ADVERTISEMENT

ಮಾಂಗಲ್ಯ ತೆಗೆಯಲ್ಲ; ಬಳೆ ಒಡೆಯಲ್ಲ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ಮಂಗಳೂರು: ದಸರಾ ಸಮಯದಲ್ಲಿ ಇಲ್ಲಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ವಿಧವೆಯರಿಂದಲೇ ಚಂಡಿಕಾ ಹೋಮ ಮಾಡಿಸಿ, ಬೆಳ್ಳಿರಥ ಎಳೆಸಿ ಕ್ರಾಂತಿಯನ್ನೇ ಉಂಟುಮಾಡಿದ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರು ದೀಪಾವಳಿ ಸಂದರ್ಭದಲ್ಲಿ ಮತ್ತೊಂದು ಕ್ರಾಂತಿಗೆ ಎಡೆಮಾಡಿಕೊಟ್ಟರು. ಪತಿ ಮೃತಪಟ್ಟರೆ ಮಾಂಗಲ್ಯ ಸರ ಕಿತ್ತೆಸೆಯಲ್ಲ, ಬಳೆ ಒಡೆಯಲ್ಲ ಎಂಬ ಸಂಕಲ್ಪವನ್ನು ಮುತ್ತೈದೆಯರಿಂದ ಮಾಡಿಸಿದ್ದಾರೆ.

ದಸರಾ ಸಮಯದಲ್ಲಿ (ಕಳೆದ ಅ.3) ಪ್ರಸಾದ ರೂಪದಲ್ಲಿ 1500 ಮಂದಿಗೆ ಮಾತ್ರ ಸೀರೆ, ಕುಂಕುಮ, ಅರಶಿನ ವಿತರಿಸುವುದರೊಂದಿಗೆ ಬೆಳ್ಳಿ ರಥ ಎಳೆಸಲಾಗಿತ್ತು. ದೀಪಾವಳಿ ಲಕ್ಷ್ಮೀಪೂಜೆಯ ದಿನವಾದ ಬುಧವಾರ ಮತ್ತೊಮ್ಮೆ ದೇವಸ್ಥಾನದಲ್ಲಿ ವಿಧವೆಯರಿಂದಲೇ ಚಂಡಿಕಾ ಹೋಮ ಮಾಡಿಸಿ, ಬೆಳ್ಳಿ ರಥ ಎಳೆಸಲಾಯಿತು. ಜತೆಗೆ ದೇವಿ ಅನ್ನಪೂರ್ಣೇಶ್ವರಿಯ ಮುಂದೆ ನಿಂತ ಮುತ್ತೈದೆಯರು ಧ್ವನಿವರ್ಧಕದಲ್ಲಿ ಪತಿ ನಿಧನದ ನಂತರವೂ ತಾವು ಯಾರೂ ಮಾಂಗಲ್ಯ ಕಿತ್ತೆಸೆಯುವುದಿಲ್ಲ ಎಂಬ ಸಂಕಲ್ಪ ಮಾಡಿದರು.

ಜನಾರ್ದನ ಪೂಜಾರಿ ಅವರ ಪತ್ನಿ ಮಾಲತಿ, ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖರಾದ ಎಚ್.ಎಸ್.ಸಾಯಿರಾಂ ಅವರ ಪತ್ನಿ ಕಲ್ಪನಾ, ಹರಿಕೃಷ್ಣ ಬಂಟ್ವಾಳ್ ಅವರ ಪತ್ನಿ ಶಶಿಕಲಾ, ಬಿ.ಜಿ.ಸುವರ್ಣ ಅವರ ಪತ್ನಿ ಪುಷ್ಪಲತಾ, ಎಚ್.ಎಂ.ರಾಮಯ್ಯ ಅವರ ಪತ್ನಿ ಲಲಿತಾ ಮೊದಲಾದವರು ಪತಿ ಎದುರಲ್ಲೇ ಸಂಕಲ್ಪ ಮಾಡಿದರು.

ವಿಧವೆಯರಿಂದ ಪೂಜೆ, ವಿಧವಾ ಮರುವಿವಾಹದಂತಹ ಕಾರ್ಯಗಳಿಗೆ ಕುದ್ರೋಳಿ ಕ್ಷೇತ್ರ ನಾಂದಿ ಹಾಡಿದೆ, ಮುಂದಿನ ದಿನಗಳಲ್ಲಿ ನಾಡಿನ ನಾನಾ ಭಾಗಗಳಲ್ಲಿ ಇರುವ ನಾರಾಯಣ ಗುರುಮಂದಿರಗಳಲ್ಲಿ ಈ ಸಂಪ್ರದಾಯ ಮುಂದುವರಿಸಲಾಗುವುದು ಎಂದು ಜನಾರ್ದನ ಪೂಜಾರಿ ಹೇಳಿದರು.

ಮರುವಿವಾಹ: ಇದೀಗ ವಿಧವೆಯರನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿ ಹಲವರು ದೇವಸ್ಥಾನವನ್ನು ಸಂಪರ್ಕಿಸಿದ್ದಾರೆ. ಯಾವುದೇ ಕಾನೂನು ತಕರಾರು ಇಲ್ಲದವರು ದೇವಸ್ಥಾನವನ್ನು ಸಂಪರ್ಕಿಸಿದರೆ ಉಚಿತವಾಗಿ ಮರುವಿವಾಹ ಮಾಡಿಸಿಕೊಡಲಾಗುವುದು. ಸದ್ಯ ವಿಧವೆಯರ ವಿವರಗಳನ್ನು ದಾಖಲಿಸುವ ಕೆಲಸ ದೇವಸ್ಥಾನದಲ್ಲಿ ನಡೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನಹರಿಸಲಾಗುವುದು. ಮಾಹಿತಿಗೆ 0824- 2495740/ 2494040 (ಎಚ್.ಎಸ್.ಸಾಯಿರಾಂ, ಅಧ್ಯಕ್ಷರು, ಕುದ್ರೋಳಿ ಕ್ಷೇತ್ರ) ಸಂಪರ್ಕಿಸಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.