ADVERTISEMENT

ಮದ್ಯ ನಿಷೇಧಿಸುವ ಪಕ್ಷಕ್ಕೆ ಮಹಿಳೆಯರ ಮತ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST
ಮದ್ಯ ನಿಷೇಧಿಸುವಂತೆ ಒತ್ತಾಯಿಸಿ ರಾಯಚೂರಿನಲ್ಲಿ ಭಾನುವಾರ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ನೇತೃತ್ವದಲ್ಲಿ 30 ಸಂಘಟನೆಗಳ ಮಹಿಳೆಯರು ಬೃಹತ್‌ ಪ್ರತಿಭಟನಾ ರ‍್ಯಾಲಿ ನಡೆಸಿದರು
ಮದ್ಯ ನಿಷೇಧಿಸುವಂತೆ ಒತ್ತಾಯಿಸಿ ರಾಯಚೂರಿನಲ್ಲಿ ಭಾನುವಾರ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ನೇತೃತ್ವದಲ್ಲಿ 30 ಸಂಘಟನೆಗಳ ಮಹಿಳೆಯರು ಬೃಹತ್‌ ಪ್ರತಿಭಟನಾ ರ‍್ಯಾಲಿ ನಡೆಸಿದರು   

ರಾಯಚೂರು: ‘ರಾಜ್ಯದಲ್ಲಿ ಮದ್ಯ ನಿಷೇಧ ಘೋಷಣೆಯನ್ನು ಚುನಾವಣೆ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳುವ ಪಕ್ಷಕ್ಕೆ ಮಾತ್ರ ಮಹಿಳೆಯರು ಮತ ಹಾಕಲು ನಿರ್ಧರಿಸಿದ್ದಾರೆ’ ಎಂದು ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಹೇಳಿದರು.

‘ಮದ್ಯ ನಿಷೇಧ ಆಂದೋಲನ ಕರ್ನಾಟಕ’ ಸಂಘಟನೆಯ ನೇತೃತ್ವದಲ್ಲಿ ಭಾನುವಾರ ನಗರದಲ್ಲಿ ನಡೆದ ರಾಜ್ಯಮಟ್ಟದ ಮಹಿಳಾ ಸಮಾವೇಶ ಮತ್ತು ‍ರ‍್ಯಾಲಿ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳೆಯರು ಮನಸ್ಸು ಮಾಡಿದ್ದನ್ನು ಸಾಧಿಸುತ್ತಾರೆ. ಇದಕ್ಕೆ ಬಿಹಾರ ರಾಜ್ಯವೇ ಸಾಕ್ಷಿ. ಮಹಿಳೆಯರು ಒಗ್ಗಟ್ಟಾಗಿ ಹೋರಾಟ ಮಾಡಿದ್ದರ ಫಲದಿಂದ ಬಿಹಾರದಲ್ಲಿ ಮದ್ಯ ನಿಷೇಧವಾಗಿದೆ. ಕರ್ನಾಟಕದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳೆಯರ ಬೇಡಿಕೆ ಅರ್ಥ ಮಾಡಿಕೊಂಡು ಸ್ಪಂದಿಸಬೇಕು’ ಎಂದು ಕೋರಿದರು.

ADVERTISEMENT

ಸಿರಿಗೆರೆಯ ತರಳುಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬೀದರ್‌ನ ಬಸವ ಸೇವಾ ಪ್ರತಿಷ್ಠಾನದ ಗಂಗಾಬಿಕ ಅಕ್ಕ, ಮಹಿಳಾ ಪರ ಹೋರಾಗಾರ್ತಿ ಸಿಸ್ಟರ್‌ ಟೀನಾ, ಇಳಕಲ್‌ನ ಪ್ರಗತಿಪರ ಚಿಂತಕ ಲಾಲ್‌ ಹುಸೇನ್‌ ಮಾತನಾಡಿದರು.

ಮಧ್ಯ ನಿಷೇಧಕ್ಕೆ ಒತ್ತಾಯಿಸಿ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಮಹಿಳೆಯರು ಎಪಿಎಂಸಿ  ಆವರಣದಿಂದ ನಗರ ಮಧ್ಯದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದವರೆಗೂ ಬೃಹತ್‌ ರ‍್ಯಾಲಿ ನಡೆಸಿದರು.

ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ವಿವಿಧ ಪಕ್ಷಗಳ ಜಿಲ್ಲಾ ಮುಖಂಡರಿಗೆ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಮನವಿ ಸಲ್ಲಿಸಲಾಯಿತು.

ಆಳಂದ ಶಾಸಕ ಬಿ.ಆರ್‌.ಪಾಟೀಲ, ಜನಾಂದೋಲನಗಳ ಮಹಾಮೈತ್ರಿ ರಾಜ್ಯ ಸಂಚಾಲಕ ರಾಘವೇಂದ್ರ ಕುಷ್ಟಗಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

‘ಬಿಹಾರದಲ್ಲಿ ಮದ್ಯ ಮಾರಾಟ ಹೆಚ್ಚಳ’

‘ಬಿಹಾರದಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದು, ಶೇ 5 ರಷ್ಟು ಕದ್ದುಮುಚ್ಚಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರು ಈಚೆಗೆ ತಮ್ಮ ರಾಜನೀತಿ ಬದಲಾಯಿಸಿಕೊಂಡಿದ್ದರಿಂದ ಮದ್ಯಮಾರಾಟವು ಶೇ 18 ರಷ್ಟು ಹೆಚ್ಚಳವಾಗಿದೆ’ ಎಂದು ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಹಾರದಲ್ಲಿ ಮದ್ಯ ನಿಷೇಧದ ಮಾದರಿ ಕಾನೂನು ಜಾರಿಯಾಗಿದೆ. ಆದರೆ ನಿತೀಶಕುಮಾರ್‌ ಅವರ ರಾಜನೀತಿಯಿಂದಾಗಿ ಅದು ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.