ಬೆಂಗಳೂರು: `ಉತ್ತರಾಖಂಡದಿಂದ ಸುರಕ್ಷಿತವಾಗಿ ಹಿಂದಿರುಗಿ ಬಂದು ಕುಟುಂಬ ಸದಸ್ಯರನ್ನೆಲ್ಲಾ ನೋಡುತ್ತೇವೆ ಎಂಬ ನಂಬಿಕೆಯೇ ಇರಲಿಲ್ಲ. ದೇವರು ದೊಡ್ಡವನು, ಯಾವುದೇ ತೊಂದರೆ ಇಲ್ಲದೆ ನಗರಕ್ಕೆ ವಾಪಸ್ ಬಂದೆವು' ಎಂದು ಸಂಕಷ್ಟದಿಂದ ಪಾರಾಗಿ ಬಂದ ಬೆಂಗಳೂರಿನ ಕೇಶವರಾಜು ದಂಪತಿ ಹೇಳಿದರು.
ಭಾನುವಾರ ಮಧ್ಯಾಹ್ನ `ಕರ್ನಾಟಕ ಎಕ್ಸ್‌ಪ್ರೆಸ್' ರೈಲಿನಲ್ಲಿ ನಗರಕ್ಕೆ ಹಿಂದಿರುಗಿದ ಕೇಶವರಾಜು ಮತ್ತು ಅವರ ಪತ್ನಿ ಸುಮಿತ್ರಾ ಅವರು ನೆರೆ ಪೀಡಿತ ಉತ್ತರಾಖಂಡದಲ್ಲಿ ಅನುಭವಿಸಿದ ತೊಂದರೆಯನ್ನು ನಗರ ರೈಲು ನಿಲ್ದಾಣದಲ್ಲಿ `ಪ್ರಜಾವಾಣಿ' ಜತೆ ಹಂಚಿಕೊಂಡರು. ಈ ವೇಳೆ ನಿಲ್ದಾಣದಲ್ಲಿದ್ದ ಕೇಶವರಾಜು ಅವರ ಕುಟುಂಬ ಸದಸ್ಯರು ದಂಪತಿಗೆ ಹೂವಿನ ಹಾರ ಹಾಕಿ ಮತ್ತು ಆರತಿ ಎತ್ತಿ ಬರಮಾಡಿಕೊಂಡರು.
ಬೆಂಗಳೂರಿನ ವಿಜಯನಗರ ಕ್ಲಬ್ ರಸ್ತೆ ನಿವಾಸಿಗಳಾದ ಕೇಶವರಾಜು ದಂಪತಿ ಮೇ 27ರಂದು ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದರು. `ಸದರ್ನ್ ಟ್ರಾವೆಲ್ಸ್' ಏಜೆನ್ಸಿ ಮೂಲಕ ಪ್ರವಾಸಕ್ಕೆ ಹೋಗಿದ್ದ ಅವರು ಜೂನ್ 29ಕ್ಕೆ ನಗರಕ್ಕೆ ವಾಪಸ್ ಬರಬೇಕಿತ್ತು. ಕೇಶವರಾಜು ಅವರು ಎಚ್‌ಎಎಲ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
`ರೈಲಿನಲ್ಲಿ ದೆಹಲಿಗೆ ಹೋದೆವು. ಅಲ್ಲಿಂದ ಬಸ್‌ನಲ್ಲಿ ವಾರಣಾಸಿ, ಲಖನೌ, ಅಲಹಾಬಾದ್, ಮಥುರಾ, ಮನಾಲಿ ಮತ್ತಿತರ ಸ್ಥಳಗಳನ್ನು ನೋಡಿಕೊಂಡು ಜೂ.15ರಂದು ಉತ್ತರಕಾಶಿ ಜಿಲ್ಲೆಯ ಬಾರ‌್ಕಾಟ್ ಪಟ್ಟಣಕ್ಕೆ ಬಂದಿಳಿದೆವು. ಅಲ್ಲಿ ಒಂದು ದಿನ ವಿಶ್ರಾಂತಿ ಪಡೆದ ನಂತರ ಶ್ರೀನಗರ, ರಾಂಪುರ, ಬದರಿನಾಥಕ್ಕೆ ಹೋಗಬೇಕಿತ್ತು. ಆದರೆ, ಆ ಭಾಗದಲ್ಲಿ ತುಂಬಾ ಮಳೆಯಾಗುತ್ತಿದೆ ಎಂದು ಗೊತ್ತಾಗಿದ್ದರಿಂದ ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ಹಿಂದಿರುಗಲು ನಿರ್ಧರಿಸಿದೆವು' ಎಂದು ಕೇಶವರಾಜು ಹೇಳಿದರು.
