ADVERTISEMENT

ಮಾಜಿ ಸಿಎಂ ತೋಟದಲ್ಲಿ ಅಕ್ರಮ ಹಣ: ರಾತ್ರಿಯೆಲ್ಲ ಜನರ ಜಾಗರಣೆ!

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸೇರಿದ ತಾಲ್ಲೂಕಿನ ಸಿದ್ದನಪುರ ಸಮೀಪದ ತೋಟದ ಮನೆಯಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸಿ ಇಟ್ಟಿದ್ದು, ಅದನ್ನು ಬೇರೆಡೆಗೆ ಸಾಗಿಸುತ್ತಿದ್ದಾರೆ ಎನ್ನುವ ಗಾಳಿಸುದ್ದಿಯಿಂದ ಮನೆಯ ಬಳಿ ಜನರು ಜಮಾವಣೆಗೊಂಡಿದ್ದ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ಬಿ.ಎಸ್. ಯಡಿಯೂರಪ್ಪ ತೋಟದ ಮನೆಯಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸಿದ್ದು, ಸೋಮವಾರ ಲೋಕಯುಕ್ತ ದಾಳಿ ನಡೆಯುವ ಹಿನ್ನೆಲೆಯಲ್ಲಿ ಅದನ್ನು ಬೇರೆಡೆಗೆ ಸಾಗಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಸುದ್ದಿ ಪಟ್ಟಣದಲ್ಲಿ ಸಂಜೆ  ಜನರ ಬಾಯಲ್ಲಿ ಹರಿದಾಡುತ್ತಿತ್ತು. ರಾತ್ರಿ ಗ್ರಾಮದ ಜನರು ತಂಡ ತಂಡವಾಗಿ ತೋಟದ ಮನೆಯ ಗೇಟಿನ ಬಳಿಯಲ್ಲಿ ಜಮಾಯಿಸಿದ್ದರು.

 ಕಂಪೌಂಡ್, ಕಬ್ಬಿಣದ ಗೇಟು ಅಳವಡಿಕೆಯಿಂದಾಗಿ ಜನರಿಗೆ ಒಳಗಿನ ದೃಶ್ಯ ಕಾಣುತ್ತಿರಲಿಲ್ಲ. ಈ ಕಾರಣಕ್ಕಾಗಿ ನೆರೆದಿದ್ದ ಜನರೂ ಸುದ್ದಿಗೆ ಕಿವಿಕೊಟ್ಟರು. ಸಮಯ ಕಳೆಯುತ್ತಿದ್ದಂತೆ ಜನರ ಸಂಖ್ಯೆಯೂ ದೊಡ್ಡದಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು. ಮುಖ್ಯರಸ್ತೆಯ ಗ್ರಾಮಗಳಲ್ಲಿ ಜನರು ರಾತ್ರಿಪೂರ್ತಿ ಎಚ್ಚರವಿದ್ದು, ತಂಡ ತಂಡವಾಗಿ ರಸ್ತೆಯಲ್ಲೇ ಕಾಲಕಳೆದಿದ್ದಾರೆ.

ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಆದ ನಂತರ ಹೊಸ ತೋಟದ ಮಧ್ಯೆ ಜನರ ಕಣ್ಣಿಗೆ ಕಾಣದ ರೀತಿಯಲ್ಲಿ ಅತ್ಯಾಧುನಿಕ ಮನೆಯನ್ನು ನಿರ್ಮಿಸಿದ್ದು, ಕುಟುಂಬ ಸದಸ್ಯರನ್ನು ಹೊರತು ಪಡಿಸಿ ಅಲ್ಲಿಗೆ ಯಾರಿಗೂ ಪ್ರವೇಶ ನೀಡುತ್ತಿರಲಿಲ್ಲ ಎನ್ನಲಾಗಿದೆ.
 
ಲೋಕಾಯುಕ್ತರು ದಾಖಲಿಸಿರುವ ಹಲವು ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿರುವ ಯಡಿಯೂರಪ್ಪ ಅಕ್ರಮವಾಗಿ ಇದೇ ಮನೆಯಲ್ಲಿ ಹಣ ಇಟ್ಟಿದ್ದಾರೆ. ಅದನ್ನು ಸಾಗಿಸುತ್ತಿದ್ದಾರೆ ಎನ್ನುವ ಮಾತನ್ನು ಜನರು ಸುಲಭವಾಗಿ ನಂಬಿದ್ದು ಗಾಳಿಸುದ್ದಿ ಪ್ರಬಲವಾಗುವುದಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಕುಟುಂಬ ಸದಸ್ಯರು ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ.

ಮಾಧ್ಯಮದವರಿಂದ 3 ತಿಂಗಳು ದೂರ: ಬಿಎಸ್‌ವೈ


ಧಾರವಾಡ: ಮಾಧ್ಯಮಗಳೊಂದಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಾತ್ಕಾಲಿಕವಾಗಿ ಮುನಿಸಿಕೊಂಡಿದ್ದು, 3 ತಿಂಗಳವರೆಗೆ ಮೌನವಾಗಿರಲು ನಿರ್ಧರಿಸಿರುವುದಾಗಿ ಪ್ರಕಟಿಸಿದರು.

ಧಾರವಾಡ ಹಾಲು ಒಕ್ಕೂಟದ ಬೆಳ್ಳಿ ಹಬ್ಬದ ಸಮಾರಂಭವನ್ನು ಉದ್ಘಾಟನೆ ಸಮಾರಂಭದಲ್ಲಿ ಅವರು ಈ ರೀತಿ ಪ್ರತಿಕ್ರಿಯಿಸಿದರು. `ಮೂರು ತಿಂಗಳು ಮಾಧ್ಯಮದವರಿಂದ ಅದರಲ್ಲೂ ಟಿವಿ ಮಾಧ್ಯಮದವರಿಂದ ದೂರ ಇರಬೇಕು ಎಂದು ಅಂದುಕೊಂಡಿದ್ದೇನೆ.

ನಾನು ಹೇಳುವುದು ಒಂದು, ನೀವು ಬರೆಯುವುದು ಒಂದು. ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ, ಅಧಿಕಾರಿಗಳು ಮತ್ತೇನಾದರೂ ತಿಳಿದುಕೊಳ್ಳುವ ಸಾಧ್ಯತೆಯಿರುತ್ತದೆ. ಅದಕ್ಕಾಗಿ ಮಾಧ್ಯಮದವರೊಂದಿಗೆ ಮೌನವಾಗಿದ್ದು ಬಿಡುತ್ತೇನೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT