ಬೆಂಗಳೂರು: ಬೆಳಗಾವಿ, ಬಾಗಲಕೋಟೆ, ವಿಜಾಪುರ, ಕೊಪ್ಪಳ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ ಶನಿವಾರ ರಾತ್ರಿ ಮತ್ತು ಭಾನುವಾರ ಮಳೆಯಾಗಿದ್ದು, ಮಳೆ ಸಂಬಂಧಿ ಅನಾಹುತಗಳಲ್ಲಿ ಮೂವರು ಸಾವಿಗೀಡಾಗಿದ್ದಾರೆ.
ಬೆಳಗಾವಿ ವರದಿ: ಜಿಲ್ಲೆಯ ಗೋಕಾಕ ತಾಲ್ಲೂಕಿನ ಮೂಡಲಗಿ ಸಮೀಪದ ವಡೇರಹಟ್ಟಿ ಗ್ರಾಮದಲ್ಲಿ ಭಾನುವಾರ ಸಂಜೆ ಮಳೆ–ಗಾಳಿಗೆ ಮರ ಬಿದ್ದು, ಕಮಲವ್ವ ಲಕ್ಷ್ಮಣ ಈರಗಾರ (45) ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಇನ್ನಿಬ್ಬರಿಗೆ ಗಾಯಗಳಾಗಿವೆ. ಕೂಲಿ ಕೆಲಸಕ್ಕೆ ಹೋಗಿದ್ದ ಈ ಮಹಿಳೆಯರು ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಾಗ ಈ ಘಟನೆ ಸಂಭವಿಸಿದೆ.
200 ನವಿಲುಗಳ ಸಾವು: ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಸುಣಧೋಳಿ, ಕುಲಗೋಡ, ವಡೇರಹಟ್ಟಿ ಸೇರಿದಂತೆ ಸುಮಾರು 13 ಗ್ರಾಮಗಳ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಸುರಿದ ಆಲಿಕಲ್ಲಿನ ಮಳೆಯಿಂದ ಅಪಾರ ಬೆಳೆ ನಾಶವಾಗಿದ್ದು,200ಕ್ಕೂ ಹೆಚ್ಚು ನವಿಲು, 30 ಕುರಿಗಳು ಸಾವಿಗೀಡಾಗಿವೆ.
ಬಾಗಲಕೋಟೆ ವರದಿ: ಜಿಲ್ಲೆಯ ಹುನಗುಂದ ತಾಲ್ಲೂಕಿನ ಬೆಳಗಲ್ಲ ಗ್ರಾಮದಲ್ಲಿ ಸಿಡಿಲು ಬಡಿದು ಹೊಲದಲ್ಲಿದ್ದ ಪುಂಡಲೀಕ ಬಸಪ್ಪ ಕೊಪ್ಪದ (24) ಎಂಬ ಯುವಕ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದ್ದು, ಭಾನುವಾರ ಬೆಳಕಿಗೆ ಬಂದಿದೆ.
ಕುರಿ ಕಾಯಲು ಹೋಗಿದ್ದ ಇವರು ಮನೆಗೆ ವಾಪಸ್ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮುಳ್ಳೂರು, ಜಮಖಂಡಿ ಮತ್ತು ಗುಳೇದಗುಡ್ಡ ಸುತ್ತಮುತ್ತಲೂ ಆಲಿಕಲ್ಲಿನ ಮಳೆಯಾಗಿದ್ದು, ಕೆಲವೆಡೆ ಮರಗಳು ಉರುಳಿಬಿದ್ದಿವೆ. ವಿವಿಧ ಬೆಳೆಗಳಿಗೆ ಹಾನಿಯಾಗಿದೆ.
ವಿಜಾಪುರ ವರದಿ: ಜಿಲ್ಲೆಯ ಇಂಡಿ ತಾಲ್ಲೂಕಿನ ಅಂಜುಟಗಿ ಗ್ರಾಮದಲ್ಲಿ ಶನಿವಾರ ಆಲಿಕಲ್ಲು ಮಳೆಯಿಂದ ಮೆಟಿಗಿ ವಸ್ತಿ ಗ್ರಾಮದಲ್ಲಿ ಮನೆಯೊಂದರ ಮೇಲಿನ ಪತ್ರಾಸ (ತಗಡು) ಮತ್ತು ಅದರ ಮೇಲಿಟ್ಟಿದ್ದ ಕಲ್ಲುಗಳು ಬಿದ್ದು ಕಲ್ಲವ್ವ ಕವಡಿ (70) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕಾರವಾರ ವರದಿ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಮುಡಸಾಲಿ ಮತ್ತು ಹನುಮಾಪುರ ಗ್ರಾಮಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ರಾತ್ರಿ ಅಕಾಲಿಕ ಮಳೆಯಾಗಿದ್ದು, ಸುಮಾರು ₨ 15 ಲಕ್ಷ ಮೌಲ್ಯದ ಬೆಳೆ ನಾಶವಾಗಿದೆ.
