ADVERTISEMENT

ಮಳೆ: ಧರೆಗೆ ಉರುಳಿದ ಮರಗಳು

​ಪ್ರಜಾವಾಣಿ ವಾರ್ತೆ
Published 24 ಮೇ 2018, 19:40 IST
Last Updated 24 ಮೇ 2018, 19:40 IST
ಬಿಡದಿ ಸಮೀಪದ ಎಂ.ಕರೇನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ಉರುಳಿ ಬಿದ್ದ ತೆಂಗಿನ ಮರಗಳು
ಬಿಡದಿ ಸಮೀಪದ ಎಂ.ಕರೇನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ಉರುಳಿ ಬಿದ್ದ ತೆಂಗಿನ ಮರಗಳು   

ಬೆಂಗಳೂರು: ರಾಜ್ಯದ ವಿವಿಧೆಡೆ ಬುಧವಾರ ರಾತ್ರಿ ಹಾಗೂ ಗುರುವಾರ ಬಿರುಗಾಳಿ, ಆಲಿಕಲ್ಲು ಸಹಿತ ಮಳೆಯಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ನಾಗರಮಡುವು ಗ್ರಾಮದ ಹಳ್ಳದಲ್ಲಿ ಮುಳುಗಿ ಬಾಲೆಹೊಸೂರಿನ ಬೀರಪ್ಪ ಮಾರುತೆಪ್ಪ ಕುರಿ (12) ಎಂಬ ಬಾಲಕ ಮೃತಪಟ್ಟಿದ್ದಾನೆ.

ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ರೌಡಕುಂದಾ ಸಮೀಪದ ರಾಮಾ ಕ್ಯಾಂಪಿನಲ್ಲಿ ಸಿಡಿಲು ಬಡಿದು ಶರಣಮ್ಮ ಶರಣಪ್ಪ ದಾನಗೌಡ (40) ಎಂಬುವವರು ಮೃತಪಟ್ಟಿದ್ದಾರೆ.

ರಾಮನಗರದ ಬಿಡದಿ ಹೋಬಳಿಯ ಎಂ.ಕರೇನಹಳ್ಳಿ ಹಾಗೂ ಸುತ್ತಮುತ್ತ ಬುಧವಾರ ರಾತ್ರಿ ಸುರಿದ ಮಳೆ ಹಾಗೂ ಬಿರುಗಾಳಿಯಿಂದಾಗಿ ಹತ್ತಾರು ಮರಗಳು ಧರೆಗೆ ಉರುಳಿವೆ.

ADVERTISEMENT

ವೆಂಕಟಮೂರ್ತಿ ಎಂಬುವರ ತೋಟದಲ್ಲಿ ಹತ್ತಕ್ಕೂ ಹೆಚ್ಚು ತೆಂಗಿನ ಮರ, ನಲವತ್ತಕ್ಕೂ ಹೆಚ್ಚು ಅಡಿಕೆ ಮರಗಳು ನೆಲಕ್ಕೆ ಬಿದ್ದಿವೆ. ಇತರ ರೈತರ ತೋಟಗ
ಳಲ್ಲೂ ಸಾಕಷ್ಟು ಮರಗಳೂ ಉರುಳಿವೆ.

ಬಾಗಲಕೋಟೆ ಜಿಲ್ಲೆಯ ಕುಳಗೇರಿ ಕ್ರಾಸ್‌ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಹಲವೆಡೆ ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ.

ಬಳ್ಳಾರಿ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ವ್ಯಾಪ್ತಿಯಲ್ಲಿ ಅಂದಾಜು 60 ಮನೆಗಳು ಕುಸಿದಿವೆ. 65ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಮುರಿದುಬಿದ್ದಿದ್ದು, ಏಳು ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟಿವೆ. ಹೊಸಪೇಟೆಯ ಬುಕ್ಕಸಾಗರದಲ್ಲಿ ಹಾಗೂ ಸಂಡೂರು ತಾಲ್ಲೂಕಿನ ದೌಲತ್‌ಪುರ ಮತ್ತು ವೆಂಕಟಗಿರಿಯಲ್ಲಿ ಬಾಳೆ ಬೆಳೆ ಹಾನಿಗೀಡಾಗಿದೆ. ಹಲವೆಡೆ ಮರಗಳು ಬುಡಸಮೇತ ಉರುಳಿವೆ.

ಹಾವೇರಿ ಸೇರಿದಂತೆ ಜಿಲ್ಲೆಯ ಶಿಗ್ಗಾವಿ, ರಾಣೇಬೆನ್ನೂರಿನಲ್ಲಿ ಹಾಗೂ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸಂಜೆ ಗುಡುಗು ಸಹಿತ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.