ADVERTISEMENT

ಮರೆತೇ ಹೋದನೆ ಮಯೂರ ವರ್ಮ!

ಪ್ರಜಾವಾಣಿ ವಿಶೇಷ
Published 31 ಅಕ್ಟೋಬರ್ 2013, 20:05 IST
Last Updated 31 ಅಕ್ಟೋಬರ್ 2013, 20:05 IST

ಶಿರಾಳಕೊಪ್ಪ: ನವೆಂಬರ್‌ ತಿಂಗಳು ರಾಜ್ಯೋತ್ಸವದ ಭರಾಟೆ. ಆದರೆ, ಕನ್ನಡದ ಮೂಲ ನೆಲೆಯಾದ ತಾಳಗುಂದ ಗ್ರಾಮ ಹಾಗೂ ಕನ್ನಡ ಕುಲತಿಲಕ ಮಯೂರ ವರ್ಮನನ್ನು  ಕನ್ನಡಿಗರು ಮರೆತಿದ್ದಾರೆ.

ಕನ್ನಡ ಎಂದರೆ ಸ್ವಾಭಿಮಾನ, ಸ್ವಾಭಿಮಾನಿಗಳು ಎಂದರೆ ಕನ್ನಡಿಗರು ಎಂದು ಜಗತ್ತಿಗೆ ಮೊಟ್ಟ ಮೊದಲು ತೋರಿಸಿಕೊಟ್ಟ ಕೀರ್ತಿ ಮಯೂರ ಮತ್ತು ಅವನ ಪ್ರೇರಕ ಶಕ್ತಿಯಾದ ತಾಳಗುಂದ ಗ್ರಾಮಕ್ಕೆ ಸಲ್ಲುತ್ತದೆ. ಇಲ್ಲಿ ಹುಟ್ಟಿ ಬೆಳೆದ ಯುವಕನೊಬ್ಬ ಉನ್ನತ ವ್ಯಾಸಂಗಕ್ಕಾಗಿ ಕಂಚಿ ಪಟ್ಟಣಕ್ಕೆ ತೆರಳಿದ್ದಾಗ ಪಲ್ಲವರಿಂದ ಅವಮಾನಿತ­ನಾಗುತ್ತಾನೆ. ತನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದ ಪಲ್ಲವರ  ವಿರುದ್ದ ಖಡ್ಗ ಹಿಡಿದು, ಅವರ ಸೊಲ್ಲಡಗಿಸಿ ಸ್ವಾಭಿಮಾನದ ಸಂಕೇತವಾಗಿ ಕದಂಬ ಸಾಮ್ರಾಜ್ಯ ನಿರ್ಮಾಣ ಮಾಡುತ್ತಾನೆ ಎಂಬುದು ಇತಿಹಾಸ. 

ತಾಳಗುಂದದ ಪ್ರಣವೇಶ್ವರ ದೇವಾಲ­ಯದ ಆವರಣದಲ್ಲಿರುವ ಕಾಕುತ್ಸ­ವರ್ಮನ ಕಾಲದಲ್ಲಿ ಕೆತ್ತ ಲಾಗಿರುವ ಶಾಸನ ಎನ್ನಲಾದ ತಾಳಗುಂದ ಶಾಸನದ ಪ್ರಕಾರ, ತಾಳಗುಂದ ಕದಂಬರ ಮೂಲ ಸ್ಥಾನ ವಾಗಿತ್ತು. ಅವರು ಇಲ್ಲಿ ಆಡಳಿತ ನಡೆಸುತ್ತಿದ್ದ ಚುಟು ವಂಶದಿಂದ ಈ ಸ್ಥಳವನ್ನು ಆಕ್ರಮಿಸಿ ನಂತರ ಬನವಾಸಿ ಯನ್ನು ರಾಜಧಾನಿ ಮಾಡಿ ಕದಂಬ ಸಾಮ್ರಾಜ್ಯ ಸ್ಥಾಪನೆ ಮಾಡಿದ ಬಗ್ಗೆ ಮಾಹಿತಿ ನೀಡುತ್ತದೆ.

ತಾಳಗುಂದ ಗ್ರಾಮ ಕದಂಬರ ದೊರೆ ಮಯೂರನ ಮೂಲ ನೆಲೆಯಾಗಿದ್ದು, ಇಲ್ಲಿನ ಐತಿಹಾಸಿಕ ತಾಣ ಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಪುರಾತತ್ವ ಇಲಾಖೆ ಮುತುವರ್ಜಿ ವಹಿಸಬೇಕಾಗಿದೆ. ಈ ಬಗ್ಗೆ ಸ್ಥಳೀಯರಿಗೆ ಜಾಗೃತಿ ಮೂಡಿಸಿ ಅಭಿವೃದ್ಧಿಪಡಿಸಿದಾಗ ಸಾಕಷ್ಟು ಪ್ರವಾಸಿ ಗರು ಭೇಟಿ ನೀಡುವುದರಿಂದ ಹೋಟೆಲ್, ವಸತಿ ಸೌಕರ್ಯ ಇತ್ಯಾದಿಗೆ ಪ್ರೋತ್ಸಾಹ ನೀಡಿದಂತೆ ಆಗು ತ್ತದೆ. ಉದ್ಯೋಗಗಳು ಸಹ ಸೃಷ್ಟಿಯಾಗುತ್ತವೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎನ್ನುತ್ತಾರೆ ಇಲ್ಲಿನ ಹಿರಿಯರು.

ಸಾಹಿತಿ ಮಹಾದೇವಪ್ಪ ಪ್ರಕಾರ, ಶತ ಶತಮಾನ ಗಳಿಂದ ತನ್ನ ಗರ್ಭದಲ್ಲಿ ಸಾಕಷ್ಟು ಅಮೂಲ್ಯ ಇತಿಹಾಸಗಳನ್ನು ಹುದುಗಿಸಿ ಇಟ್ಟುಕೊಂಡಿದ್ದ ತಾಳಗುಂದ ಹಾಗೂ ಮಯೂರನ ವಿಷಯಗಳನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಶಿರಾಳಕೊಪ್ಪದ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಪಾತ್ರ ಮಹತ್ವದ್ದಾಗಿದೆ.

ಇಲ್ಲಿನ ಇತಿಹಾಸದ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯಬೇಕಾಗಿದ್ದು, ಪುರಾತತ್ವ ಇಲಾಖೆ ಈಚೆಗೆ ನಡೆಸಿದ ಪ್ರಾಯೋಗಿಕ ಉತ್ಖನನದಲ್ಲಿ ಗಂಗರ ಕಾಲದ ಎಂಟು ಚಿನ್ನದ ನಾಣ್ಯಗಳು, ಕಳಚೂರರ ಸಮಯದ ತಾಮ್ರದ ತಟ್ಟೆಗಳು, ಕದಂಬರ ಕಾಲದ ಇಟ್ಟಿಗೆ ಹಾಗೂ ಹಂಚುಗಳು ಲಭಿಸಿದ್ದು, ಸಂಪೂರ್ಣ ಉತ್ಖನನ ನಡೆದರೆ ತಾಳಗುಂದ, ಮಯೂರ ಹಾಗೂ ಕನ್ನಡ ನಾಡಿನ ಇತಿಹಾಸವು ದೇಶದಲ್ಲಿಯೇ ಪ್ರಾಚೀನ­ವಾಗಲಿದೆ. ಹಾಗಾಗಿ, ಪುರಾತತ್ವ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಆಗ್ರಹಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.