ಕುಕನೂರು (ಕೊಪ್ಪಳ ಜಿಲ್ಲೆ): ಇಲ್ಲಿನ ಹೋಬಳಿಯಲ್ಲಿ ಶನಿವಾರ ಸಂಜೆ ಬಳಿಕ ಸುರಿದ ಬಿರುಗಾಳಿ, ಆಲಿಕಲ್ಲು ಮಿಶ್ರಿತ ಭಾರಿ ಮಳೆಗೆ ಸುತ್ತಮುತ್ತಲ ಗ್ರಾಮಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ತೋಟದ ಬೆಳೆ ಹಾನಿಗೀಡಾಗಿದ್ದು, ದ್ಯಾಂಪೂರ ಗ್ರಾಮದಲ್ಲಿ 20ಕ್ಕೂ ಹೆಚ್ಚು ಕುರಿಮರಿಗಳು ಸಾವಿಗೀಡಾಗಿವೆ. ಸುಮಾರು ಒಂದೂವರೆ ತಾಸು ಸುರಿದ ಗಾಳಿ–ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ಎಲ್ಲೆಡೆ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ವಿದ್ಯುತ್, ದೂರವಾಣಿ ಪೂರೈಕೆ ಸ್ಥಗಿತಗೊಂಡಿದೆ.
ರೈತರು ಬೆಳೆದ ಕಬ್ಬು, ಟೊಮೆಟೊ, ಮೆಣಸಿನಕಾಯಿ, ಚಿಕ್ಕು, ಶೇಂಗಾ, ಮಕ್ಕೆಜೋಳ, ಬಿಟಿ ಹತ್ತಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಸಮೀಪದ ಹನುಮಸಾಗರ ಹೋಬಳಿಯಲ್ಲಿ ಅಪಾರ ಪ್ರಮಾಣದ ಗೋಧಿ ಬೆಳೆ ನಷ್ಟವಾಗಿದೆ.
ಔರಾದ್ (ಬೀದರ್ ಜಿಲ್ಲೆ):ತಾಲ್ಲೂಕಿನಲ್ಲಿ ಭಾನುವಾರ ಬೆಳಿಗ್ಗೆ ಸುರಿದ ಆಲಿಕಲ್ಲು ಸಹಿತ ಮಳೆಗೆ ಆರು ಕುರಿಗಳು ಸಾವನ್ನಪ್ಪಿವೆ.
ಸುಬ್ರಹ್ಮಣ್ಯ/ ಉಜಿರೆ (ದಕ್ಷಿಣ ಕನ್ನಡ ಜಿಲ್ಲೆ): ಸುಳ್ಯ ತಾಲ್ಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾನುವಾರ ಸಂಜೆ ಸುಮಾರು ಅರ್ಧ ಗಂಟೆ ಮತ್ತು ಧರ್ಮಸ್ಥಳದಲ್ಲಿ ಒಂದು ಗಂಟೆ ಮಳೆ ಬಿತ್ತು.
ಸುಬ್ರಹ್ಮಣ್ಯದಲ್ಲಿ ಸಂಜೆ 5.30ರಿಂದ ಗುಡುಗು, ಗಾಳಿ ಸಹಿತ ಮಳೆ ಸುರಿಯಿತು. ಕೈಕಂಬದಲ್ಲಿ ಮರ ಬಿದ್ದು ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಬಾಳುಗೋಡು ಸಮೀಪದ ಆರು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ವಿದ್ಯುತ್, ದೂರವಾಣಿ ಸಂಪರ್ಕ ಅಸ್ತವ್ಯಸ್ತಗೊಂಡಿತು. ಮಳೆಯು ಕೃಷಿಕರಲ್ಲಿ ಸಂತಸ ಉಂಟಾಗಿದೆ.
ಧರ್ಮಸ್ಥಳ ಸುತ್ತಲಿನ ಪ್ರದೇಶದಲ್ಲಿ ಸಂಜೆ ಆರರಿಂದ ಏಳರವರೆಗೆ ಮಳೆ ಸುರಿಯಿತು. ಆದರೆ ತೀವ್ರ ಗಾಳಿ ಇಲ್ಲದ ಕಾರಣ ಹೆಚ್ಚಿನ ಹಾನಿ ಉಂಟಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.