ADVERTISEMENT

ಮಳೆ ನಿಂತೊಡನೆ ರಸ್ತೆ ದುರಸ್ತಿ-ಸಿ.ಎಂ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 19:59 IST
Last Updated 21 ಸೆಪ್ಟೆಂಬರ್ 2013, 19:59 IST

ಗುಲ್ಬರ್ಗ: ‘ರಾಜ್ಯದಲ್ಲಿ ಮಳೆ ಕಡಿಮೆಯಾದ ತಕ್ಷಣವೇ ರಸ್ತೆ ಹಾಗೂ ಸೇತುವೆ ದುರಸ್ತಿ ಕಾಮಗಾರಿ ಆರಂಭಿಸ ಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಹೆಲಿಪ್ಯಾಡ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕ ಮಳೆಯಿಂದ ರಸ್ತೆ ಹಾಗೂ ಸೇತುವೆಗಳಿಗೆ ಹಾನಿಯಾಗಿದೆ. ಕೆಲವಡೆ ಸೇತುವೆಗಳು ಕೊಚ್ಚಿ ಹೋಗಿರುವ ಕುರಿತು ಮಾಹಿತಿ ಬಂದಿದೆ. ಶೀಘ್ರವೇ ಹಾನಿ ಪರಿಶೀಲನೆ ಹಾಗೂ ಪರಿಹಾರ ಕಾರ್ಯ ಕೈಗೊಳ್ಳಲಿದ್ದೇವೆ’ ಎಂದರು.

ಕೆಪಿಎಸ್‌ಸಿ ಪರೀಕ್ಷೆ ಹಗರಣದ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಮಾಡದ ತಪ್ಪಿಗೆ ಹೊಣೆಗಾರನಾಗಲು ಹೇಗೆ ಸಾಧ್ಯ? ಅವು ಹಿಂದಿನ ಸರ್ಕಾರದ ತಪ್ಪುಗಳು. ನಾನು ಆ ತಪ್ಪುಗಳನ್ನು ತಿದ್ದಲು ಕಠಿಣ ಕ್ರಮಕೈಗೊಳ್ಳುತ್ತಿದ್ದೇನೆ. ಹಾಗೆಂದ ಮಾತ್ರಕ್ಕೆ ನೆಗಡಿ ಬಂತು ಎಂದು ಮೂಗು ಕೊಯ್ದುಕೊಳ್ಳಲು ಸಾಧ್ಯವೂ ಇಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

‘ಚುನಾವಣೆಗಾಗಿ ಬಿಜೆಪಿ ಹೊಸ ತಾಲ್ಲೂಕುಗಳ ಘೋಷಣೆ ಮಾಡಿತ್ತು. ಈ ಬಗ್ಗೆ ಸಂಪೂರ್ಣವಾಗಿ ಮರುಪರಿ ಶೀಲಿಸಲಾಗುವುದು. ಆದರೆ ತಾಂಡಾ ಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ’ ಎಂದರು. ಮುಂದಿನ ದಿನಗಳಲ್ಲಿ ಗುಲ್ಬರ್ಗದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುವುದು ಎಂದರು.

ಸಂಶೋಧನಾ ಕೇಂದ್ರ: ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಭೇಟಿ ನೀಡಿ ಅಖಿಲ ಭಾರತ ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ, ‘ಖ್ವಾಜಾ ಬಂದೇ ನವಾಜ್ ಸಂಶೋಧನಾ ಕೇಂದ್ರ ಸ್ಥಾಪಿಸಲು ಸರ್ಕಾರದಿಂದ ರೂ. 1.35 ಕೋಟಿ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಲಾಡ್‌ ಕೈಬಿಡೊಲ್ಲ...
ಗಣಿಯಿಂದ ರಾಜ್ಯವನ್ನು ಹೊಲಸು ಮಾಡಿರುವುದು ಬಿಜೆಪಿ. ಈಗ ಅವರೇ ರಾಜ್ಯಪಾಲರ ಬಳಿ ದೂರು ನೀಡಿದ್ದಾರೆ. ಆದರೆ ಆರೋಪಕ್ಕೊಳಗಾದ ಕಂಪೆನಿ ಮತ್ತು ತನಗೆ ಸಂಬಂಧವಿಲ್ಲ ಎಂದು ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ. ಹೀಗಾಗಿ ಸಂಬಂಧ ಇಲ್ಲದ ಕಾರಣ ಅವರನ್ನು ಸಂಪುಟದಿಂದ ಕೈ ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಸಿದ್ದರಾಮಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.