಅದಕ್ಕೆ ಟಿಪ್ಪು ಹೆಸರು ನಾಮಕರಣ ಮಾಡಲು  ಯಾವುದೇ ಸಂದರ್ಭದಲ್ಲೂ ಅವಕಾಶ ನೀಡಬಾರದು. -ಇದು ನಗರದ ಮಂಥನ ವೇದಿಕೆ ವತಿಯಿಂದ ರಾಣಿ ಬಹದ್ದೂರ್ ಸಭಾಂಣಗದಲ್ಲಿ ಭಾನುವಾರ  ಏರ್ಪಡಿಸಿದ್ದ `ಟಿಪ್ಪು ಹೆಸರಿನಲ್ಲಿ ಪ್ರತ್ಯೇಕ ಮುಸ್ಲಿಂ ವಿಶ್ವವಿದ್ಯಾನಿಲಯ ಹುನ್ನಾರದ ಹಿನ್ನೆಲೆ-ಮುನ್ನೆಲೆ' ವಿಚಾರಗೋಷ್ಠಿಯಲ್ಲಿ ರಾಜಕೀಯ ಚಿಂತಕರು, ಇತಿಹಾಸ ತಜ್ಞರು, ಸಾಹಿತಿಗಳ ಒಮ್ಮತದ ಒತ್ತಾಯ.

ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಮಾತನಾಡಿ, ಹಿಂದುಗಳು ಮತ್ತು  ಮುಸ್ಲಿಮರನ್ನು ಒಡೆಯಲು ಬ್ರಿಟಿಷರು ಹುಟ್ಟು ಹಾಕಿದ ಪರಿಕಲ್ಪನೆ ಅಲ್ಪಸಂಖ್ಯಾತರು. ಅಲ್ಪಸಂಖ್ಯಾತರ ಇತಿಹಾಸ ಹಿನ್ನೆಲೆಯನ್ನು ಸರಿಯಾಗಿ ಅವಲೋಕಿಸಿ ನಿರ್ಧಾರಗಳನ್ನು ಕೈಗೊಳ್ಳಬೇಕು. ಆದರೆ, ಇಂದು ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಎನ್ನುವ ಪರಿಕಲ್ಪನೆಗಳು ವೋಟ್ ಬ್ಯಾಂಕ್ ರಾಜಕೀಯ,  ಭ್ರಷ್ಟಾಚಾರದ ದಾಳಗಳಾಗಿವೆ.

ಅಧಿಕಾರದ ಲಾಲಸೆ, ಹಣ ದಾಹ, ಅಲ್ಪಸಂಖ್ಯಾತರ ಮತಗಳನ್ನು ಗಿಟ್ಟಿಸುವ ಉದ್ದೇಶದಿಂದ ಹೊಸ ತಂತ್ರಗಳನ್ನು ರಾಜಕಾರಣಿಗಳು ಹೆಣೆಯುತ್ತಿದ್ದಾರೆ. ಜವಾಹರ್‌ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಇವರೆಲ್ಲರೂ ಅಲ್ಪಸಂಖ್ಯಾತರ ಮತ ಗಿಟ್ಟಿಸುವ ತಂತ್ರಗಳನ್ನು ಸುಸೂತ್ರವಾಗಿ  ರೂಪಿಸಿದ್ದರು. ಅಲ್ಪಸಂಖ್ಯಾತ ವ್ಯವಹಾರ ಖಾತೆ ಕೇಂದ್ರ ಸಚಿವ ಕೆ.ರೆಹಮಾನ್ ಖಾನ್ ಅವರು ಶ್ರೀರಂಗಪಟ್ಟಣದಲ್ಲಿ ಮುಸ್ಲಿಂ ವಿಶ್ವವಿದ್ಯಾನಿಲಯ ಆರಂಭಿಸುವ ಹುನ್ನಾರ ನಡೆಸಿರುವು ಇದಕ್ಕೆ ಸಾಕ್ಷಿ ಎಂದು ಕಿಡಿಕಾರಿದರು.

