ADVERTISEMENT

ಮದ್ಯಪಾನ ನಿಷೇಧ ಕಷ್ಟಸಾಧ್ಯ

ಶ್ರೀಮಂತರ ಅದ್ದೂರಿ ಮದುವೆಗೆ ಕಡಿವಾಣ ಹಾಕಲು ಚಿಂತನೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST

ದಾವಣಗೆರೆ: `ಮದ್ಯಪಾನ ನಿಷೇಧ ಕಷ್ಟಸಾಧ್ಯ. ಆದರೆ, ಈ ಬಗ್ಗೆ ಚಿಂತನೆ ನಡೆಸಲಾಗುವುದು'ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

`ಶಾಮನೂರು ಶಿವಶಂಕರಪ್ಪ ಅಭಿಮಾನಿಗಳ ಬಳಗ'ವು ನಗರದ ಮದಕರಿ ನಾಯಕ ವೃತ್ತದಲ್ಲಿ ಭಾನುವಾರ ಆಯೋಜಿಸಿದ್ದ ತೋಟಗಾರಿಕೆ ಮತ್ತು ಎಪಿಎಂಸಿ ಸಚಿವ ಶಾಮನೂರು ಶಿವಶಂಕರಪ್ಪನವರ ಹುಟ್ಟುಹಬ್ಬ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಸ್‌ಎಸ್‌ಗೆ ಶಹಬ್ಬಾಷ್‌ಗಿರಿ
ಶಾಮನೂರು ಶಿವಶಂಕರಪ್ಪ ಶಾಸಕರಾಗಿದ್ದಾಗ ವಿಧಾನಸಭೆಗೆ ಬರುವುದೇ ಕಡಿಮೆಯಾಗಿತ್ತು. ಅವರಿಗೆ ವಯಸ್ಸಾಗಿದೆ; ಸಚಿವರಾದರೆ ಏನು ಮಾಡುತ್ತಾರೋ ಎಂಬ ಅನುಮಾನ ಇತ್ತು.

83 ವರ್ಷದ ಅವರು, ಸಚಿವರಾದ ನಂತರ ಮತ್ತಷ್ಟು ಚುರುಕಾಗಿದ್ದಾರೆ. ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದು ತಮಾಷೆಯ ಮಾತಲ್ಲ.

ADVERTISEMENT

ಇದು ಅನುಭವದಿಂದ ಸಾಧ್ಯವಾಗಿದೆ. ಅವರೊಬ್ಬ ದೂರದೃಷ್ಟಿಯ ನಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಹಬ್ಬಾಷ್‌ಗಿರಿ ನೀಡಿದರು.

ಮದ್ಯಪಾನ ನಿಷೇಧಿಸಬೇಕು ಎಂಬ ಸಭಿಕರ ಕೋರಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, `ನಾನು ಅಬಕಾರಿ ಸಚಿವನಾಗಿದ್ದಾಗ ಉಪ ಸಮಿತಿ ಅಧ್ಯಕ್ಷನಾಗಿ ಹಲವು ರಾಜ್ಯಗಳಿಗೆ ಭೇಟಿ ನೀಡಿದ್ದೆ.

ಒಂದು ರಾಜ್ಯದಲ್ಲಿ ನಿಷೇಧ ಮಾಡಿ, ಮತ್ತೊಂದು ರಾಜ್ಯದಲ್ಲಿ ಮದ್ಯ ದೊರೆತರೆ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಕೊಟ್ಟಂತಾಗುತ್ತದೆ. ಮಾಡಿದರೆ, ದೇಶಾದ್ಯಂತ ನಿಷೇಧಿಸಬೇಕು' ಎಂದು ಹೇಳಿದರು.

`ಮಹಾತ್ಮ ಗಾಂಧೀಜಿ ತವರಲ್ಲಿ ಸಂಪೂರ್ಣ ಪಾನ ನಿಷೇಧ ಜಾರಿಯಾಗಿದೆ. ಆದರೆ, ಅದು ಆದೇಶದ್ಲ್ಲಲಷ್ಟೇ ಉಳಿದಿದೆ. ಸಾರಾಯಿ ನಿಷೇಧಿಸಲಾಗಿದೆ. ಸರಿ, ಸಾರಾಯಿ ಕುಡಿಯುತ್ತಿದ್ದವರು ವಿಸ್ಕಿ ಕುಡಿಯುವುದು ನಿಲ್ಲಿಸಿದ್ದಾರೆಯೇ? ಈ ಬಗ್ಗೆ ವಿಚಾರ ಮಾಡೋಣ.

