ADVERTISEMENT

ಮಾಗಡಿ ಹಗರಣ: ಕ್ರಿಮಿನಲ್ ಮೊಕದ್ದಮೆ ದಾಖಲು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಮಾಗಡಿ ಉಪ ವಿಭಾಗದಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆಸಿರುವ ಆರೋಪದ ಮೇಲೆ ಇಲಾಖೆಯ ಕಾರ್ಯದರ್ಶಿ ಸದಾಶಿವ ರೆಡ್ಡಿ ಪಾಟೀಲ್ ಸೇರಿದಂತೆ 12 ಅಧಿಕಾರಿಗಳು ಹಾಗೂ ಮೂವರು ಗುತ್ತಿಗೆದಾರರ ವಿರುದ್ಧ ಲೋಕಾಯುಕ್ತ ಪೊಲೀಸರು ಗುರುವಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ಮಾಗಡಿ ಉಪ ವಿಭಾಗದಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಅಕ್ರಮ ನಡೆದಿದೆ ಎಂಬ ದೂರುಗಳ ಕುರಿತು ರಾಮನಗರ ಲೋಕಾಯುಕ್ತ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದ್ದರು. 350 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಕಾಮಗಾರಿಗಳಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿರುವುದು ಪ್ರಾಥಮಿಕ ವಿಚಾರಣೆ ವೇಳೆ ಖಚಿತವಾಗಿದೆ. ಈ ವರದಿಯನ್ನು ಆಧರಿಸಿ ರಾಮನಗರ ಲೋಕಾಯುಕ್ತ ಪೊಲೀಸರು 15 ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಿ, ತನಿಖೆ ಕೈಗೆತ್ತಿಕೊಂಡಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ ಕಾಯ್ದೆ (ಕೆಟಿಪಿಪಿ) ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಕಲಮುಗಳ ಅಡಿಯಲ್ಲಿ ಈ ಮೊಕದ್ದಮೆಯನ್ನು ದಾಖಲಿಸಲಾಗಿದೆ. ಅಧಿಕಾರ ದುರ್ಬಳಕೆ, ನಂಬಿಕೆದ್ರೋಹ, ಕ್ರಿಮಿನಲ್ ಒಳಸಂಚು, ವಂಚನೆ ಮತ್ತಿತರ ಆರೋಪಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು `ಪ್ರಜಾವಾಣಿ' ಜೊತೆ ಮಾತನಾಡಿದ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್, `ಹಗರಣದ ಕುರಿತು ರಾಮನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ ನೇತೃತ್ವದಲ್ಲಿ ಪ್ರಾಥಮಿಕ ವಿಚಾರಣೆ ನಡೆಸಲಾಗಿತ್ತು. ಭಾರಿ ಪ್ರಮಾಣದಲ್ಲಿ ಅಕ್ರಮ ನಡೆದಿರುವುದು ವಿಚಾರಣೆ ವೇಳೆ ಕಂಡುಬಂದಿದೆ. ತನಿಖಾ ತಂಡದ ವರದಿಯನ್ನು ಆಧರಿಸಿ 15 ಜನರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ' ಎಂದರು.

800ಕ್ಕೂ ಹೆಚ್ಚು ಕಾಮಗಾರಿಗಳನ್ನು ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ಕೈಗೆತ್ತಿಕೊಳ್ಳಲಾಗಿದೆ. ಒಂದೇ ಕಾಮಗಾರಿಗೆ ಎರಡು ಬಿಲ್‌ಗಳನ್ನು ವಿತರಿಸಿರುವ ಹಲವು ಪ್ರಕರಣಗಳೂ ನಡೆದಿವೆ. ಮಾಗಡಿ ಉಪ ವಿಭಾಗದ ಅಧಿಕಾರಿಗಳು ಮೂವರು ಗುತ್ತಿಗೆದಾರರ ಜೊತೆ ಸೇರಿಕೊಂಡು ಅವರಿಗೆ ಅನುಕೂಲ ಆಗುವ ರೀತಿಯಲ್ಲೇ ಅಂದಾಜು ಪಟ್ಟಿಗಳನ್ನು ಸಿದ್ಧಪಡಿಸಿದ್ದಾರೆ ಎಂಬ ಅಂಶಗಳು ಪ್ರಾಥಮಿಕ ವಿಚಾರಣೆ ವೇಳೆ ಬೆಳಕಿಗೆ ಬಂದಿವೆ.

