ADVERTISEMENT

ಮಾತು ಮರೆತ ಮಾಜಿ ಮುಖ್ಯಮಂತ್ರಿಗಳು...

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST

ಸುವರ್ಣ ಸೌಧ ಉದ್ಘಾಟನಾ ಸಮಾರಂಭದಲ್ಲಿ ಮೊದಲನೇ ಸಾಲಿನಲ್ಲಿ ಕುಳಿತಿದ್ದ ಐವರು ಮಾಜಿ ಮುಖ್ಯಮಂತ್ರಿಗಳೂ ಒಬ್ಬರಿಗೊಬ್ಬರು ಪರಿಚಯವೇ ಇಲ್ಲ ಎಂಬಂತೆ ಗಂಭೀರವಾಗಿ ವರ್ತಿಸಿದ ಪ್ರಸಂಗ ನಡೆಯಿತು.

ರಾಷ್ಟ್ರಪತಿಗಳು ವಿಧಾನಸಭೆ ಸಭಾಂಗಣ ಪ್ರವೇಶಿಸುವುದಕ್ಕಿಂತ ಮುನ್ನ ಮಾಜಿ ಮುಖ್ಯಮಂತ್ರಿಗಳಾದ ಎಂ.ವೀರಪ್ಪ ಮೊಯಿಲಿ, ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ತಮಗೆ ನಿಗದಿಯಾಗಿದ್ದ ಕುರ್ಚಿಗಳಲ್ಲಿ ಆಸೀನರಾಗಿದ್ದರೂ ಒಬ್ಬರತ್ತ ಮತ್ತೊಬ್ಬರು ಕಣ್ಣು ಸಹ ಹೊರಳಿಸಿ ನೋಡಲಿಲ್ಲ.

ಧರ್ಮಸಿಂಗ್, ಮೊಯಿಲಿ  ಮತ್ತು ಸದಾನಂದಗೌಡ, ಯಡಿಯೂರಪ್ಪ ಪರಸ್ಪರ ಮಾತನಾಡಿದ್ದು ಕಂಡು ಬಂದರೂ  ಕುಮಾರಸ್ವಾಮಿ ಮಾತ್ರ ಯಾರತ್ತಲೂ ಗೋಣು ಹೊರಳಿಸಲಿಲ್ಲ.

`ಕೈ~ ನಾಯಕರ ಜೊತೆ ಬಿಎಸ್‌ವೈ ಭೋಜನ
ಬಿಜೆಪಿ ತ್ಯಜಿಸುವುದಾಗಿ ಘೋಷಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ನಾಯಕರಾದ ಸಿದ್ಧರಾಮಯ್ಯ, ಶಾಮನೂರು ಶಿವಶಂಕರಪ್ಪ, ಕೆ.ಎಚ್.ಮುನಿಯಪ್ಪ ಹಾಗೂ ಎಸ್.ಆರ್.ಪಾಟೀಲ ಅವರೊಂದಿಗೆ ಭೋಜನ  ಸವಿದರು. ಊಟದೊಂದಿಗೆ ಕುಶಲೋಪರಿಯಲ್ಲಿ ತೊಡಗಿದ್ದ ಯಡಿಯೂರಪ್ಪ ಅವರೊಂದಿಗೆ ಭೋಜನದ ವೇಳೆ ಬಿಜೆಪಿ ಮುಖಂಡರು ಕಾಣಿಸಿಕೊಳ್ಳಲಿಲ್ಲ.

ಬಿಸಿಲಿನಿಂದ ರಕ್ಷಣೆಗೆ ನಾನಾ ಕಸರತ್ತು
ಕಾರ್ಯಕ್ರಮ ವೀಕ್ಷಿಸಲು ಜಿಲ್ಲೆಯ ನಾನಾ ಕಡೆಯಿಂದ ಆಗಮಿಸಿದ್ದ ಸಾರ್ವಜನಿಕರು ಬಿಸಿಲಿನ ಝಳಕ್ಕೆ ಸಿಲುಕಿ ನಲುಗಿದರು. ಬಿಸಿಲಿನ ತಾಪ ತಡೆಯಲು ಅನೇಕರು ಕೈಯಲ್ಲಿದ್ದ ಪತ್ರಿಕೆಗಳನ್ನು ತಲೆಯ ಮೇಲೆ ಹೊದ್ದುಕೊಂಡರು. ಕರವಸ್ತ್ರ ತೆಗೆದು ಬೆವರು ಒರೆಸಿಕೊಂಡರು. ಆದರೂ ರಕ್ಷಣೆ ಸಿಗಲಿಲ್ಲ.

