ಮಡಿಕೇರಿ: ಸ್ಥಳೀಯವಾಗಿ ಉದ್ಯೋಗ ಪಡೆದುಕೊಳ್ಳಲು ಮಾಜಿ ಸೈನಿಕರಿಗೆ ‘ಕೌಶಲ ಪ್ರಮಾಣ ಪತ್ರ’ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಭೂಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಹೇಳಿದರು.
ನಗರದಲ್ಲಿ ಶನಿವಾರ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾದ ವತಿಯಿಂದ ನಡೆದ ನಿವೃತ್ತ ಯೋಧರ ಸಮಾವೇಶದಲ್ಲಿ ಅವರು ಮಾತನಾಡಿದರು. 10 ರಾಜ್ಯಗಳಲ್ಲಿ ಮಾಜಿ ಸೈನಿಕರ ಚಿಕಿತ್ಸೆಗೆಂದು 200 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದ ಪ್ರಸ್ತಾವಕ್ಕೆ ಕರ್ನಾಟಕ ಸೇರಿ ನಾಲ್ಕು ರಾಜ್ಯಗಳು ಮಾತ್ರ ಒಪ್ಪಿಗೆ ನೀಡಿದ್ದು, ಇನ್ನೂ ಆರು ರಾಜ್ಯಗಳು ಒಪ್ಪಿಗೆ ನೀಡುವುದು ಬಾಕಿಯಿದೆ ಎಂದು ಹೇಳಿದರು.
ಮಾಜಿ ಸೈನಿಕರಿಗೆ ಚಿಕಿತ್ಸೆ ನೀಡಲು ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳು, ನಕಲಿ ಬಿಲ್ ಸೃಷ್ಟಿಸಿ ದುಪ್ಪಟ್ಟು ಹಣ ಪಡೆದುಕೊಳ್ಳುತ್ತಿವೆ.ಚಿಕಿತ್ಸೆಗೆ ಬರುವ ಮಾಜಿ ಸೈನಿಕರನ್ನು ಆಸ್ಪತ್ರೆಯ ಸಿಬ್ಬಂದಿ ಸತಾಯಿಸುತ್ತಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ಸೇನೆಯ ವತಿಯಿಂದಲೇ ಹಂತಹಂತವಾಗಿ ಅತ್ಯಾಧುನಿಕ ಸೌಲಭ್ಯವುಳ್ಳ ಆಸ್ಪತ್ರೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ಅವರು ನೀಡಿದರು.
ಖಾಸಗಿ ಆಸ್ಪತ್ರೆಗೆ ಬರುವ ಮಾಜಿ ಸೈನಿಕರ ಚಿಕಿತ್ಸೆಗೆ ನೆರವಾಗಲು ತಾತ್ಕಾಲಿಕವಾಗಿ ಇಬ್ಬರು ಸಿಬ್ಬಂದಿ ನೇಮಕಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಸೇನಾ ಕ್ಯಾಂಟೀನ್‌ಗಳ ವ್ಯವಸ್ಥೆ ಸುಧಾರಣೆ ಮಾಡಲಾಗುತ್ತದೆ. ‘ಒಂದು ರ್‍ಯಾಂಕ್ ಒಂದು ಪಿಂಚಣಿ’ ಯೋಜನೆಗೆ ಕೇಂದ್ರ ಅಗತ್ಯ ಅನುದಾನದ ಭರವಸೆ ನೀಡಿದೆ ಎಂದು ಅವರು ಹೇಳಿದರು.
ಮಡಿಕೇರಿ ಜನರಲ್ ಕೆ.ಎಸ್.ತಿಮ್ಮಯ್ಯ ಮ್ಯೂಸಿಯಂ, ಕುಶಾಲನಗರ ಕೂಡಿಗೆಯ ಸೈನಿಕ ಶಾಲೆಯಲ್ಲಿಡಲು ಹಳೆಯ ಯುದ್ಧ ಟ್ಯಾಂಕ್‌ಗಳನ್ನು ನೀಡಲಾಗುವುದು. ಜಿಲ್ಲೆಯ ಗಾಳಿಬೀಡಿನಲ್ಲಿ ರಕ್ಷಣಾ ಇಲಾಖೆಗೆ ಸೇರಿದ 40 ಎಕರೆ ಜಾಗವನ್ನು ಸೇನಾ ಚಟುವಟಿಕೆ ನಡೆಸಲು ಬಳಕೆ ಮಾಡಿಕೊಳ್ಳಲಾಗುವುದು. ಶೀಘ್ರವೇ ಸೇನಾ ನೇಮಕಾತಿ ರ್‍ಯಾಲಿ ನಡೆಸಲಾಗುವುದು. ನಿವೃತ್ತ ಸೈನಿಕರಿಗೆ ಸಮಾಜದಲ್ಲಿ ಅತ್ಯುನ್ನತ ಗೌರವ ಸಿಗಬೇಕು. ಆ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.
‘ಪುಟ್ಟ ಜಿಲ್ಲೆ ಕೊಡಗಿನ ಅನೇಕರು ದೇಶಸೇವೆ ಮಾಡುತ್ತಿದ್ದಾರೆ. ಭಾರತೀಯ ಸೇನೆಯಲ್ಲಿ ಅತ್ಯುನ್ನತ ಸ್ಥಾನ ಪಡೆದಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಕೊಡಗಿನವರು. ಸೇನೆ ಮಾತ್ರವಲ್ಲ; ಕ್ರೀಡಾ ಕ್ಷೇತ್ರದಲ್ಲೂ ಕೊಡಗಿನ ಪ್ರತಿಭೆಗಳು ಮಿಂಚುತ್ತಿದ್ದಾರೆ. ಇದೊಂದು ಪುಣ್ಯಭೂಮಿ’ ಎಂದು ದಲ್ಬೀರ್ ಸಿಂಗ್ ಸುಹಾಗ್ ಬಣ್ಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.