ಬೇಜವಾಬ್ದಾರಿಯಿಂದ ಏನನ್ನೂ ಮಾತನಾಡಬಾರದು. ಆಗುವುದಾದರೆ ಭರವಸೆ ನೀಡಬೇಕು. ಮದ್ಯಪಾನ ನಿಷೇಧ ಕಷ್ಟ' ಎಂದು ಪುನರುಚ್ಚರಿಸಿದರು.

`ಹಾಗೆಂದು ನಾನು ಮದ್ಯಪಾನಿಗಳ ಪರ ಇದ್ದೇನೆ ಎಂದರ್ಥವಲ್ಲ. ಮದ್ಯಪಾನ ಒಳ್ಳೆಯದಲ್ಲ. ಮದ್ಯಪಾನ ಮಾಡಬಾರದು; ಮಾಡುತ್ತಿದ್ದರೆ ಬಿಟ್ಟುಬಿಡಿ' ಎಂದು ಸಲಹೆ ನೀಡಿದರು.

`ಸರಳವಾಗಿ ಮದುವೆಯಾಗುವುದು ಇಂದಿನ ಅಗತ್ಯ. ಹೀಗಾಗಿ, ಶ್ರೀಮಂತರ ಅದ್ದೂರಿ ಮದುವೆಗೆ ಹಾಗೂ ಸಂಪತ್ತು ಪ್ರದರ್ಶನ ಮಾಡುವುದಕ್ಕೆ ಕಡಿವಾಣ ಹಾಕಲು ಚಿಂತನೆ ನಡೆಸಿದ್ದೇನೆ' ಎಂದು ತಿಳಿಸಿದರು.

ಬಿಜೆಪಿ ವಿರುದ್ಧ ಟೀಕೆ: `ಆರೋಗ್ಯಕ್ಕೆ ಹಾನಿಕಾರಿಯಾದ ಗುಟ್ಕಾವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ನಿಷೇಧಿಸಲಾಗಿದೆ. ಇದನ್ನು ವಿಶೇಷವಾಗಿ ಬಿಜೆಪಿಯವರು ವಿರೋಧಿಸಿದರು. ರಾಜಕೀಯಕ್ಕೋಸ್ಕರ ವಿರೋಧಿಸುತ್ತಿರುವ ಅವರು, ಗುಟ್ಕಾ ಲಾಬಿಗೆ ಒಳಗಾದವರು ಎಂದು' ಸಿದ್ದರಾಮಯ್ಯ ಟೀಕಿಸಿದರು.

`ಗುಟ್ಕಾ ಸಿದ್ಧಪಡಿಸಲು ನಮ್ಮ ಬೆಳೆಗಾರರು ಬೆಳೆಯುವ ಅಡಿಕೆ ಬಳಕೆಯಾಗುತ್ತಿರಲಿಲ್ಲ. ಬೇರೆ ದೇಶದಿಂದ ಬರುವ ಕಳಪೆ ಅಡಿಕೆ ಉಪಯೋಗಿಸುತ್ತಿದ್ದರು. ಜನರ ಆರೋಗ್ಯ ರಕ್ಷಣೆಗೆ ಗುಟ್ಕಾ ನಿಷೇಧಿಸಿದ್ದೇವೆ' ಎಂದು ಸಮರ್ಥಿಸಿಕೊಂಡರು. `ಸರ್ಕಾರ ಬೆಳೆಗಾರರ ಜತೆಗಿರುತ್ತದೆ. ಅವರು ಆತಂಕ ಪಡುವುದು ಬೇಡ' ಎಂದೂ ಭರವಸೆ ನೀಡಿದರು.

ಲೀಟರ್ ಹಾಲಿಗೆ ರೈತರಿಗೆ ಸಹಾಯಧನವಾಗಿ ರೂ4 ಪ್ರೋತ್ಸಾಹಧನ ನೀಡಿದ್ದರಿಂದ, ಪ್ರತಿ ದಿನ 56 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಾಗಿದೆ. ಕರ್ನಾಟಕ ಹಾಲು ಮಹಾಮಂಡಳದಿಂದ ಅಷ್ಟೂ ಹಾಲನ್ನು ಮಾರಾಟ ಮಾಡಲು ಅಥವಾ ಪೌಡರ್ ಮಾಡಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ, ಹೆಚ್ಚುವರಿ ಹಾಲನ್ನು (9ಲಕ್ಷ ಲೀಟರ್) ಕೊಂಡು 1ರಿಂದ 10ನೇ ತರಗತಿಯ ಎಲ್ಲ ಮಕ್ಕಳಿಗೆ ತಲಾ 150 ಗ್ರಾಂನಂತೆ ವಿತರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.