ADVERTISEMENT

ಮಹಿಳಾ ಆಯೋಗದ ಅಧ್ಯಕ್ಷರಿಗೆ ತರಾಟೆ

ನವಲಗುಂದ ತಹಶೀಲ್ದಾರ್ ವಿರುದ್ಧವೂ ತಿರುಗಿಬಿದ್ದ ಯಮನೂರು ಜನರು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2016, 19:30 IST
Last Updated 2 ಆಗಸ್ಟ್ 2016, 19:30 IST
ನವಲಗುಂದ ತಾಲ್ಲೂಕಿನ ಯಮನೂರ ಗ್ರಾಮದಲ್ಲಿ ತಹಶೀಲ್ದಾರ ನವೀನ ಹುಲ್ಲೂರ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು
ನವಲಗುಂದ ತಾಲ್ಲೂಕಿನ ಯಮನೂರ ಗ್ರಾಮದಲ್ಲಿ ತಹಶೀಲ್ದಾರ ನವೀನ ಹುಲ್ಲೂರ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು   

ನವಲಗುಂದ: ಮಹಾದಾಯಿ ಹೋರಾಟ ಸಂದರ್ಭದಲ್ಲಿ ಪೊಲೀಸರಿಂದ ಪೆಟ್ಟು ತಿಂದ ರೈತರು ಮತ್ತು ಮಹಿಳೆಯರ ಯೋಗಕ್ಷೇಮ ವಿಚಾರಿಸಲು ಯಮನೂರಿಗೆ ಭೇಟಿ ನೀಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಮತ್ತು ನವಲಗುಂದ ತಹಶೀಲ್ದಾರ್‌ ನವೀನ ಹುಲ್ಲೂರ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಪ್ರಸಂಗ ಮಂಗಳವಾರ ನಡೆಯಿತು.

‘ಘಟನೆ ನಡೆದು ನಾಲ್ಕೈದು ದಿನ ಕಳೆದ ನಂತರ ಮಹಿಳಾ ಆಯೋಗದ ಅಧ್ಯಕ್ಷರು ಬಂದಿದ್ದಾರೆ. ನಿಷೇಧಾಜ್ಞೆ ಹೇರಲು ಆದೇಶ ಹೊರಡಿಸಿದ್ದ ತಹಶೀಲ್ದಾರ್‌ ಇಲ್ಲೇ ಇದ್ದರೂ ನಮ್ಮ ಕಷ್ಟ ಏನು ಎಂದು ಕೇಳಲಿಲ್ಲ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಮಂಜುಳಾ ಅವರು ಗ್ರಾಮಕ್ಕೆ ಭೇಟಿ ನೀಡಿದ್ದಾಗ ಶಿಷ್ಟಾಚಾರದಂತೆ ತಹಶೀಲ್ದಾರ್‌ ಕೂಡ ಅಲ್ಲಿಗೆ ಬಂದಿದ್ದರು. ಇದು ಗ್ರಾಮಸ್ಥರ ಸಿಟ್ಟು ಹೆಚ್ಚಾಗಲು ಕಾರಣವಾಯಿತು. ಸಂತ್ರಸ್ತ ಮಹಿಳೆಯರ ಜತೆ ಚರ್ಚೆ ನಡೆಸಿದ ಮಂಜುಳಾ, ನ್ಯಾಯ ಕೊಡಿಸುವ ಭರವಸೆ ನೀಡಿದರು. ಆದರೆ, ಇದನ್ನು ಕೇಳುವ ಸ್ಥಿತಿಯಲ್ಲಿ ಗ್ರಾಮಸ್ಥರು ಇರಲಿಲ್ಲ.

ಸಿನಿಮಾ ಶೂಟಿಂಗ್‌ ನಡೆಯುತ್ತಿಲ್ಲ!: ‘ನಿಮ್ಮ ಸುಳ್ಳು ಭರವಸೆಗಳು ಬೇಡ. ಬಂದವರೆಲ್ಲರೂ ಇದೇ ರೀತಿಯ ಭರವಸೆ ನೀಡುತ್ತಿದ್ದಾರೆ. ಬಂದು ನೋಡಿಕೊಂಡು ಹೋಗಲು ನಮ್ಮೂರಲ್ಲಿ ಸಿನಿಮಾ ಶೂಟಿಂಗ್‌ ನಡೆಯುತ್ತಿಲ್ಲ.