`ಹಲವು ಕಡೆಗಳಲ್ಲಿ ಯಾವುದೇ ಕಾಮಗಾರಿ ನಡೆಯದಿದ್ದರೂ ಕೆಂಪರಾಜು, ನಂಜಯ್ಯ ಮತ್ತು ಶಂಕರ್ ಅವರಿಗೆ ಹಣ ಪಾವತಿಸಲಾಗಿದೆ. ಇತರೆ ಗುತ್ತಿಗೆದಾರರು ಬಾಕಿ ಹಣ ಪಡೆಯಲು ತಿಂಗಳಾನುಗಟ್ಟಲೆ ಕಾಯುತ್ತಿದ್ದರೂ ಈ ಮೂವರಿಗೆ ಜ್ಯೇಷ್ಠತೆ ಉಲ್ಲಂಘಿಸಿ ಹಣ ಪಾವತಿಸಲಾಗಿದೆ. ಇವರಿಗೆ ಅನುಕೂಲ ಮಾಡಿಕೊಡುವ ಒಂದೇ ಉದ್ದೇಶದಿಂದ ಎಲ್ಲ ಕಾಮಗಾರಿಗಳನ್ನೂ 20 ಲಕ್ಷ  ಕಡಿಮೆ ಮೊತ್ತಕ್ಕೆ ವಿಭಜಿಸಲಾಗಿತ್ತು' ಎಂಬ ಅಂಶ ವರದಿಯಲ್ಲಿದೆ.

ಗಂಗಾಧರಯ್ಯ ಹಲವು ಕಾಮಗಾರಿಗಳಿಗೆ ತಾಂತ್ರಿಕ ಮತ್ತು ಆಡಳಿತಾತ್ಮಕ ಮಂಜೂರಾತಿ ಪಡೆಯದೇ ಟೆಂಡರ್ ಪ್ರಕ್ರಿಯೆ ನಡೆಸಿದ್ದರು. ಸುಪರಿಂಟೆಂಡಿಂಗ್ ಎಂಜಿನಿಯರ್ ಅನುಮತಿ ಪಡೆಯದೇ ಅಲ್ಪಾವಧಿ ಟೆಂಡರ್ ಪ್ರಕ್ರಿಯೆ ನಡೆಸುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರು. ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳನ್ನೂ ಸರಿಯಾಗಿ ನಿರ್ವಹಿಸಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೊಡ್ಡವರ ಪಾತ್ರವೂ ಪತ್ತೆ: ಮುಖ್ಯ ಎಂಜಿನಿಯರ್ ಹುದ್ದೆಯಲ್ಲಿದ್ದ ಸದಾಶಿವ ರೆಡ್ಡಿ ಪಾಟೀಲ್ ಒಂದೇ ವರ್ಷದಲ್ಲಿ 272 ಕೋಟಿ ರೂಪಾಯಿ ಅನುದಾನವನ್ನು ಮಾಗಡಿ ಉಪ ವಿಭಾಗಕ್ಕೆ ಮಂಜೂರು ಮಾಡಿದ್ದಾರೆ. ಈ ಉಪ ವಿಭಾಗದಲ್ಲಿ 275.88 ಕಿ.ಮೀ. ಉದ್ದದ ಲೋಕೋಪಯೋಗಿ ರಸ್ತೆಗಳಿದ್ದು, ಅನುದಾನವನ್ನು ಸರಿಯಾಗಿ ಬಳಸಿದ್ದಲ್ಲಿ ಸಂಪೂರ್ಣವಾಗಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ಸಾಧ್ಯವಿತ್ತು. ಮುಖ್ಯ ಎಂಜಿನಿಯರ್ ರಸ್ತೆಗಳ ಉದ್ದ ಮತ್ತು ಸ್ಥಿತಿಯನ್ನು ಖಚಿತಪಡಿಸಿಕೊಳ್ಳದೇ ಅನುದಾನ ಬಿಡುಗಡೆ ಮಾಡಿದ್ದಾರೆ ಎಂಬ ಆರೋಪ ವರದಿಯಲ್ಲಿದೆ.

