ADVERTISEMENT

ಮದುವೆ ಊಟ: 100 ಜನ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 19:30 IST
Last Updated 5 ಮಾರ್ಚ್ 2012, 19:30 IST

ಸಾಲಿಗ್ರಾಮ: ಮದುವೆ ಸಮಾರಂಭದಲ್ಲಿ ಊಟ ಮಾಡಿದ 100ಕ್ಕೂ ಹೆಚ್ಚು ಜನರಿಗೆ ವಾಂತಿ- ಭೇದಿ ಕಾಣಿಸಿಕೊಂಡು ಅಸ್ವಸ್ಥರಾದ ಘಟನೆ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮ ಹೋಬಳಿಯ ಮಲುಗನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಇದರಲ್ಲಿ ಮೂವರು ಶಾಲಾ ವಿದ್ಯಾರ್ಥಿಗಳು ಹಾಗೂ ಕೆಲ ಮಕ್ಕಳೂ ಸೇರಿದ್ದಾರೆ.

ಗ್ರಾಮದಲ್ಲಿ ಭಾನುವಾರ ನಡೆದ ಮದುವೆ ಸಮಾರಂಭದಲ್ಲಿ ಮಧ್ಯಾಹ್ನ ಊಟ ಮಾಡಿದ ಬಹುತೇಕ ಮಂದಿಗೆ ತಡರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡಿತು. ನಂತರ ವಾಂತಿ-ಭೇದಿ ಶುರುವಾಯಿತು. ಸೋಮವಾರ ಬೆಳಗಿನ ಜಾವದ ಹೊತ್ತಿಗೆ ವಾಂತಿ- ಭೇದಿ ಅತಿಯಾಗಿ ಕಾಣಿಸಿಕೊಂಡಿತು. ಇದರಿಂದ ಬಳಲಿದ ಕೆಲವರನ್ನು ಹಾಸನ ಜಿಲ್ಲೆ ಕೇರಳಾಪುರ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಮತ್ತೆ ಕೆಲವರು ಸಾಲಿಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದರು. ಕೆಲವರು ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದರು.

ಮದುವೆಗೆ ಬಂದಿದ್ದ ವಿದ್ಯಾರ್ಥಿಗಳಾದ ಅಭಿಲಾಷ್, ಆನಂದ್ ಹಾಗೂ ವಿಜಯ್ ಎಂಬುವರು ಹರದನಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

ಘಟನೆಯಿಂದಾಗಿ ಮಲುಗನಹಳ್ಳಿ ಗ್ರಾಮಸ್ಥರಲ್ಲಿ ಭಯ ಮನೆ ಮಾಡಿದೆ. ಇಷ್ಟೆಲ್ಲ ಅವಘಡ ಸಂಭವಿಸಿದರೂ ಸೋಮವಾರ ಸಂಜೆಯವರೆಗೆ ಈ ಗ್ರಾಮ ವ್ಯಾಪ್ತಿಗೆ ಬರುವ ಸರ್ಕಾರಿ ಆಸ್ಪತ್ರೆ ವೈದ್ಯರು ಇತ್ತ ಕಡೆ ಸುಳಿಯದ್ದರಿಂದ ಗ್ರಾಮಸ್ಥರ ಆತಂಕ ಹೆಚ್ಚಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.