ಬೆಳಗಾವಿ ನಗರದ ಕನ್ನಡ ಜಾಗೃತಿ ವೇದಿಕೆ ಸದಸ್ಯರು ಥರ್ಮೊಕೋಲ್‌ನಿಂದ ಸಿದ್ಧಪಡಿಸಿದ್ದ ಸುವರ್ಣ ಸೌಧದ ಪ್ರತಿಕೃತಿಯನ್ನೇ ಸೂರ್ಯನಿಗೆ ಅಡ್ಡಲಾಗಿ ಹಿಡಿದು ಈ ಅವಿಸ್ಮರಣೀಯ ಕಾರ್ಯಕ್ರಮ ವೀಕ್ಷಿಸಿದರು.

ಕಾರ್ಯಕ್ರಮದುದ್ದಕ್ಕೂ ಸುವರ್ಣಸೌಧದ ಪ್ರತಿಕೃತಿಯನ್ನೇ ತಲೆ ಮೇಲೆ ಇಟ್ಟುಕೊಂಡು ವೇದಿಕೆ ಸದಸ್ಯರು ಅಭಿಮಾನ ಮೆರೆದರು.

ಇಲ್ಲೂ ರಸ್ತೆ ಬದಿ ಮಾರಾಟ ಜೋರು
ಜಾತ್ರೆ, ಮೇಳ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ನಾನಾ ವಸ್ತುಗಳನ್ನು ಮಾರುವ ಮಂದಿ ಸುವರ್ಣ ಸೌಧದ ಆವರಣವನ್ನೂ ಬಿಡಲಿಲ್ಲ. ಸಿದ್ಧಉಡುಪು, ಕನ್ನಡ ಧ್ವಜಗಳನ್ನು ಮಾರಾಟಕ್ಕೆ ಹೊತ್ತು ತರಲಾಗಿತ್ತು. ಪಾನ್‌ಬೀಡಾ, ಐಸ್‌ಕ್ರೀಮ್ ಮಾರಾಟವೂ ಜೋರಾಗಿತ್ತು.


ಬೆಳಗಾವಿ ಬಂದ್ ಕರೆ ವಿಫಲ
ಬೆಳಗಾವಿ: ನಗರದಲ್ಲಿ ನಿರ್ಮಾಣಗೊಂಡಿರುವ `ಸುವರ್ಣ ವಿಧಾನ ಸೌಧ~ವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉದ್ಘಾಟಿಸುತ್ತಿರುವುದಕ್ಕೆ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಗುರುವಾರ ಕರೆ ನೀಡಿದ್ದ `ಬೆಳಗಾವಿ ಬಂದ್~ ಸಂಪೂರ್ಣ ವಿಫಲವಾಯಿತು.

ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿಯವರು ಬಾರದಂತೆ ಮಹಾರಾಷ್ಟ್ರ ನಾಯಕರ ಮೂಲಕ ಒತ್ತಡ ಹೇರಲು ಎಂಇಎಸ್‌ನ ಒಂದು ಗುಂಪು ಮಾಡಿದ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಗುರುವಾರ `ಬೆಳಗಾವಿ ಬಂದ್~ಗೆ ಕರೆ ನೀಡಲಾಗಿತ್ತು. ಆದರೆ, ನಗರದ ಜನರು ಇದಕ್ಕೆ ಕಿವಿಗೊಡದ ಕಾರಣ ವ್ಯಾಪಾರ ವಹಿವಾಟು ಎಂದಿನಂತೆ ಸುಗಮವಾಗಿ ನಡೆಯಿತು. ಎಂಇಎಸ್‌ನ ಕೆಲವು ಮುಖಂಡರ ವ್ಯಾಪಾರಿ ಮಳಿಗೆಗಳೂ ತೆರೆದಿದ್ದವು. ನಗರದ ಜನರು ಸಂಭ್ರಮದಿಂದಲೇ ಸುವರ್ಣ ವಿಧಾನಸೌಧ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.