ADVERTISEMENT

ಮತ್ತೆ ಪದವಿಗೆ ಸೇರಿದರೆ ಉಚಿತ ಶಿಕ್ಷಣ!

ನಕಲಿ ಅಂಕಪಟ್ಟಿ ಸಲ್ಲಿಸಿದವರಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 19:30 IST
Last Updated 28 ಅಕ್ಟೋಬರ್ 2017, 19:30 IST
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ವಿದ್ಯಾವಿಷಯಕ ಪರಿಷತ್‌ ಸಭೆಯಲ್ಲಿ ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್, ಕುಲಸಚಿವರಾದ ಪ್ರೊ.ಎಸ್‌.ಎ.ಪಾಟೀಲ ಮತ್ತು ಪ್ರೊ.ಹೊನ್ನು ಸಿದ್ದಾರ್ಥ ಇದ್ದಾರೆ.
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ವಿದ್ಯಾವಿಷಯಕ ಪರಿಷತ್‌ ಸಭೆಯಲ್ಲಿ ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್, ಕುಲಸಚಿವರಾದ ಪ್ರೊ.ಎಸ್‌.ಎ.ಪಾಟೀಲ ಮತ್ತು ಪ್ರೊ.ಹೊನ್ನು ಸಿದ್ದಾರ್ಥ ಇದ್ದಾರೆ.   

ಬಳ್ಳಾರಿ: ದ್ವಿತೀಯ ಪಿಯು ನಕಲಿ ಅಂಕಪಟ್ಟಿ ನೀಡಿ ವಿವಿಧ ಪದವಿ ತರಗತಿಗಳಲ್ಲಿ ಓದುತ್ತಿರುವವರು ತಮ್ಮ ತಪ್ಪು ಒಪ್ಪಿಕೊಂಡು, ಮತ್ತೆ ಪದವಿಯ ಮೊದಲನೇ ವರ್ಷಕ್ಕೆ ದಾಖಲಾದರೆ ಅವರಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಂ.ಎಸ್‌. ಸುಭಾಷ್‌ ತಿಳಿಸಿದರು.

‘ಎರಡು ಮತ್ತು ಮೂರನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವವರು, ದ್ವಿತೀಯ ಪಿಯುಸಿ ಪೂರೈಸಿ ಮತ್ತೆ ಮೊದಲನೇ ಸೆಮಿಸ್ಟರ್‌ಗೆ ದಾಖಲಾದರೆ ಅವರು ಪಾವತಿಸಬೇಕಾದ ಎಲ್ಲ ಶುಲ್ಕವನ್ನು ಮನ್ನಾ ಮಾಡಲಾಗುವುದು. ಈಗ ಇರುವ ತರಗತಿಯಲ್ಲೇ ಮುಂದುವರಿಯುವುದಾದರೆ, ಅವರ ಸ್ನಾತಕೋತ್ತರ ಶಿಕ್ಷಣಕ್ಕೂ ಅನುವು ಮಾಡಲಾಗುವುದು. ಆದರೆ, ಭವಿಷ್ಯದಲ್ಲಿ ಎದುರಾಗುವ ಉದ್ಯೋಗ ಸಂಬಂಧಿ ತೊಂದರೆಗಳನ್ನು ಅವರೇ ಎದುರಿಸಬೇಕಾಗುತ್ತದೆ’
ಎಂದು ಸ್ಪಷ್ಟಪಡಿಸಿದರು.

ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ವಿದ್ಯಾವಿಷಯಕ ಪರಿಷತ್‌ ಸಭೆಯ ಬಳಿಕ ಈ ಮಾಹಿತಿ ನೀಡಿದ ಕುಲಪತಿ, ಶುಲ್ಕ ಮನ್ನಾ ಸಂಬಂಧ ಎಲ್ಲ ಕಾಲೇಜುಗಳ ಪ್ರಾಂಶುಪಾಲರ ಸಭೆ ನಡೆಸಿ, ಮಾಹಿತಿ ನೀಡಲಾಗುವುದು ಎಂದರು.

ADVERTISEMENT

ನಕಲಿ ಅಂಕಪಟ್ಟಿ ನಮೂದು ಅಗತ್ಯ: ‘ನಕಲಿ ಅಂಕಪಟ್ಟಿ ನೀಡಿದ ಬಗೆಗಿನ ಮಾಹಿತಿಯನ್ನು ವಿದ್ಯಾರ್ಥಿಗಳ ಅಂಕಪಟ್ಟಿ ಅಥವಾ ಪದವಿ ಪ್ರಮಾಣ ಪತ್ರದಲ್ಲಿ ನಮೂದಿಸದಿದ್ದರೆ ವಿಶ್ವವಿದ್ಯಾಲಯ ಲೋಪ ಮಾಡಿದಂತಾಗುತ್ತದೆ. ಉದ್ಯೋಗದಾತ ಸಂಸ್ಥೆಗಳು ಆ ಪ್ರಮಾಣ ಪತ್ರವನ್ನೇ ಪ್ರಮುಖವಾಗಿ ಪರಿಗಣಿಸುವುದರಿಂದ ನಕಲಿ ಅಂಕಪಟ್ಟಿ ಸಲ್ಲಿಸಿದ್ದ ವಿಷಯವನ್ನು ವಿದ್ಯಾರ್ಥಿಗಳು ಮುಚ್ಚಿಡಬಾರದು’ ಎಂದು ಕುಲಪತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.