`ಹಣ ಭರವಸೆ ಪತ್ರ' (ಎಲ್‌ಒಸಿ) ನೀಡುವ ಮುನ್ನ ಮುಖ್ಯ ಎಂಜಿನಿಯರ್, ರಸ್ತೆಗಳ ಉದ್ದ, ಕಾಮಗಾರಿಯ ಗುಣಮಟ್ಟ ಮತ್ತಿತರ ಅಂಶಗಳನ್ನು ಖಚಿತಪಡಿಸಿಕೊಳ್ಳದೇ ಕರ್ತವ್ಯ ಲೋಪ ಎಸಗಿದ್ದಾರೆ. ಲೆಕ್ಕಪತ್ರ ಪರಿಶೀಲನೆಗೆ ಕಡತಗಳನ್ನು ಸಲ್ಲಿಸುವ ಮುನ್ನವೂ ಈ ಕುರಿತು ತಪಾಸಣೆ ನಡೆಸಿಲ್ಲ. ಹಲವು ಸಂದರ್ಭಗಳಲ್ಲಿ ನಿರ್ದಿಷ್ಟ ಕಾಮಗಾರಿಯ ವಿವರವನ್ನೂ ಉಲ್ಲೇಖಿಸಿ ಅನುದಾನ ಮಂಜೂರು ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ತನಿಖಾ ತಂಡ ಅಭಿಪ್ರಾಯಪಟ್ಟಿದೆ.

ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರರಾಗಿದ್ದ ಗೋವಿಂದರಾಜು, ಸೂಕ್ತ ಬೇಡಿಕೆಗಳು ಇಲ್ಲದಿದ್ದರೂ ದಕ್ಷಿಣ ವಿಭಾಗದ ಮುಖ್ಯ ಎಂಜಿನಿಯರ್ ಮತ್ತು ಬೆಂಗಳೂರು ವೃತ್ತದ ಸುಪರಿಂಟಎಂಜಿನಿಯರ್ ಕಚೇರಿಗೆ ಭಾರಿ ಮೊತ್ತದ ಅನುದಾನ ಬಿಡುಗಡೆ ಮಾಡಿದ್ದಾರೆ. ಬಳಿಕ ಆದ್ಯತೆ ಮೇರೆಗೆ `ಹಣ ಭರವಸೆ ಪತ್ರ'ಗಳನ್ನೂ ನೀಡಿರುತ್ತಾರೆ. ತಾವೇ ಮುತುವರ್ಜಿ ವಹಿಸಿ ಬಜೆಟ್ ಅನುದಾನದಲ್ಲಿ (ಅಪೆಂಡಿಕ್ಸ್-ಇ) ಮಂಜೂರಾತಿಯನ್ನೂ ಪಡೆದಿದ್ದಾರೆ.

ಈ ಪ್ರಕರಣದಲ್ಲಿ ಇವರ ಪಾತ್ರ ಸಂಶಯಾಸ್ಪದವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಾರ್ಯನಿರ್ವಾಹಕ ಎಂಜಿನಿಯರ್ ಮೇಲೆ ನೇರ ನಿಯಂತ್ರಣ ಹೊಂದಿದ್ದ ಉದಯಶಂಕರ್, ಅಧಿಕಾರವನ್ನು ಪೂರ್ಣವಾಗಿ ಬಳಸಿಕೊಂಡು ಅಕ್ರಮಗಳನ್ನು ತಡೆಯುವ ಪ್ರಯತ್ನ ಮಾಡಿಲ್ಲ. ಅಕ್ರಮಗಳು ನಡೆದಿರುವುದು ಗಮನಕ್ಕೆ ಬಂದ ಬಳಿಕವೂ ಕಾರ್ಯದರ್ಶಿ (ಕೆ.ಬಿ.ದೇವರಾಜ್) ಯಾವುದೇ ಕ್ರಮ ಜರುಗಿಸಿಲ್ಲ. ಹಣ ಬಿಡುಗಡೆ ತಡೆಯುವ ಪ್ರಯತ್ನವನ್ನೂ ಮಾಡಿಲ್ಲ. ಆರ್ಥಿಕ ಇಲಾಖೆಗೆ ಕಡತಗಳನ್ನು ಸಲ್ಲಿಸುವಾಗಲೂ ಸೂಕ್ತ ಪರಿಶೀಲನೆ ನಡೆಸಿಲ್ಲ ಎಂಬ ಆರೋಪ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.