ಬೆಂಗಳೂರು: ‘ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಆವರಣದಲ್ಲಿ ₨100 ಕೋಟಿ ವೆಚ್ಚದಲ್ಲಿ ಮಾನಸಿಕ ಕಾಯಿಲೆ ಪೀಡಿತರ ಪುನರ್ವಸತಿ ಕೇಂದ್ರ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಸಫಾಯಿ ಕರ್ಮಚಾರಿಗಳು ಹಾಗೂ ಅಂಗವಿಕಲರಿಗಾಗಿ ರೂಪಿಸಿರುವ ‘ಸ್ವಾವಲಂಬನ’ ಯೋಜನೆಗೆ ಶನಿವಾರ ಇಲ್ಲಿ ಚಾಲನೆ ನೀಡಿ ಮಾತನಾಡಿದರು.
‘ಮಾನಸಿಕ ಕಾಯಿಲೆಗಳಿಂದ ನರಳುತ್ತಿರುವವರನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಲು ಇಂಥ ಕೇಂದ್ರದ ಅಗತ್ಯವಿದೆ’ ಎಂದು ಮಾಹಿತಿ ನೀಡಿದರು.
‘ಮೊದಲ ಹಂತದಲ್ಲಿ ಸುಮಾರು ₨25 ಕೋಟಿ ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ ರಾಜ್ಯ ಸರ್ಕಾರದ ಸಹಕಾರ ಪಡೆಯಲಿದ್ದೇವೆ’ ಎಂದು ಹೇಳಿದರು.
‘ಅಂಗವಿಕಲರೆಂದು ಗುರುತಿಸಲು ಏಳು ಅಂಗವೈಕಲ್ಯದ ನ್ಯೂನತೆಗಳ ಜತೆಯಲ್ಲಿ ಹೆಚ್ಚುವರಿಯಾಗಿ 12 ನ್ಯೂನತೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಅಂಗವಿಕಲರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಹೆಚ್ಚಿನ ಪ್ರಚಾರ ನಡೆಯಬೇಕಿದೆ’ ಎಂದು ತಿಳಿಸಿದರು.
‘ಅಂಗವಿಕಲರು ಸಹಾಯಧನವನ್ನು ಪಡೆಯಲು ₨6,500 ಇದ್ದ ಆದಾಯದ ಮಿತಿಯನ್ನು, ₨ 20 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ವಾವಲಂಬನಾ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ’ ಎಂದು ತಿಳಿಸಿದರು.
ರಾಜ್ಯದಲ್ಲಿ 302 ಸಫಾಯಿ ಕರ್ಮಚಾರಿಗಳು!: ‘ಎಷ್ಟೇ ಕಾನೂನುಗಳನ್ನು ತಂದರೂ ರಾಜ್ಯದಲ್ಲಿ ಮಲ ಹೊರುವವರು ಇನ್ನೂ ಇದ್ದಾರೆ. ಪ್ರಸ್ತುತ ನಡೆದ ಸಮೀಕ್ಷೆಯಲ್ಲಿ 302 ಮಂದಿ ಮಲ ಹೊರುವವರನ್ನು ಗುರುತಿಸಲಾಗಿದ್ದು, ಈ ಪ್ರತಿಯೊಬ್ಬರಿಗೂ ₨ 40 ಸಾವಿರ ಸಹಾಯ ಧನ ಒದಗಿಸಲಾಗುವುದು. ಮಲ ಹೊರುವ ಪದ್ದತಿಯನ್ನು ಕೈ ಬಿಟ್ಟು, ಅವರು ಹೊಸ ಉದ್ಯೋಗವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಸಹಾಯಧನ ನೀಡಲಾಗುತ್ತದೆ’ ಎಂದರು.
ಬೆಂಗಳೂರಿನಲ್ಲಿಯೇ 200 ಮಂದಿ: ಬಿಬಿಎಂಪಿ ಆಯುಕ್ತ ಲಕ್ಷ್ಮಿನಾರಾಯಣ, ‘ಬೆಂಗಳೂರು ನಗರದಲ್ಲಿ ಮಲ ಹೊರುವ 200 ಕಾರ್ಮಿಕರನ್ನು ಗುರುತಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.