ADVERTISEMENT

ಮನ ತಣಿಸಿದೆ, ಅನುಷ್ಠಾನ ಹೇಗೆ?

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 19:05 IST
Last Updated 24 ಫೆಬ್ರುವರಿ 2011, 19:05 IST

ಇದು ಬಿಜೆಪಿ ಸರ್ಕಾರದ ಮೂರನೇ ಬಜೆಟ್. ಸರ್ಕಾರದ ಅವಧಿಯ ಅಂದರೆ ಮಧ್ಯಕಾಲೀನ ಬಜೆಟ್. ಈ ಅವಧಿಯಲ್ಲಿ ಸರ್ಕಾರಗಳು ತೆರಿಗೆ ಹೇರುವ ಮೂಲಕ ಸಂಪನ್ಮೂಲ ಕ್ರೋಡೀಕರಣಕ್ಕೆ ಕೈಹಾಕುವುದು ಸಹಜ. ಆದರೆ ಯಾವುದೇ ತೆರಿಗೆಯನ್ನೂ ಹೇರದೆ, ಜನಪ್ರಿಯ ಕಾರ್ಯಕ್ರಮಗಳನ್ನು ಪ್ರಕಟಿಸಿರುವ ಈ ಬಜೆಟ್ ಚುನಾವಣೆಯ ಮೊದಲಿನ ಬಜೆಟ್‌ನಂತಿದೆ.