ಮಹಾರಾಷ್ಟ್ರದ ಪ್ರತಾಪಗಡದಲ್ಲಿ ಶಿವಾಜಿಯು ಅಫ್ಜಲ್ ಖಾನ್‌ನನ್ನು ಕೊಂದ ಸ್ಥಳದಲ್ಲಿದ್ದ ಶಾಸನ ಮತ್ತು ನಾಮಫಲಕ ಮಾಯವಾಗಿದೆ. ಅಲ್ಲಿ ಈಗ ದರ್ಗಾ ನಿರ್ಮಾಣವಾಗಿದೆ. ಇದು ರಾಜಕಾರಣಿಗಳ ತಂತ್ರಗಾರಿಕೆಯ ಪ್ರಭಾವ. ಇಂದು ವಿದ್ಯಾವಂತ ಮಸ್ಲಿಂ ಮಹಿಳೆಯರೂ ಬುರ್ಖಾ ಧರಿಸುತ್ತಾರೆ. ಮದರಸಗಳಲ್ಲಿ ವಿದ್ಯಾರ್ಥಿಗಳಿಗೆ ಮುಸ್ಲಿಮರು ಅನ್ಯಾಯ ಕೂಪದಲ್ಲಿ ಸೊರಗುತ್ತಿದ್ದಾರೆ ಎಂಬ ವಿಷಯವನ್ನು ಬೋಧಿಸುತ್ತಿದ್ದುದ್ದನ್ನು ಕಂಡಿದ್ದೇನೆ. ಇನ್ನು ಮತೀಯ ವಿಶ್ವವಿದ್ಯಾನಿಲಯಗಳು ಸ್ಥಾಪನೆಯಾದರೆ ಅಲ್ಲಿಯೂ ಅದನ್ನೇ ಬೋಧಿಸುತ್ತಾರೆ. ಈ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಅವಕಾಶ ಕಲ್ಪಿಸಿದರೆ ದೇಶ ವಿಭಜನೆ, ಸಾರ್ವಜನಿಕ ಹಣದ ದುಂದು ವೆಚ್ಚಕ್ಕೆ ದಾರಿ ಮಾಡಿಕೊಟ್ಟಂತೆ ಎಂದು ಟೀಕಿಸಿದರು.

ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಮಾತನಾಡಿ, ಟಿಪ್ಪುವಿಗೆ ಹಿಂದು ದೇವಾಲಯಗಳು, ಕೋಟೆಕೊತ್ತಲಗಳನ್ನು ಭಗ್ನಗೊಳಿಸಿ ವಿರೂಪಗೊಳಿಸಿದ ಅಪಖ್ಯಾತಿ ಇದೆ. ಕೆಲ ವಾರಗಳ ಹಿಂದೆ ಪತ್ರಿಕೆಯೊಂದರಲ್ಲಿ `ಟಿಪ್ಪು ವಿಶ್ವವಿದ್ಯಾನಿಲಯದಲ್ಲಿ ಓದುವುದು ಕಳಂಕ' ಎಂಬ ನನ್ನ ಲೇಖನ ಪ್ರಕಟವಾಗಿತ್ತು. ಇದನ್ನು ಪ್ರಶ್ನಿಸಿ ಟಿಪ್ಪು ಯೂನಿಯನ್ ಲೀಗ್ ನನ್ನ ಮೇಲೆ ಮೊಕದ್ದಮೆ ಹೂಡಿದೆ. ಟಿಪ್ಪು ಮತಾಂಧನಾಗಿದ್ದ ಎಂಬುದಕ್ಕೆ ಹಲವಾರು ದಾಖಲೆಗಳು ದೊರೆತಿವೆ.

ಮೂಲಭೂತವಾಗಿ ಆತ ಹಿಂದು ದ್ವೇಷಿಯಾಗಿದ್ದ. ಈತ ತನ್ನ ಆಡಳಿತಾವಧಿಯಲ್ಲಿ ಲಕ್ಷಾಂತರ ಹಿಂದುಗಳನ್ನು ಬಲವಂತವಾಗಿ ಮತಾಂತರ ಮಾಡಿರುವುದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. `ಕಾಪೀರರ (ಮುಸ್ಲಿಮರಲ್ಲದವರು) ಜೊತೆ ಹೋರಾಡಿ ಅವರನ್ನು ನೀರಿನಲ್ಲಿ ಮುಳುಗಿಸಿ', `ಇಸ್ಲಾಂ ಒಲ್ಲದವರನ್ನು ಕೊಲ್ಲಿ' ಎಂದು ಸೇನಾಧಿಪತಿಗಳಿಗೆ ಈತ ಬರೆದಿರುವ ಪತ್ರಗಳು ಟಿಪ್ಪು ಧರ್ಮ ನಿಷ್ಣಾತನಾಗಿದ್ದ ಎಂಬುದನ್ನು ದೃಢಪಡಿಸುತ್ತವೆ ಎಂದು  ತಿಳಿಸಿದರು.

  ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯಕ್ಕೆ ಉಗ್ರರನ್ನು ತಯಾರಿಸುವ ಜಾಗ ಎಂಬ ಹಣೆಪಟ್ಟಿ ಇದೆ. ಇನ್ನು ಶ್ರೀರಂಗಪಟ್ಟಣದಲ್ಲಿ ಮತ್ತೊಂದು ಮುಸ್ಲಿಂ ವಿಶ್ವವಿದ್ಯಾನಿಲಯ ಸ್ಥಾಪಿಸಿದರೆ ಅದಕ್ಕೂ ಇದೇ ಹಣೆಪಟ್ಟಿ ಬೀಳುತ್ತದೆ. ಶ್ರೀರಂಗಪಟ್ಟಣ ಸಂಪೂರ್ಣ ಇಸ್ಲಾಮೀಕರಣವಾಗಿ ಪರಿವರ್ತನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ದೆಹಲಿ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ರಾಜೇಶ್ ಸಿನ್ಹಾ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.