ADVERTISEMENT

ಮರಕ್ಕೆ ಡಿಕ್ಕಿ: ಇಬ್ಬರ ಸಾವು

ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 19:59 IST
Last Updated 21 ಜೂನ್ 2013, 19:59 IST

ಕೆಜಿಎಫ್: ಅಕ್ರಮವಾಗಿ ರಕ್ತ ಚಂದನ ಸಾಗಿಸುತ್ತಿದ್ದ ವಾಹನವೊಂದು ಆಂಧ್ರಪ್ರದೇಶದ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮರಕ್ಕೆ ಡಿಕ್ಕಿ ಹೊಡೆದುದರಿಂದ ಇಬ್ಬರು ಮೃತಪಟ್ಟು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ಎನ್.ಜಿ.ಹುಲ್ಕೂರು ಬಳಿ ಶುಕ್ರವಾರ ಮುಂಜಾನೆ ನಡೆದಿದೆ.

ಆಂಧ್ರಪ್ರದೇಶದ ವಿ.ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಕ್ತ ಚಂದನ ಕಳ್ಳತನ ಮಾಡಿದ ತಂಡವು ವಾಹನದಲ್ಲಿ ಕರ್ನಾಟಕದತ್ತ ಸಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆಂಧ್ರ ಪೊಲೀಸರು ಗಡಿ ಬಳಿ ಕಾಯುತ್ತಿದ್ದರು. ಮುಂಜಾನೆ ನಾಲ್ಕು ಗಂಟೆ ಸಮಯದಲ್ಲಿ ಬೆಂಗಳೂರು ನಗರದ ನೋಂದಣಿ ಹೊಂದಿದ ಟಾಟಾ ಸುಮೊ ವಾಹನವನ್ನು ಪತ್ತೆ ಹಚ್ಚಿದ ಪೊಲೀಸರು ಅದನ್ನು ಬೆನ್ನಟ್ಟಿದರು.

ಪೊಲೀಸರಿಂದ ತಪ್ಪಿಸಿಕೊಳ್ಳಲು ಆಂಧ್ರಪ್ರದೇಶ ದಾಟಿ ಕರ್ನಾಟಕದ ಗಡಿ ಪ್ರವೇಶಿಸಿದರೂ ಪೊಲೀಸರು ಬಿಡಲಿಲ್ಲ. ಪೊಲೀಸರಿಂದ ತಪ್ಪಿಸಿಕೊಳ್ಳಲು ಟಾಟಾ ಸುಮೊ ಚಾಲಕ ವೇಗ ಹೆಚ್ಚಿಸಿದಾಗ ಎನ್.ಜಿ. ಹುಲ್ಕೂರು ಸಮೀಪ ಸೇತುವೆ ಬಳಿ ವಾಹನವು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆಯಿತು.

ಡಿಕ್ಕಿಯ ರಭಸಕ್ಕೆ ವಾಹನ ನುಚ್ಚುನೂರಾಗಿದ್ದು, ವಾಹನದಲ್ಲಿದ್ದ ಮೈಸೂರು ನಿವಾಸಿ ಅಯೂಬ್ ಆಲಿ (35) ಸ್ಥಳದಲ್ಲೇ ಮೃತಪಟ್ಟನು. ತೀವ್ರವಾಗಿ ಗಾಯಗೊಂಡಿದ್ದ ಸೇಲಂ ನಿವಾಸಿ ಚಕ್ರಪಾಂಡ್ಯ ಎಂಬಾತ ಆಸ್ಪತ್ರೆಗೆ ಸಾಗಿಸುವಾಗ ಅಸು ನೀಗಿದ.

ನಂತರ ಕರ್ನಾಟಕ ಪೊಲೀಸರು ಸ್ಥಳ ಪರಿಶೀಲನೆಗೆ ಹೋದಾಗ ಸಮೀಪದ ಕಾಡಿನ ಪೊದೆಗಳಿಂದ ಆರ್ತನಾದ ಕೇಳಿಬಂದಿತು. ತಪಾಸಣೆ ನಡೆಸಿದಾಗ ಅಪಘಾತದಲ್ಲಿ ಗಾಯಗೊಂಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಮೇಡಿಮಲ್ಲಹಳ್ಳಿ ನಿವಾಸಿ ರಫೀಕ್ ಎಂಬಾತ ಕಂಡು ಬಂದ.

ಆತನನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸಾಗಿಸಲಾಯಿತು.ಪ್ರಭಾರ ಎಸ್ಪಿ ಎನ್.ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿದ್ದರು. ಬೇತಮಂಗಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.