ADVERTISEMENT

ಮನೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ

ಮುಕ್ತ ವಿಶ್ವವಿದ್ಯಾನಿಲಯದ ಮಾನವೀಯತೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST
ರಮೇಶ್ ಗೋವಿಂದ ಹೆಗಡೆ
ರಮೇಶ್ ಗೋವಿಂದ ಹೆಗಡೆ   

ಮೈಸೂರು: ಮೂಳೆ ಸಮಸ್ಯೆಯಿಂದ ಬಳಲುತ್ತಿರುವ ಪ್ರಥಮ ವರ್ಷದ ಬಿ.ಎ ವಿದ್ಯಾರ್ಥಿ ರಮೇಶ್ ಗೋವಿಂದ ಹೆಗಡೆಗೆ ಮನೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡುವ ಮೂಲಕ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾನವೀಯತೆ ಮೆರೆದಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 34 ವರ್ಷದ ರಮೇಶ್ ಗೋವಿಂದ ಹೆಗಡೆ ಹುಟ್ಟಿನಿಂದ `ಆಸ್ಟಿಯೋ ಜೆನಿಸಿಸ್ ಇಂಪರ್‌ಫೆಕ್ಟಾ' ಕಾಯಿಲೆಯಿಂದ ಬಳಲುತ್ತಿದ್ದಾರೆ. ಮೂಳೆ ಮೃದುವಾಗಿದ್ದು, ಕೂರಲು ಸಾಧ್ಯವಿಲ್ಲದಷ್ಟು ದುರ್ಬಲವಾಗಿವೆ. ಹಾಸಿಗೆಯಲ್ಲೇ ಜೀವನ ಸವೆಸುತ್ತಿರುವ ರಮೇಶ್ ಬದುಕುವ ಛಲದಿಂದ ಪ್ರಸಕ್ತ ಸಾಲಿನಲ್ಲಿ ಮುಕ್ತ ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ಬಿ.ಎಗೆ ಪ್ರವೇಶ ಪಡೆದಿದ್ದಾರೆ.

ಹಾಸಿಗೆಯಿಂದ ಮೇಲೇಳಲು ಸಾಧ್ಯವಾಗದ ಕಾರಣಕ್ಕೆ ಏಪ್ರಿಲ್ 20 ರಿಂದ ಆರಂಭವಾಗಲಿರುವ ಪರೀಕ್ಷೆಯನ್ನು ಮನೆಯಲ್ಲಿಯೇ ಬರೆಯಲು ಅವಕಾಶ ಕೋರಿದ್ದರು. ಇದಕ್ಕೆ ವಿಶ್ವವಿದ್ಯಾನಿಲಯ ಅನುಮತಿ ನೀಡಿದ್ದು, ಪರೀಕ್ಷೆಯಲ್ಲಿ ಗಣನೀಯ ಸುಧಾರಣೆ ತರಲು ಮುಂದಾಗಿದೆ ಎಂದು ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.

`ವಿಶೇಷ ವಿದ್ಯಾರ್ಥಿಗಳಿಗೆ ಅಗತ್ಯವಿದ್ದರೆ ಮನೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಲು ವಿಶ್ವವಿದ್ಯಾನಿಲಯ ನಿರ್ಧರಿಸಿದೆ. ಈ ಕುರಿತು ನೀತಿಯೊಂದನ್ನು ರೂಪಿಸಲು ಚಿಂತಿಸಿದೆ' ಎಂದು ಕುಲಪತಿ ಪ್ರೊ.ಎಂ.ಜಿ.ಕೃಷ್ಣನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT