ADVERTISEMENT

ಮರೀಗೌಡ ಶರಣು: ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2016, 20:00 IST
Last Updated 3 ಆಗಸ್ಟ್ 2016, 20:00 IST
ಮೈಸೂರಿನ ನಜರಬಾದ್‌ ಠಾಣೆಗೆ ಶರಣಾದ ಕೆ.ಮರೀಗೌಡ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲು ಪೊಲೀಸರು ಬುಧವಾರ 3ನೇ ಜೆಎಂಎಫ್‌ ನ್ಯಾಯಾಲಯಕ್ಕೆ ಕರೆತಂದರು.
ಮೈಸೂರಿನ ನಜರಬಾದ್‌ ಠಾಣೆಗೆ ಶರಣಾದ ಕೆ.ಮರೀಗೌಡ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲು ಪೊಲೀಸರು ಬುಧವಾರ 3ನೇ ಜೆಎಂಎಫ್‌ ನ್ಯಾಯಾಲಯಕ್ಕೆ ಕರೆತಂದರು.   

ಮೈಸೂರು: ಜಿಲ್ಲಾಧಿಕಾರಿ ಸಿ.ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಎದುರಿಸುತ್ತಿರುವ ಕೆ.ಮರೀಗೌಡ ತಿಂಗಳ ಅಜ್ಞಾತವಾಸದ ಬಳಿಕ ಬುಧವಾರ ಇಲ್ಲಿನ ನಜರಬಾದ್ ಪೊಲೀಸ್‌ ಠಾಣೆಗೆ ಶರಣಾದರು.

ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಜಯನಗರದ ಮೂರನೇ ಜೆಎಂಎಫ್‌ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ ಆ. 16ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಆರೋಪಿ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿಗೆ ತಕರಾರರು ಸಲ್ಲಿಸಲು ಸಹಾಯಕ ಸರ್ಕಾರಿ ಅಭಿಯೋಜಕರಿಗೆ ಕಾಲಾವಕಾಶ ನೀಡಿತು.

ಮರೀಗೌಡ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ಮಂಗಳವಾರ ವಜಾ ಮಾಡಿದ್ದರಿಂದ ಬುಧವಾರ ಮೈಸೂರು ಪೊಲೀಸರಿಗೆ ಶರಣಾಗಬಹುದು ಎಂಬ ವದಂತಿಗಳು ಹಬ್ಬಿದ್ದವು. ಮಧ್ಯಾಹ್ನ 1.50ಕ್ಕೆ ವಕೀಲರೊಂದಿಗೆ ನಜರಬಾದ್‌ ಠಾಣೆಗೆ ಧಾವಿಸಿದ ಆರೋಪಿಯು ಎಸ್‌ಐ ಸತೀಶ್ ಎದುರು ಹಾಜರಾದರು.

ಎಸಿಪಿ ರಾಜಶೇಖರ್ ನೇತೃತ್ವದ ಪೊಲೀಸ್‌ ಅಧಿಕಾರಿಗಳ ತಂಡ ಸುಮಾರು ಎರಡು ಗಂಟೆ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿತು. ಬಳಿಕ ಕೆ.ಆರ್‌.ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಿ, ಜಯನಗರದಲ್ಲಿರುವ 3ನೇ ಜೆಎಂಎಫ್‌ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ದೀಪಾ ಎದುರು ಹಾಜರುಪಡಿಸಿತು.

ಇತರ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದ ಪರಿಣಾಮ ಸುಮಾರು 20 ನಿಮಿಷ ನ್ಯಾಯಾಲಯದ ಆವರಣದಲ್ಲಿರುವ ಕೊಠಡಿಯೊಂದರಲ್ಲಿ ಆರೋಪಿಯನ್ನು ಇರಿಸಲಾಗಿತ್ತು. ಕಿಕ್ಕಿರಿದು ಸೇರಿದ್ದ ನ್ಯಾಯಾಲಯದಲ್ಲಿ ಮರೀಗೌಡ ವಿಚಾರಣೆ ನಡೆಯಿತು. ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ನೀಡಿದರು.

