ADVERTISEMENT

ಮಾಜಿ ಸಚಿವ ರಂಗನಾಥ್ ನಿಧನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST
ಮಾಜಿ ಸಚಿವ ರಂಗನಾಥ್ ನಿಧನ
ಮಾಜಿ ಸಚಿವ ರಂಗನಾಥ್ ನಿಧನ   

ಬೆಂಗಳೂರು: ಮಾಜಿ ಸಚಿವ, ಸಮಾಜವಾದಿ ಹಿನ್ನೆಲೆಯ ರಾಜಕೀಯ ಮುತ್ಸದ್ದಿ, ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಚ್. ರಂಗನಾಥ್ (85) ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ಇಬ್ಬರು ಪುತ್ರರು ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

1942ರಲ್ಲಿ ಮಹಾತ್ಮ ಗಾಂಧೀಜಿ ಕರೆ ನೀಡಿದ `ಕ್ವಿಟ್ ಇಂಡಿಯಾ~ ಚಳವಳಿಯಲ್ಲಿ ಭಾಗವಹಿಸಿದ ಕಾರಣ ಅವರು ಜೈಲುವಾಸವನ್ನೂ ಅನುಭವಿಸಿದರು. ನಂತರದ ದಿನಗಳಲ್ಲಿ ಸಮಾಜವಾದಿ ಸಿದ್ಧಾಂತದೆಡೆಗೆ ಆಕರ್ಷಿತರಾದರು.

ADVERTISEMENT

ಆರು ಬಾರಿ ವಿಧಾನಸಭೆಯ ಸದಸ್ಯರಾಗಿದ್ದ ಅವರು, 1984ರಿಂದ 1989ರ ಅವಧಿಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರೂ ಆಗಿದ್ದರು. ಸಾರಿಗೆ ಹಾಗೂ ಪ್ರವಾಸೋದ್ಯಮ (1973), ಸಹಕಾರ (1974), ಕೃಷಿ ಹಾಗೂ ಸಂಸದೀಯ ವ್ಯವಹಾರ (1978), ಕೃಷಿ, ತೋಟಗಾರಿಕೆ, ಶಿಕ್ಷಣ ಮತ್ತು ಅರಣ್ಯ (1989) ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. 1981ರಲ್ಲಿ ವಿಧಾನಸಭೆಯ ಅಧ್ಯಕ್ಷರೂ ಆಗಿದ್ದರು. ನಂತರ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲೂ ಅರಣ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ರಾಜಕೀಯದ ಆರಂಭದ ದಿನಗಳಲ್ಲಿ ಸಮಾಜವಾದಿ ಪಕ್ಷದೊಂದಿಗೆ ಗುರುತಿಸಿಕೊಂಡರೂ ನಂತರದ ದಿನಗಳಲ್ಲಿ ಕಾಂಗ್ರೆಸ್‌ನಲ್ಲಿ ಭದ್ರ ನೆಲೆ ಕಂಡುಕೊಂಡರು. 1962 ಮತ್ತು 1967ರಲ್ಲಿ ಮೂಡಿಗೆರೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಮೀಸಲು ಕ್ಷೇತ್ರವಾದ ಹಿರಿಯೂರು ಮುಂದಿನ ದಿನಗಳಲ್ಲಿ ರಂಗನಾಥ್ ಅವರ ನೆಲೆಯಾಯಿತು. ದಲಿತ ಸಮುದಾಯಕ್ಕೆ ಸೇರಿದ ಅವರು 1984ರ ಲೋಕಸಭಾ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರ ಚಿತ್ರದುರ್ಗದಿಂದ ಆಯ್ಕೆಯಾಗುವ ಮೂಲಕ ಗಮನ ಸೆಳೆದರು.

ರಂಗನಾಥ್ ಅವರ ಅಂತ್ಯಕ್ರಿಯೆ ಹಿರಿಯೂರಿಗೆ ಸಮೀಪದ ಕಸವನಹಳ್ಳಿಯ ಅವರ ತೋಟದ ಮನೆಯಲ್ಲಿ ಬುಧವಾರ ಬೆಳಿಗ್ಗೆ ನಡೆಯಲಿದೆ. ಮಂಗಳವಾರ ಮಧ್ಯಾಹ್ನ ಅವರ ಪಾರ್ಥಿವ ಶರೀರವನ್ನು ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಸಾವಿರಾರು ಅಭಿಮಾನಿಗಳು ಅವರಿಗೆ ಈ ಸಂದರ್ಭದಲ್ಲಿ ಗೌರವ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.