ADVERTISEMENT

ಮರು ಎಣಿಕೆ ಫಲಿತಾಂಶ ಮೊದಲೇ ಸಂದರ್ಶನ!

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 19:59 IST
Last Updated 1 ಜುಲೈ 2013, 19:59 IST
ಮರು ಎಣಿಕೆ ಫಲಿತಾಂಶ ಮೊದಲೇ ಸಂದರ್ಶನ!
ಮರು ಎಣಿಕೆ ಫಲಿತಾಂಶ ಮೊದಲೇ ಸಂದರ್ಶನ!   

ಬೆಂಗಳೂರು: ವಿವಾದಗಳ ಗೂಡಾಗಿ ಸಿಐಡಿ ತನಿಖೆಗೆ ಗುರಿಯಾಗಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮತ್ತೊಂದು ಎಡವಟ್ಟು ಮಾಡಿರುವುದು ಈಗ ಬೆಳಕಿಗೆ ಬಂದಿದೆ. ಮುಖ್ಯ ಪರೀಕ್ಷೆಯ ಫಲಿತಾಂಶದ ನಂತರ ಹಲವು ಅಭ್ಯರ್ಥಿಗಳು ಮರು ಎಣಿಕೆಗೆ ಮನವಿ ಸಲ್ಲಿಸಿದರೂ ಅವರ ಫಲಿತಾಂಶ ಬರುವುದಕ್ಕೆ ಮೊದಲೇ ಸಂದರ್ಶನ ಪ್ರಕ್ರಿಯೆ ಪೂರ್ಣಗೊಳಿಸಿದೆ.

ಲಿಖಿತ ಪರೀಕ್ಷೆಯ ಫಲಿತಾಂಶ ಪ್ರಕಟವಾದ ನಂತರ 600ಕ್ಕೂ ಹೆಚ್ಚು ಅಭ್ಯರ್ಥಿಗಳು ಅಂಕಗಳ ಮರು ಎಣಿಕೆಗೆ ಮನವಿ ಸಲ್ಲಿಸಿದ್ದರು. ಇವರಲ್ಲಿ 17 ಅಭ್ಯರ್ಥಿಗಳು ಸಂದರ್ಶನಕ್ಕೆ ಅರ್ಹರಾಗಿದ್ದರು. ಆದರೆ ಮರು ಎಣಿಕೆಯ ಫಲಿತಾಂಶ ಬರುವುದಕ್ಕೆ ಮೊದಲೇ ಸಂದರ್ಶನದ ಪ್ರಕ್ರಿಯೆ ಮುಗಿದು ಹೋಗಿತ್ತು. ಈ ಬಗ್ಗೆ ತಕರಾರು ತೆಗೆದಿದ್ದರಿಂದ ಜೂನ್ 3ರಂದು ಸಂದರ್ಶನಕ್ಕೆ ಹಾಜರಾಗುವಂತೆ ಈ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ಸೂಚನೆ ನೀಡಿತ್ತು.

ಆದರೆ ಅಷ್ಟರಲ್ಲಿಯೇ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂಬ ಕೂಗು ಎದ್ದಿದ್ದರಿಂದ ರಾಜ್ಯ ಸರ್ಕಾರ ಈ ಬಗ್ಗೆ ಸಿಐಡಿ ತನಿಖೆಗೆ ಆದೇಶ ನೀಡಿತು. ಇದರಿಂದ ಜೂನ್ 3ರಂದು ನಡೆಯಬೇಕಾಗಿದ್ದ ಸಂದರ್ಶನವನ್ನು ರದ್ದು ಪಡಿಸಲಾಯಿತು. ಸಾಮಾನ್ಯ ವರ್ಗ, ಹಿಂದುಳಿದ ವರ್ಗ, ಪರಿಶಿಷ್ಟ ವರ್ಗ, ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿಗಳು ಹಾಗೂ ಈ ಎಲ್ಲ ವರ್ಗಗಳಿಗೆ ಸೇರಿದ ಮಹಿಳಾ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಪ್ರಕಾರ ಅವರನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. 939.5ಕ್ಕಿಂತ ಹೆಚ್ಚು ಅಂಕ ಪಡೆದ ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು. 2 ಎ ವರ್ಗದಲ್ಲಿ 844.5, 2 ಬಿ ಯಲ್ಲಿ 824.5, 3 ಎ- 906, 3 ಬಿ- 885, ಎಸ್‌ಸಿ- 852.5 ಎಸ್‌ಟಿ- 896 ಕ್ಕಿಂತ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಕರೆದು ಸಂದರ್ಶನ ನಡೆಸಲಾಗಿತ್ತು.

ಮೇ 7ರಿಂದ 1,077 ಅಭ್ಯರ್ಥಿಗಳ ಸಂದರ್ಶನ ನಡೆಯಿತು. ಈ ಪ್ರಕ್ರಿಯೆ ಮುಗಿದ ನಂತರ ಮರು ಎಣಿಕೆಯ ಫಲಿತಾಂಶ ಪ್ರಕಟವಾಯಿತು. ಸುಬ್ಬಯ್ಯ ಎಂಬ ಅಭ್ಯರ್ಥಿ ಲಿಖಿತ ಪರೀಕ್ಷೆಯಲ್ಲಿ 924 ಅಂಕ ಗಳಿಸಿದ್ದರು. ಅವರಿಗೆ ಸಂದರ್ಶನ ಕೂಡ ನಡೆಯಿತು.