ಬಳಿಕ ಆರೋಪಿ ಪರ ವಕೀಲ ಸಿ.ಎಂ.ಜಗದೀಶ್‌ ಜಾಮೀನು ಅರ್ಜಿ ಸಲ್ಲಿಸಿದರು. ‘ಹೈಕೋರ್ಟ್‌ನಲ್ಲಿ ವಾಗ್ದಾನ ನೀಡಿದಂತೆ ಆರೋಪಿ ನಡೆದುಕೊಂಡಿದ್ದು, ಪೊಲೀಸರ ಎದುರು ಹಾಜರಾಗಿದ್ದಾರೆ. ಹೀಗಾಗಿ, ಕಕ್ಷಿದಾರರಿಗೆ ಜಾಮೀನು ಮಂಜೂರು ಮಾಡುವಂತೆ’ ಮನವಿ ಮಾಡಿಕೊಂಡರು.

ಶರಣಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ನಜರಬಾದ್‌ ಠಾಣೆಯ ಎದುರು ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಹೀಗಾಗಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಪೊಲೀಸರು ಪೇಚಿಗೆ ಸಿಲುಕಿದರು. ನ್ಯಾಯಾಲಯದ ಆವರಣದ ಎದುರು ಕಾಂಗ್ರೆಸ್‌ ಕಾರ್ಯಕರ್ತರು ಸೇರಿದ್ದರು.

ಘಟನೆಗೆ ತಿಂಗಳು: ಜುಲೈ 3ರಂದು ಸಿದ್ದಿಕ್ಕಿ ನಗರದಲ್ಲಿ ಆಯೋಜಿಸಿದ್ದ ಇಫ್ತಾರ್‌ ಕೂಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರು. ಸರ್ಕಾರಿ ಅತಿಥಿಗೃಹಕ್ಕೆ ಬಂದಿದ್ದ ಮುಖ್ಯಮಂತ್ರಿಯನ್ನು ಜಿಲ್ಲಾಧಿಕಾರಿ ಸಿ.ಶಿಖಾ ಶಿಷ್ಟಾಚಾರದಂತೆ ಸ್ವಾಗತಿಸಿದ್ದರು. ಯಾದಗಿರಿ ಜಿಲ್ಲೆಗೆ ವರ್ಗಾವಣೆಗೊಂಡಿದ್ದ ಮೈಸೂರು ತಹಶೀಲ್ದಾರ್‌ ನವೀನ್‌ ಜೋಸೆಫ್‌ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸುವ ಸಂಬಂಧ ಕೆ.ಮರೀಗೌಡ ಹಾಗೂ ಜಿಲ್ಲಾಧಿಕಾರಿ ಶಿಖಾ ನಡುವೆ ವಾಗ್ವಾದ ನಡೆದಿತ್ತು.

ಮುಖ್ಯಮಂತ್ರಿ ಇಫ್ತಾರ್‌ ಕೂಟಕ್ಕೆ ತೆರಳಿದ ಬಳಿಕ ಜಿಲ್ಲಾಧಿಕಾರಿ ಕಾರನ್ನು ಮರೀಗೌಡ ಬೆಂಬಲಿಗರು ಅಡ್ಡಹಾಕಿದ್ದರು. ಮಹಿಳಾ ಅಧಿಕಾರಿಗೆ ಏಕವಚನದಲ್ಲಿ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ಸಂಬಂಧ ನಜರಬಾದ್‌ ಠಾಣೆಯಲ್ಲಿ ಐವರು ಆರೋಪಿಗಳ ವಿರುದ್ಧ ದೂರು ದಾಖಲಾಗಿತ್ತು.

ಪೊಲೀಸರ ವೈಫಲ್ಯ:  ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿ ಮಂಜುನಾಥ ಎಂಬಾತನ್ನು ಪೊಲೀಸರು ಬಂಧಿಸಿದ್ದರು. ಆದರೆ, ಪ್ರಮುಖ ಆರೋಪಿ ಮರೀಗೌಡ ಸೇರಿದಂತೆ ಇತರರನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಇತರ ಆರೋಪಿಗಳಾದ ಬಸವರಾಜು, ಆನಂದ ಹಾಗೂ ಸಿದ್ದರಾಜು ಈವರೆಗೆ ಪತ್ತೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT