ADVERTISEMENT

ಮಳೆ: ಶಿವಮೊಗ್ಗ ಜಿಲ್ಲೆಯಲ್ಲಿ ₨ 276 ಕೋಟಿ ನಷ್ಟ

ಕೇಂದ್ರ ತಂಡದಿಂದ ಸಾಗರ, ತೀರ್ಥಹಳ್ಳಿ, ಹೊಸನಗರದಲ್ಲಿ ಹಾನಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ಸಾಗರ (ಶಿವಮೊಗ್ಗ ಜಿಲ್ಲೆ): ಅತಿವೃಷ್ಟಿಯಿಂದ ಸಂಭವಿಸಿರುವ ಹಾನಿಯ ಕುರಿತು ಪರಿಶೀಲನೆಗೆ ಆಗಮಿಸಿದ್ದ ಕೇಂದ್ರದ ವೀಕ್ಷಣಾ ತಂಡ ಬುಧವಾರ ಜಿಲ್ಲೆಯ ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿತು. 

ಜೋಗದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಅತಿವೃಷ್ಟಿಯಿಂದ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸಂಭವಿಸಿರುವ ಹಾನಿಯ ಬಗ್ಗೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಸಚಿತ್ರ ವರದಿ ಮಂಡಿಸಿದರು.

ಈ ವರ್ಷದ ಮಳೆಗಾಲದಲ್ಲಿ ಸತತ ಮಳೆಯಾದ ಕಾರಣ ವ್ಯಾಪಕ ಪ್ರಮಾಣದಲ್ಲಿ ಭತ್ತದ ಫಸಲು ನಾಶವಾಗಿದೆ. ಹಿಂದೆಂದೂ ಕಾಣದ ರೀತಿ ಅಡಿಕೆ ಬೆಳೆಗೆ ಕೊಳೆರೋಗ ತಗುಲಿದೆ. ನಿರಂತರ ಮಳೆಯ ಕಾರಣ ಕೊಳೆರೋಗ ತಡೆಗಟ್ಟಲು ಬೋರ್ಡೊ ದ್ರಾವಣವನ್ನು ಅಡಿಕೆ ಮರಗಳಿಗೆ ಸಿಂಪಡಿಸಲು ಸಾಧ್ಯವಾಗಿಲ್ಲ ಎಂಬ ವಿಷಯವನ್ನು ಜಿಲ್ಲಾಧಿಕಾರಿ ತಂಡದ ಸದಸ್ಯರಿಗೆ ವಿವರಿಸಿದರು.

ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ₨ 276 ಕೋಟಿ ನಷ್ಟ ಸಂಭವಿಸಿದೆ. ಬೆಳೆ ನಷ್ಟಕ್ಕೆ ಪರಿಹಾರ ಪಡೆಯಲು 60 ಸಾವಿರ ರೈತರು ಅರ್ಜಿ ಸಲ್ಲಿಸಿದ್ದಾರೆ. ಇದುವರೆಗೂ ₨ 4 ಕೋಟಿ ಪರಿಹಾರ ವಿತರಿಸಲಾಗಿದೆ. ತೋಟಗಾರಿಕಾ ಬೆಳೆ ನಷ್ಟಕ್ಕೆ ಹೆಕ್ಟೇರ್ ಗೆ ₨ 12 ಸಾವಿರ, ಭತ್ತದ ಬೆಳೆ ನಷ್ಟಕ್ಕೆ ಎಕರೆಗೆ ₨ 800 ಪರಿಹಾರ ವಿತರಿಸಲಾಗುತ್ತಿದ್ದು, ರೈತರಲ್ಲಿ ಪರಿಹಾರ ಪ್ರಮಾಣದ ಬಗ್ಗೆ ತೀವ್ರ ಅಸಮಾಧಾನವಿದೆ. ಪರಿಹಾರ ಮೊತ್ತದ ಪ್ರಮಾಣ ಹೆಚ್ಚಿಸಬೇಕು ಎಂಬುದು ರೈತರ ಒತ್ತಾಯವಾಗಿದೆ ಎಂದರು.