`ಟ್ರಾವೆಲ್ಸ್ ಏಜೆನ್ಸಿಯವರು ಮಳೆಯ ಪ್ರಮಾಣ ತಗ್ಗಿದ ನಂತರ ಪ್ರವಾಸ ಮುಂದುವರಿಸುವುದಾಗಿ ಹೇಳಿದರು. ಆದರೆ, ಸಹ ಪ್ರಯಾಣಿಕರು ಪ್ರವಾಸ ಮುಂದುವರಿಸಲು ಒಪ್ಪಲಿಲ್ಲ. ಆದ ಕಾರಣ ಏಜೆನ್ಸಿಯವರು ಹರಿದ್ವಾರ ಮಾರ್ಗವಾಗಿ ದೆಹಲಿಗೆ ವಾಪಸ್ ಕರೆದೊಯ್ಯಲು ನಿರ್ಧರಿಸಿದರು. ದೆಹಲಿಗೆ ವಾಪಸ್ ಬರುವಾಗ ಮಾರ್ಗ ಮಧ್ಯೆ ಹಲವೆಡೆ ಬೆಟ್ಟ ಕುಸಿದಿತ್ತು. ಬಂಡೆಗಳು ರಸ್ತೆಗೆ ಉರುಳಿ ಬಿದ್ದಿದ್ದವು. ರಸ್ತೆ ತುಂಬಾ ಕಿರಿದಾಗಿದ್ದರಿಂದ ಒಂದು ವಾಹನವಷ್ಟೇ ಚಲಿಸಲು ಸ್ಥಳಾವಕಾಶವಿತ್ತು. ಹರಿದ್ವಾರ ಸಮೀಪ ಬಂಡೆಯೊಂದು ರಸ್ತೆಗೆ ಉರುಳಿ ಬಿದ್ದಿದ್ದರಿಂದ ಮೂರ್ನಾಲ್ಕು ತಾಸುಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಬಸ್‌ನ ಜಾಕ್‌ನಿಂದ ಬಂಡೆಯನ್ನು ರಸ್ತೆ ಬದಿಗೆ ಸರಿಸಿ ಪ್ರಯಾಣ ಮುಂದುವರಿಸಿದೆವು' ಎಂದರು.
`ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪದ ಘಟನೆಗಳು ನಡೆದಿರಲಿಲ್ಲ. ಜೀವನದಲ್ಲಿ ಒಮ್ಮೆಯಾದರೂ ಉತ್ತರ ಭಾರತದ ಪ್ರೇಕ್ಷಣಿಯ ಸ್ಥಳಗಳನ್ನು ನೋಡಬೇಕೆಂದು ಪತ್ನಿಯೊಂದಿಗೆ ಪ್ರವಾಸಕ್ಕೆ ಹೋಗಿದ್ದೆ. ಆದರೆ, ಪ್ರವಾಸ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆದರೆ, ಈ ಘಟನೆಯಿಂದ ಧೃತಿಗೆಟ್ಟಿಲ್ಲ. ಮುಂದೆಯೂ ಪ್ರವಾಸ ಮಾಡುತ್ತೇನೆ' ಎಂದರು.
`ಉತ್ತರಾಖಂಡದ ಬಹುತೇಕ ಸ್ಥಳಗಳಲ್ಲಿ ಮೊಬೈಲ್ ಸಂಪರ್ಕ ಜಾಲ ಸಮರ್ಪಕವಾಗಿರಲಿಲ್ಲ. ಇದರಿಂದಾಗಿ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಜತೆಗಿದ್ದ ಸಹ ಪ್ರಯಾಣಿಕರ ಮೊಬೈಲ್‌ನಿಂದ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಸುರಕ್ಷಿತವಾಗಿರುವುದಾಗಿ ತಿಳಿಸಿದೆವು' ಎಂದು ಸುಮಿತ್ರಾ ಹೇಳಿದರು.
`ದೆಹಲಿಗೆ ವಾಪಸ್ ಬರುತ್ತಿದ್ದಂತೆ ಆಂಧ್ರ ಭವನದಲ್ಲಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಅವರನ್ನು ಭೇಟಿಯಾಗಿ ಬೆಂಗಳೂರಿಗೆ ರೈಲು ಟಿಕೆಟ್ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದೆವು. ಮನವಿಗೆ ಸ್ಪಂದಿಸಿದ ಅವರು ಕೂಡಲೇ ಟಿಕೆಟ್ ವ್ಯವಸ್ಥೆ ಮಾಡಿಕೊಟ್ಟರು. ಜೈಪಾಲ್ ರೆಡ್ಡಿ ಅವರ ಉಪಕಾರವನ್ನು ಎಂದಿಗೂ ಮರೆಯುವುದಿಲ್ಲ' ಎಂದರು.
`ಆತಂಕಗೊಂಡಿದ್ದೆವು'
`ಪೋಷಕರು ಜೂನ್ 14ರಂದು ಕರೆ ಮಾಡಿ ಮಾತನಾಡಿದ್ದರು. ಆ ನಂತರ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಸುದ್ದಿ ವಾಹಿನಿಗಳು ಹಾಗೂ ಪತ್ರಿಕೆಗಳಲ್ಲಿ ಪ್ರತಿನಿತ್ಯ ಬರುತ್ತಿದ್ದ ಪ್ರವಾಹಕ್ಕೆ ಸಂಬಂಧಪಟ್ಟ ಸುದ್ದಿಗಳನ್ನು ನೋಡಿ ಕುಟುಂಬ ಸದಸ್ಯರೆಲ್ಲಾ ಆತಂಕಗೊಂಡಿದ್ದೆವು' ಎಂದು ಕೇಶವರಾಜು ದಂಪತಿಯ ಮಗಳು ಕಲ್ಯಾಣಿ ಹೇಳಿದರು.
`ಪೋಷಕರಿಗೆ ಏನಾಗಿದೆಯೊ ಎಂಬ ಚಿಂತೆ ಕಾಡುತ್ತಿತ್ತು. ತಂದೆ ತಾಯಿಯನ್ನು ಯಾವಾಗ ನೋಡುತ್ತೇವೊ ಮತ್ತು ಅವರೊಂದಿಗೆ ಯಾವಾಗ ಮಾತನಾಡುತ್ತೇವೊ ಎಂದು ಕಾದು ಕುಳಿತಿದ್ದೆವು. ಈಗ ಪೋಷಕರು ಯಾವುದೇ ತೊಂದರೆ ಇಲ್ಲದೆ ವಾಪಸ್ ಬಂದಿರುವುದರಿಂದ ಸಂತೋಷವಾಗಿದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.