ADVERTISEMENT

ಮಾಡಿದ್ದುಣ್ಣೋ ಗಣಿರಾಯ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಬಳ್ಳಾರಿ: ಅಕ್ರಮ ಗಣಿಗಾರಿಕೆ, ರಾಜಸ್ವ ವಂಚನೆ, ಗಣಿ- ಗಡಿ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರದ ಆದೇಶದಂತೆ ನಡೆದಿರುವ ಸಿಬಿಐನ  ತನಿಖೆಗೆ ಒಳಗಾಗಿರುವ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಇದೀಗ ಬಂಧನಕ್ಕೆ ಒಳಗಾಗಿದ್ದಾರೆ.

ಸಿಬಿಐ ತನಿಖೆಗೆ ಮುನ್ನ ಸಮಿತಿಯೊಂದು ಈ ಪ್ರದೇಶಕ್ಕೆ ಭೇಟಿ ನೀಡಿ, ಸಮೀಕ್ಷೆ ನಡೆಸಿದ್ದಲ್ಲದೆ, ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಪ್ರತ್ಯೇಕವಾಗಿ ಸಲ್ಲಿಸಿದ್ದ ವರದಿಯೂ ತನಿಖೆಗೆ ಪುಷ್ಟಿ ನೀಡಿದ್ದು, ಗಣಿ ಅಕ್ರಮ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.

ಕರ್ನಾಟಕ-ಆಂಧ್ರಪ್ರದೇಶದ ಅಂತರರಾಜ್ಯ ಗಡಿಯಲ್ಲಿ, ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿನ ಓಬಳಾಪುರಂ ಗ್ರಾಮದ ಬಳಿಯ (ಬಳ್ಳಾರಿ ಸಮೀಪ) ಗಣಿ ಪ್ರದೇಶಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ನಡೆದಿದೆ ಎಂದು ಆರೋಪಿಸಿ 2009ರ ನವೆಂಬರ್‌ನಲ್ಲಿ ವಿರೋಧ ಪಕ್ಷಗಳು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಜಿ.ಜನಾರ್ದನರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿ (ಓಎಂಸಿ) ವಿರುದ್ಧ ಅಲ್ಲಿನ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು.

ಓಎಂಸಿ-1 ಮತ್ತು 2, ಅನಂತಪುರ ಮೈನಿಂಗ್ ಕಂಪೆನಿ (ಎಎಂಸಿ), ಮಲಪನಗುಡಿ ಬಳಿಯ ಅಂತರಗಂಗಮ್ಮ ಕೊಂಡದಲ್ಲಿರುವ ಒಂದು ಗಣಿ ಸೇರಿದಂತೆ ರೆಡ್ಡಿ ಒಡೆತನಕ್ಕೆ ಸೇರಿರುವ ನಾಲ್ಕು ಗಣಿಗಳಲ್ಲಿ ನಡೆದಿರುವ ಅಕ್ರಮಗಳ ತನಿಖೆಯನ್ನು ಆಂಧ್ರಪ್ರದೇಶ ಸರ್ಕಾರ 2009ರ ಡಿಸೆಂಬರ್‌ನಲ್ಲಿ ಸಿಬಿಐಗೆ ಆದೇಶಿಸಿತ್ತಾದರೂ, ತನಿಖೆ ಆರಂಭವಾದ ಕೆಲವೇ ದಿನಗಳಲ್ಲಿ ಓಎಂಸಿ ಸಲ್ಲಿಸಿದ್ದ ತಾಂತ್ರಿಕ ಆಕ್ಷೇಪಣೆ ಅರ್ಜಿ ಅನ್ವಯ ಆಂಧ್ರದ ಹೈಕೋರ್ಟ್‌ನ ಏಕಸದಸ್ಯ ಪೀಠ, ಈ ತನಿಖೆಗೆ ತಡೆಯಾಜ್ಞೆ ನೀಡಿತ್ತು. ನಂತರ 2010ರ ಡಿ.16ರಂದು ಈ ತಡೆಯಾಜ್ಞೆ ತೆರವುಗೊಳಿಸಿದ್ದರಿಂದ ತನಿಖೆ ಪುನಾರಂಭವಾಗಿತ್ತು.

ವಿಧಾನಸಭೆಯಲ್ಲಿ ಕೋಲಾಹಲ: ಆಂಧ್ರಪ್ರದೇಶದ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ತೀವ್ರ ಕೋಲಾಹಲ ಸೃಷ್ಟಿಸಿ, ಒತ್ತಡ ಹೇರಿದ್ದರಿಂದ ಆಂಧ್ರದ ಆಗಿನ ಮುಖ್ಯಮಂತ್ರಿ ರೋಸಯ್ಯ, ಅರಣ್ಯ ಇಲಾಖೆ ಅಧಿಕಾರಿ ಸಮಿ ರೆಡ್ಡಿ ನೇತೃತ್ವದ ತ್ರಿಸದಸ್ಯ ಸಮಿತಿಯೊಂದನ್ನು ರಚಿಸಿ, ಅಕ್ರಮ ನಡೆದಿರುವ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದರು.

ಸಮೀಕ್ಷೆ ನಡೆಸಿದ್ದ ಸಮಿತಿಯು ಗಣಿ ಗುತ್ತಿಗೆ, ಅದರ ವಿಸ್ತರಣೆ, ಗಣಿಗಾರಿಕೆ ನಡೆಸಿದ್ದಕ್ಕಿಂತಲೂ ಅಧಿಕ ಪ್ರಮಾಣದ ಅದಿರು ಸಾಗಣೆ, ಅಂತರರಾಜ್ಯ ಗಣಿ- ಗಡಿ ಒತ್ತುವರಿ ಮತ್ತಿತರ ಅಕ್ರಮಗಳು ನಡೆದಿದೆ ಎಂದು ವರದಿ ಸಲ್ಲಿಸಿತ್ತು.
ಈ ವರದಿಯನ್ನು ಆಧರಿಸಿಯೇ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿದ ಆಂಧ್ರಪ್ರದೇಶ ಸರ್ಕಾರದ ಮನವಿಯನ್ನು ಪುರಸ್ಕರಿಸಿದ್ದ ಕೇಂದ್ರದ ಗೃಹ ಸಚಿವಾಲಯ, ತನ್ನ ಒಪ್ಪಿಗೆ ಸೂಚಿಸಿದ್ದರಿಂದ ಸಿಬಿಐ 2009ರ ಡಿ. 10ರಂದು ತನಿಖೆ ಆರಂಭಿಸಿತ್ತು.

ತನಿಖೆಯ ಮೊದಲ ಭಾಗವಾಗಿ ಬಳ್ಳಾರಿಯಲ್ಲಿರುವ ಓಎಂಸಿ ಕಚೇರಿ ಹಾಗೂ ಜನಾರ್ದನರೆಡ್ಡಿ ಒಡೆತನದ ಇತರ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಸಿಬಿಐ, 2011ರ ಜನವರಿಯಿಂದ ಐದಾರು ಬಾರಿ ಗಣಿ ಪ್ರದೇಶಗಳಿಗೂ, ಬಳ್ಳಾರಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಗಣಿಗಾರಿಕೆಗೆ ಅನುಮತಿ ನೀಡಲಾದ ನಿರ್ದಿಷ್ಟ ಪ್ರದೇಶ, ಅದಿರಿನ ವರ್ಗೀಕರಣದ ಬಹುತೇಕ ದಾಖಲೆಗಳನ್ನು ವಿವಿಧ ಇಲಾಖೆಗಳಿಂದ ಸಂಗ್ರಹಿಸಿದ್ದ ಸಿಬಿಐ, ಜಿಲ್ಲೆಯ ಬಹುತೇಕ ಗಣಿ ಮಾಲೀಕರಿಂದಲೂ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ನೋಟಿಸ್ ನೀಡಿ, ಕೆಲವು ವರ್ಷಗಳ ಅವಧಿಯ ವಹಿವಾಟಿನ ಮಾಹಿತಿ ಕಲೆ ಹಾಕಿತ್ತು.

ಈ ಪ್ರದೇಶದಲ್ಲಿದ್ದ ಸರ್ವೇ ಸ್ಟೇಷನ್ ಹಾಗೂ ಸುಗ್ಗಲಮ್ಮ ದೇವಸ್ಥಾನದ ಲ್ಯಾಂಡ್ ಮಾರ್ಕ್ ಕುರಿತ ದಾಖಲೆಗಳನ್ನು ವಶಪಡಿಸಿಕೊಂಡಿದ್ದಲ್ಲದೆ, ಗಣಿಪ್ರದೇಶಗಳ ಈಗಿನ ನಕ್ಷೆ ಹಾಗೂ ಪುರಾತನ ನಕ್ಷೆಗಳ ತುಲನಾತ್ಮಕ ಪರಿಶೀಲನೆ ನಡೆಸಿ, ಮಹತ್ವದ ಭಾವಚಿತ್ರಗಳನ್ನೂ ಸಂಗ್ರಹಿಸಿತ್ತು.

ಏತನ್ಮಧ್ಯೆ, ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಇದೇ ಪ್ರದೇಶದ ಸಮೀಕ್ಷೆ ನಡೆಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿಯು (ಸಿಇಸಿ) ಅಕ್ರಮ ಗಣಿಗಾರಿಕೆ ನಡೆದಿರುವ ಬಗ್ಗೆ ಸಮಗ್ರ ವರದಿಯನ್ನೂ ಸಲ್ಲಿಸಿತ್ತು.

ಆಂಧ್ರಪ್ರದೇಶಕ್ಕೆ ಸೇರಿರುವ ಈ ಗಣಿಗಳಲ್ಲಿ ಉನ್ನತ ಗುಣಮಟ್ಟದ ಅದಿರು ಲಭ್ಯವಿಲ್ಲದಿದ್ದರೂ, 60ರಿಂದ 70 ಗ್ರೇಡ್‌ನ ಅದಿರು ಲಭ್ಯವಿದೆ ಎಂದು ತೋರಿಸಿರುವುದು, ಗಣಿಗಾರಿಕೆ ಮಾಡಿದ್ದಕ್ಕಿಂತಲೂ ಅಧಿಕ ಪ್ರಮಾಣದ ಅದಿರನ್ನು ಸಾಗಿಸಿರುವುದೇ ಅಕ್ರಮ ಬಯಲಾಗಲು ಪ್ರಮುಖ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.