ADVERTISEMENT

ಮಳೆಗೆ ಮತ್ತೆ ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ಹುಬ್ಬಳ್ಳಿ: ಸಿಡಿಲು ಬಡಿದು ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು, ಧಾರ­ವಾಡ ಜಿಲ್ಲೆಯಲ್ಲಿ ಒಬ್ಬರು ಮತ್ತು ಮನೆಯ ಮೇಲ್ಛಾ­ವಣಿ ಕುಸಿದು ವಿಜಾಪುರ ಜಿಲ್ಲೆಯಲ್ಲಿ ಒಬ್ಬರು ಸೇರಿ ಒಟ್ಟು ನಾಲ್ವರು ಸಾವಿಗೀಡಾದ ಘಟನೆ ಮಂಗಳವಾರ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಯರಡಾಲ ಗ್ರಾಮದ ಬಳಿಯ ಹೊಲದಲ್ಲಿದ್ದ ಕೃಷಿ ಕಾರ್ಮಿಕರಾದ ಸಾಣಿ­ಕೊಪ್ಪದ ಮಲ್ಲಪ್ಪ ಯಲ್ಲಪ್ಪ ಬೆಳ್ಳಿಕಟ್ಟಿ (55) ಮತ್ತು ಯರಡಾಲದ ತಿಪ್ಪಣ್ಣ ನಿಂಗಪ್ಪ ಮಡಿವಾಳರ (65) ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಚಿಕ್ಕೋಡಿ ತಾಲ್ಲೂಕಿನಲ್ಲಿ ಮಂಗಳ­ವಾರ ಸಂಜೆ ಆಲಿಕಲ್ಲು ಮಳೆ ಮತ್ತು ರಭಸದ ಗಾಳಿಯಿಂದ ಹಿರೇಕೋಡಿ ಗ್ರಾಮ ವ್ಯಾಪ್ತಿಯಲ್ಲಿ  ಏಳೆಂಟು ಮನೆಗಳಿಗೆ ಹಾನಿ ಉಂಟಾಗಿದ್ದರೆ, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ.  ಇದಲ್ಲದೇ ಚಿಕ್ಕೋಡಿ ತಾಲ್ಲೂಕಿನ ಕೋಥಳಿ ಗ್ರಾಮದಲ್ಲಿ ಭಾರಿ ಮಳೆಯಿಂದ ಐದಾರು ಮನೆಗಳಿಗೆ ಭಾಗಶಃ ಧಕ್ಕೆಯಾಗಿದೆ.

ಹೊಲದಿಂದ ಮನೆಗೆ ಹೊರಟಿದ್ದ ಅನಸವ್ವ ಶಿವಪ್ಪ ದಳವಾಯಿ (35) ಅವರಿಗೆ ಸಿಡಿಲು ಬಡಿದು ಸಾವಿಗೀಡಾದ ಘಟನೆ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ಸಂಭವಿಸಿದೆ.
ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹತ್ತಳ್ಳಿಯಲ್ಲಿ ಮಂಗಳವಾರ ಬೆಳಗಿನ ಜಾವ ಸುರಿದ ಮಳೆಗೆ ಮನೆಯ ಮೇಲ್ಛಾವಣಿ ಬಿದ್ದು ಜನ್ನತಬೀ ಶೇಖ (65) ಮೃತಪಟ್ಟಿದ್ದಾರೆ.

ಗಂಜಿ ಕೇಂದ್ರ: ಅಕಾಲಿಕ ಮಳೆಯಿಂದ ನಿರಾಶ್ರಿತ­ರಾಗಿರುವವರಿಗೆ ಇಂಡಿ ತಾಲ್ಲೂಕಿನ ಹತ್ತಳ್ಳಿಯಲ್ಲಿ ಒಂದು, ಅಂಜು­ಟಗಿಯಲ್ಲಿ ಮೂರು ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.