ADVERTISEMENT

ಮತ್ತೆ ಕುಸಿದ ರೇಷ್ಮೆ ಧಾರಣೆ

ರೈತರಿಂದ ಬೆಂಗಳೂರು–ಮೈಸೂರು ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2015, 20:01 IST
Last Updated 2 ಜೂನ್ 2015, 20:01 IST
ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ರೇಷ್ಮೆ ಧಾರಣೆ ಕುಸಿತ ಕಂಡ ಕಾರಣ ರೇಷ್ಮೆ ರೈತರು ಮಂಗಳವಾರ ಬೆಂಗಳೂರು–ಮೈಸೂರು ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು
ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ರೇಷ್ಮೆ ಧಾರಣೆ ಕುಸಿತ ಕಂಡ ಕಾರಣ ರೇಷ್ಮೆ ರೈತರು ಮಂಗಳವಾರ ಬೆಂಗಳೂರು–ಮೈಸೂರು ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು   

ರಾಮನಗರ: ರೇಷ್ಮೆ ಧಾರಣೆಯಲ್ಲಿ ಮತ್ತೆ ಕುಸಿತ ಉಂಟಾದ್ದರಿಂದ ಆಕ್ರೋಶಗೊಂಡ ರೈತರು ರಾಮನಗರದಲ್ಲಿ ಬೆಂಗಳೂರು– ಮೈಸೂರು ಹೆದ್ದಾರಿ ತಡೆ ನಡೆಸಿ ಮಂಗಳವಾರ ಪ್ರತಿಭಟಿಸಿದರು.

ಇಲ್ಲಿನ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಮೂರನೇ ಘಟಕದಲ್ಲಿ ನೂಲು ಬಿಚ್ಚಾಣಿಕೆದಾರರು (ರೀಲರ್‌ ಗಳು) ಕೆ.ಜಿ ರೇಷ್ಮೆ ಗೂಡಿಗೆ ಕೇವಲ ₨ 120, ₨ 130ಕ್ಕೆ ಹರಾಜು ಕೂಗಿದರು. ಇದರಿಂದ ಬೇಸತ್ತ ರೈತರು ಹರಾಜು ಪ್ರಕ್ರಿಯೆ ಬಹಿಷ್ಕರಿಸಿ, ರೀಲರ್‌ಗಳ ವಿರುದ್ಧ ಧಿಕ್ಕಾರ ಕೂಗಿದರು.

ರೈತರು ಬೆಂಗಳೂರು– ಮೈಸೂರು ಹೆದ್ದಾರಿಯನ್ನು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ತಡೆ ನಡೆಸಿದ್ದರಿಂದ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಯಿತು. ಕೂಡಲೇ ಪೊಲೀಸರು ಪರ್ಯಾಯ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ, ಡಿಎಸ್‌ಪಿ ಲಕ್ಷ್ಮೀ ಗಣೇಶ್‌ ಅವರು ಪ್ರತಿಭಟನಾನಿರತ ರೈತರ ಬಳಿ ಬಂದು ರಸ್ತೆ
ತಡೆ ಹಿಂಪಡೆಯುವಂತೆ ಮನವಿ ಮಾಡಿದರು.  ಮತ ಚಲಾಯಿಸಲು ಸಾರ್ವಜನಿಕರು ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿರುತ್ತಾರೆ. ಇದರಿಂದ  ಮತದಾನಕ್ಕೆ ತೊಂದರೆ ಎಂದು ಪೊಲೀಸರು ಮನವಿ ಮಾಡಿದರು.

ರೀಲರ್‌ಗಳ ಜತೆಯೂ ಮಾತನಾಡಿದ ಪೊಲೀಸರು ಉತ್ತಮ ಬೆಲೆಗೆ ಹರಾಜು ಕೂಗುವಂತೆ ಕೋರಿದರು. ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.
******
ಮೊದಲ ಬಾರಿಗೆ ರೇಷ್ಮೆ ಗೂಡು ಬೆಳೆಸಿ ಮಾರಾಟ ಮಾಡಲು ರಾಮನಗರ ಮಾರುಕಟ್ಟೆಗೆ ತೆಗೆದುಕೊಂಡು ಬಂದೆ. ಆದರೆ ಕೆ.ಜಿಗೆ ಕೇವಲ ₨ 150ರಿಂದ 160ಕ್ಕೆ ದೊರೆತಿದೆ
-ಶಿವಕುಮಾರ್‌, ಚನ್ನಪಟ್ಟಣದ ರೇಷ್ಮೆ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.