ಚುನಾವಣೆಯ ಮುಂಚೆ ತೆರಿಗೆ ಹೇರಿದರೆ ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಆದ್ದರಿಂದ ಯಾವಾಗಲೂ ಮೂರನೇ ವರ್ಷ ಸರ್ಕಾರದ ಮಧ್ಯದ ಅವಧಿ. ಆಗ ತೆರಿಗೆ ಹೇರಿದರೆ ಎರಡು ವರ್ಷಗಳ ಬಳಿಕ ಚುನಾವಣೆ ಬಂದಾಗ ಜನರು ಅದನ್ನು ಮರೆತಿರುತ್ತಾರೆ. ಈ ಕಾರಣದಿಂದಾಗಿಯೇ ಎಲ್ಲ ಪಕ್ಷಗಳ ಸರ್ಕಾರಗಳೂ ಮೂರನೇ ವರ್ಷ ತೆರಿಗೆ ಮೂಲಕ ಸಂಪನ್ಮೂಲ ಸಂಗ್ರಹಕ್ಕೆ ಆದ್ಯತೆ ನೀಡುತ್ತವೆ.
ತೆರಿಗೆ ಹೇರಿಕೆ ಮತ್ತು ಕಾರ್ಯಕ್ರಮಗಳ ದೃಷ್ಟಿಯಿಂದ ನೋಡಿದರೆ ಇದು ಚುನಾವಣೆ ಮುಂಚಿನ ಬಜೆಟ್‌ನಂತೆಯೇ ಇದೆ. ಮುಂದಿನ ಒಂದು ವರ್ಷದ ಅವಧಿಯೊಳಗೆ ಚುನಾವಣೆ ನಡೆಯಬಹುದೆಂಬ ಸುಳಿವು ಅರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಬಜೆಟ್ ರೂಪಿಸಿರಬಹುದು ಎಂಬ ಸಂಶಯ ಜನಸಾಮಾನ್ಯರಲ್ಲಿ ಮೂಡುವುದು ಸಹಜ.
ಸರ್ಕಾರಿ ನೌಕರರಿಗೆ ನಿರಾಸೆ: ಸರ್ಕಾರಿ ನೌಕರರನ್ನು ಹೊರತುಪಡಿಸಿದರೆ ಇದು ಎಲ್ಲರಿಗೂ ಸ್ವಲ್ಪವಾದರೂ ಸಂತೋಷ ಉಂಟುಮಾಡಿರುವ ಬಜೆಟ್ ಎಂದು ಹೇಳಬಹುದು. ರೈತರು, ಉದ್ಯಮಿಗಳು, ಕಾರ್ಮಿಕರು ಎಲ್ಲರಿಗೂ ಒಂದಲ್ಲಾ ಒಂದು ಕೊಡುಗೆಯನ್ನು ಸರ್ಕಾರ ಬಜೆಟ್‌ನಲ್ಲಿ ನೀಡಿದೆ. ಆದರೆ ಆರನೇ ವೇತನ ಆಯೋಗ ರಚಿಸಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದ ಸರ್ಕಾರಿ ನೌಕರರಿಗೆ ನಿರಾಸೆ ಮೂಡಿಸಿದೆ.
ಸರ್ಕಾರಿ ನೌಕರರಲ್ಲಿ ಬಹುತೇಕರು ಬಿಜೆಪಿ ಪರ ಇದ್ದಾರೆ ಎಂಬ ಭಾವನೆ ಸಾಮಾನ್ಯವಾಗಿದೆ. ಅಲ್ಲದೇ ಆಡಳಿತ ನಡೆಸುವ ಸರ್ಕಾರವೊಂದು ಯಾವಾಗಲೂ ಸರ್ಕಾರಿ ನೌಕರರನ್ನು ತನ್ನಪರ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ. ಆಡಳಿತ ಯಂತ್ರದ ಯಶಸ್ಸಿಗಾಗಿ ಇಂತಹ ನಿಲುವು ತಾಳುವುದು ಸಹಜ. ಆದರೆ ಬಿ.ಎಸ್.ಯಡಿಯೂರಪ್ಪ ಅವರು ಇದಕ್ಕೆ ವಿರುದ್ಧವಾದ ನಿಲುವು ತಾಳಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಯೋಜನೆ ಅಗತ್ಯ: ಎಲ್ಲರ ಮನವನ್ನೂ ತಣಿಸುವಂತಹ ಬಜೆಟ್ ನೀಡಬಹುದು. ಆದರೆ ಅದನ್ನು ಪೂರ್ಣವಾಗಿ ಅನುಷ್ಠಾನಕ್ಕೆ ತರುವುದು ಕಷ್ಟ. ರಾಜಸ್ವ ಸಂಗ್ರಹದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿದರೆ ಮಾತ್ರವೇ, ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳಿಗೆ ಹಣ ಒದಗಿಸಲು ಸಾಧ್ಯ. ಆ ದಿಕ್ಕಿನಲ್ಲಿ ಯೋಜನೆ ಹಾಕಿಕೊಂಡು ಮುನ್ನಡೆದರೆ ಮಾತ್ರವೇ ಬಜೆಟ್ ಅನುಷ್ಠಾನದಲ್ಲಿ ಯಶಸ್ಸು ಕಾಣಬಹುದು.
ಈಗ ಸರ್ಕಾರವೇ ನೀಡಿರುವ ಅಂಕಿ-ಅಂಶಗಳನ್ನು ನೋಡಿದರೆ ರಾಜಸ್ವ ಸಂಗ್ರಹದಲ್ಲಿ ರಾಜ್ಯದ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ಅದನ್ನು ಸರಿಪಡಿಸಿಕೊಳ್ಳುವುದಕ್ಕೆ ಸರ್ಕಾರ ಮೊದಲು ಆದ್ಯತೆ ನೀಡಬೇಕು. ಸಂಗ್ರಹವಾಗುವ ವರಮಾನ ಮತ್ತು ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಿರುವ ಮೊತ್ತದ ನಡುವೆ ಹೆಚ್ಚು ಅಂತರ ಇರಬಾರದು.
ಯಾವಾಗಲೂ ಸರ್ಕಾರಗಳು ಪ್ರಕಟಿಸುವ ಬಜೆಟ್‌ಗಳಲ್ಲಿ ಶೇಕಡ 70ರಿಂದ 75ರಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಾಧ್ಯ. ಅಷ್ಟರಮಟ್ಟಿಗೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗುತ್ತದೆ. ಜನತೆ ಕೂಡ ಅಂತಹ ನಿರೀಕ್ಷೆ ಹೊಂದಿರುತ್ತಾರೆ. ಜನತೆಯ ನಿರೀಕ್ಷೆ ಮತ್ತು ನಿಜದ ನಡುವಿನ ವ್ಯತ್ಯಾಸ ದೊಡ್ಡದಾಗುತ್ತಾ ಹೋದರೆ ಸರ್ಕಾರ ಜನರ ವಿರೋಧಕ್ಕೆ ಗುರಿಯಾಗಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.