ನಂತರ, ತಾಳಗುಪ್ಪ ಹೋಬಳಿಯಲ್ಲಿ ಪ್ರತಿ ವರ್ಷ ವರದಾ ನದಿ ಪ್ರವಾಹದಿಂದ ಮುಳುಗಡೆಯಾಗುವ 1,100 ಎಕರೆ ಭತ್ತದ ಗದ್ದೆ ಇರುವ ಪ್ರದೇಶಕ್ಕೆ ಕೇಂದ್ರದ ತಂಡ ಭೇಟಿ ನೀಡಿತು. ಅಲ್ಲಿ ಹಾಜರಿದ್ದ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಅನಂತ ಕೆಲವೆ, ಎಪಿಎಂಸಿ ಮಾಜಿ ಅಧ್ಯಕ್ಷ ಮಂಡಗಳಲೆ ಹುಚ್ಚಪ್ಪ, ರೈತರು ತೀವ್ರ ಸಂಕಷ್ಟದಲ್ಲಿದ್ದು ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರು.

ಹುಳೇಗಾರು ಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರದ ತಂಡ ಕೊಳೆರೋಗಕ್ಕೆ ತುತ್ತಾಗಿರುವ ಅಡಿಕೆ ತೋಟವನ್ನು ಪರಿಶೀಲಿಸಿತು. ‘ಮ್ಯಾಮ್ಕೋಸ್’ ನಿರ್ದೇಶಕರಾದ ಎಲ್.ಟಿ.ತಿಮ್ಮಪ್ಪ, ಬಿ.ಎಚ್.ರಾಘವೇಂದ್ರ, ಆಪ್ಸ್  ಕೋಸ್ ನ ಕೆ.ಎಂ.ಸೂರ್ಯನಾರಾಯಣ, ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ವಿವರಿಸಿದರು.

ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಂಬಳಿಕೊಪ್ಪ ಗ್ರಾಮಕ್ಕೆ ತೆರಳಿದ ತಂಡ ಕೆರೆದಂಡೆ ಒಡೆದು ಸಂಭವಿಸಿರುವ ಹಾನಿ ಕುರಿತು ಪರಿಶೀಲನೆ ನಡೆಸಿತು. ಬಳಿಕ ಹೊಸನಗರ, ತೀರ್ಥಹಳ್ಳಿ ತಾಲ್ಲೂಕಿನ ಕುಣಿಗದ್ದೆ, ಮಟ್ಲಗೋಡು, ಗುಡ್ಡೇಕಾರಿ ಗ್ರಾಮಗಳಿಗೆ ಭೇಟಿ ಕೊಟ್ಟಿತು. ಕುಣಿಗದ್ದೆ ಗ್ರಾಮದಲ್ಲಿ ಗೋಪಿನಾಥ ಹಳ್ಳದ ದಂಡೆ ಒಡೆದು ಅಪಾರ ಪ್ರಮಾಣದ ಭತ್ತದ ಗದ್ದೆಗಳು ಹಾಳಾಗಿರುವುದನ್ನು  ಪರಿಶೀಲಿಸಿತು. ಪ್ರಕೃತಿ ವಿಕೋಪ ನಿಧಿಯಡಿ ಹಳ್ಳದ ದಂಡೆ ದುರಸ್ತಿಗೆ ವಿನಿಯೋಗಿಸಿರುವ ₨50 ಲಕ್ಷದ ಕಾಮಗಾರಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿತು. 

ಕೇಂದ್ರ ಹಣಕಾಸು ಸಚಿವಾಲಯದ ಸಹ ನಿರ್ದೇಶಕ ಪಿ.ಜಿ.ಎಸ್.ರಾವ್ ಸುದ್ದಿಗಾರರೊಂದಿಗೆ ಮಾತನಾಡಿ, ಸತತ ಮಳೆಯಿಂದ ಸಂಭವಿಸಿರುವ ಹಾನಿಯ ಪ್ರಮಾಣ ಖುದ್ದಾಗಿ ಪರಿಶೀಲಿಸಿದ್ದು, ನಷ್ಟ ಅನುಭವಿಸಿರುವ ರೈತರಿಗೆ ಹೆಚ್ಚಿನ ಪರಿಹಾರ ದೊರಕಿಸಿಕೊಡುವ ರೀತಿ ವರದಿ ಸಲ್ಲಿಸುವುದಾಗಿ ತಿಳಿಸಿದರು.

ಹಣಕಾಸು ಸಚಿವಾಲಯದ ಕೆ.ಎಸ್‌. ಜಾಕೋಬ್ ಇದ್ದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೆಂಥಿಲ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಡಾ.ವಿಶ್ವನಾಥ್, ಉಪ ವಿಭಾಗಾಧಿಕಾರಿ ಡಾ.ಉದಯ ಕುಮಾರ್ ಶೆಟ್ಟಿ, ತಹಶೀಲ್ದಾರ್ ಧರ್ಮೋಜಿರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.