ಬಂದವರೆದುರು ನಮಗಾದ ಗಾಯಗಳನ್ನು ತೋರಿಸಿ ತೋರಿಸಿ ಸಾಕಾಗಿದೆ. ದೌರ್ಜನ್ಯ ಎಸಗಿದ ಪೊಲೀಸ್‌ ಸಿಬ್ಬಂದಿ, ಅಧಿಕಾರಿಗಳು ಮತ್ತು ಇದಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ ಎಂಬುದನ್ನು ಮೊದಲು ತಿಳಿಸಿ’ ಎಂದು ಗ್ರಾಮಸ್ಥರು ಏರು ಧ್ವನಿಯಲ್ಲಿ ಮಂಜುಳಾ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರ ನೀಡಲು ಅವರು ತಡಬಡಾಯಿಸಿದರು. ‘ಆಯೋಗಕ್ಕೆ ಕ್ರಮ ಕೈಗೊಳ್ಳುವ ಅಧಿಕಾರ ಇಲ್ಲ. ಇಲ್ಲಿ ನಡೆದಿರುವ ದೌರ್ಜನ್ಯದ ಕುರುಹುಗಳನ್ನು ಕಣ್ಣಾರೆ ಕಂಡಿದ್ದೇನೆ. ಪೊಲೀಸರು ಅಮಾನುಷವಾಗಿ ವರ್ತಿಸಿದ್ದಾರೆ. ಮಹಿಳೆಯರು, ಮಕ್ಕಳು ಮತ್ತು ಗರ್ಭಿಣಿಯರ ಮೇಲೆ ಮನಬಂದಂತೆ ಲಾಠಿ ಬೀಸಿದ್ದಾರೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ’ ಎಂದು ಹೇಳಿ, ಗ್ರಾಮಸ್ಥರನ್ನು ಸಂತೈಸುವ ಪ್ರಯತ್ನ ಮಾಡಿದರು.

ಅಷ್ಟಕ್ಕೆ ಸುಮ್ಮನಾಗದ ಗ್ರಾಮಸ್ಥರು, ‘ಏನು ಕ್ರಮ ಕೈಗೊಳ್ಳುತ್ತೀರಿ ಎಂಬುದನ್ನು ತಿಳಿಸಿ ಇಲ್ಲಿಂದ ಹೊರಡಿ. ಇಲ್ಲದಿದ್ದರೆ ನಮ್ಮ ಗ್ರಾಮಕ್ಕೆ ಯಾರೂ ಬರುವ ಅಗತ್ಯವಿಲ್ಲ’ ಎಂದೂ ಮುಖಕ್ಕೆ ಹೊಡೆದ ಹಾಗೆ ಹೇಳಿದರು. ಬಳಿಕ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮಂಜುಳಾ ತಮ್ಮ ವಾಹನ ಏರಿ ಊರಿನಿಂದ ಹೊರನಡೆದರು.

ತಹಶೀಲ್ದಾರರನ್ನು ತಳ್ಳಾಡಿದ ಗ್ರಾಮಸ್ಥರು... ‘ಈ ತಹಶೀಲ್ದಾರ್‌ ನಮ್ಮೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ ನಂತರವೇ ಪೊಲೀಸರು ಮನೆಗಳಿಗೆ ನುಗ್ಗಿ ಸಿಕ್ಕಸಿಕ್ಕವರನ್ನು ಒದ್ದು, ಲಾಠಿಯಿಂದ ಹೊಡೆದರು.

ಪೊಲೀಸರ ಈ ಕೃತ್ಯ ನಿಷೇಧಾಜ್ಞೆ ಉಲ್ಲಂಘನೆ ಅಲ್ಲವೇ? ಘಟನೆ ನಂತರ ಇಷ್ಟು ದಿನ ನಾಪತ್ತೆಯಾಗಿದ್ದ ತಹಶೀಲ್ದಾರ್‌ ಈಗೇಕೆ ಬಂದಿದ್ದು?’ ಎಂದು ತಹಶೀಲ್ದಾರ್‌ ನವೀನ್‌ ಹುಲ್ಲೂರು ಅವರನ್ನು ಹಿಡಿದು ಗ್ರಾಮಸ್ಥರು ತಳ್ಳಾಡಿದರು. ನಂತರ ಊರಿನ ಕೆಲವರು ಅವರನ್ನು ಅಲ್ಲಿಂದ ಹೊರ ಕಳುಹಿಸಲು ನೆರವಾದರು.ಬಳಿಕ ತಹಶೀಲ್ದಾರ್‌ ಕಾರಿನಲ್ಲಿ ನಾಪತ್ತೆಯಾದರು.

***
ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದರಿಂದ ಲಾಠಿ ಪ್ರಹಾರ ಮಾಡಲಾಯಿತು. ಒಂದಿಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ ಎಂದು ಎಸ್ಪಿ  ಹೇಳಿದ್ದರು. ಆದರೆ ಖುದ್ದು ಭೇಟಿ ನೀಡಿದಾಗ ಎಸ್‌.ಪಿ ಸುಳ್ಳು ಹೇಳಿದ್ದು ಸ್ಪಷ್ಟವಾಯಿತು
-ಮಂಜುಳಾ ಮಾನಸ,ಅಧ್ಯಕ್ಷರು, ರಾಜ್ಯ ಮಹಿಳಾ ಆಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.