ಸಂದರ್ಶನದಲ್ಲಿ 140 ಅಂಕ ನೀಡಲಾಯಿತು. ಒಟ್ಟು ಅಂಕ 1064. ಆದರೂ ತಮಗೆ ಯಾವುದೇ ಹುದ್ದೆ ಸಿಗುವುದಿಲ್ಲ ಎಂಬ ನಂಬಿಕೆಯಲ್ಲಿದ್ದ ಅವರಿಗೆ ಮರು ಎಣಿಕೆ ಈಗ ಹೊಸ ಆಸೆ ಚಿಗುರಿಸಿದೆ. ಅಂಕಗಳ ಮರು ಎಣಿಕೆಯಲ್ಲಿ ಅವರಿಗೆ 57 ಅಂಕ ಹೆಚ್ಚಿಗೆ ಬಂದಿದೆ. ಇದರಿಂದ ಅವರ ಒಟ್ಟು ಅಂಕ 1121ಕ್ಕೆ ಏರಿದೆ. ಜೊತೆಗೆ ಯಾವುದಾದರೂ ಒಳ್ಳೆಯ ಹುದ್ದೆ ಸಿಗುವ ಕನಸನ್ನೂ ಹುಟ್ಟು ಹಾಕಿದೆ.

ಅವಳಿ ಮಕ್ಕಳಿಗೆ ಭರ್ಜರಿ ಅಂಕ: ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಅವಳಿ ಮಕ್ಕಳಿಗೆ ಸಂದರ್ಶನದಲ್ಲಿ ಭರ್ಜರಿ ಅಂಕ ನೀಡಲಾಗಿದೆ. ಒಬ್ಬರಿಗೆ 150 ಮತ್ತು ಇನ್ನೊಬ್ಬರಿಗೆ 145 ಅಂಕ ನೀಡಿದ್ದು ಕೂಡ ಅನುಮಾನಕ್ಕೆ ಕಾರಣವಾಗಿದೆ. ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಗೋನಾಳ ಭೀಮಪ್ಪ ಹಾಗೂ ಸದಸ್ಯ ರಾಮಕೃಷ್ಣ ಅವರು ಮೇ 10ರಂದು ನಿವೃತ್ತರಾಗುವವರಿದ್ದರು. ಅದಕ್ಕಾಗಿ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಮೇ 7ರಿಂದಲೇ ಸಂದರ್ಶನ ಪ್ರಕ್ರಿಯೆ ಆರಂಭಿಸಲಾಯಿತು ಎಂದು ಆರೋಪಿಸಲಾಗಿದ್ದು ಈ ಬಗ್ಗೆ ಕೂಡ ಸಿಐಡಿ ತನಿಖೆ ನಡೆಸುತ್ತಿದೆ.

ಅಭ್ಯರ್ಥಿಗಳ ಹೇಳಿಕೆ ದಾಖಲು: ಸಂದರ್ಶನ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಮಾಡಿದ್ದ ವಿದ್ಯಾರ್ಥಿಗಳ ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತಿದೆ. ಸೋಮವಾರ ಕೆಲ ಅಭ್ಯರ್ಥಿಗಳನ್ನು ಸಿಐಡಿ ಕಚೇರಿಗೆ ಕರೆಸಿಕೊಂಡಿದ್ದ ತನಿಖಾಧಿಕಾರಿಗಳು, ಪ್ರಕರಣಸಂಬಂಧ ಅವರ ಹೇಳಿಕೆಯನ್ನು ಪಡೆದಿದ್ದು ಇದನ್ನು ವಿಡಿಯೊದಲ್ಲಿ ದಾಖಲಿಸಲಾಗಿದೆ.

ಮಹತ್ವದ ದಾಖಲೆ ವಶ
ಕೆಪಿಎಸ್‌ಸಿ ನಡೆಸಿದ ಮುಖ್ಯ ಪರೀಕ್ಷೆ, ಮೌಲ್ಯಮಾಪನ ಮತ್ತು ಸಂದರ್ಶನ ಪ್ರಕ್ರಿಯೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಸಿಐಡಿ ಪೊಲೀಸರು ಶನಿವಾರ ಸಂಜೆ ಆಯೋಗದ ಕಚೇರಿಯಿಂದಲೇ ವಶಕ್ಕೆ ಪಡೆದಿದ್ದಾರೆ. ಕೆಪಿಎಸ್‌ಸಿ ಕಚೇರಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ದೃಶ್ಯಾವಳಿಗಳ ವಿವರಗಳನ್ನೂ ತನಿಖಾ ತಂಡ ವಶಕ್ಕೆ ಪಡೆದಿದೆ.  ಈ ಮೂಲಕ ಮುಖ್ಯ ಪರೀಕ್ಷೆ, ಮೌಲ್ಯಮಾಪನ, ಸಂದರ್ಶನದ ಅವಧಿಯಲ್ಲಿ ಆಯೋಗದ ಕಚೇರಿಗೆ ಬಂದು, ಹೋಗುತ್ತಿದ್ದವರ ಪತ್ತೆಗೆ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.