ADVERTISEMENT

ಮಾಧ್ಯಮಗಳಿಂದ ಅಭದ್ರತೆ:ಕಾಯ್ಕಿಣಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2015, 20:02 IST
Last Updated 18 ಜುಲೈ 2015, 20:02 IST

ಶಿವಮೊಗ್ಗ: ಮಾಧ್ಯಮಗಳು ಇಂದು ಮನುಷ್ಯ ಜೀವನದ ಜತೆ ಅಭದ್ರತೆಯ ಆಟವಾಡುತ್ತಿವೆ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಆತಂಕ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ಸಂಘದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಅವರು ಮಾತನಾಡಿದರು. ಮಾಧ್ಯಮಗಳು ಜನರ ಜೀವನಕ್ಕೆ ಭಯ ಹುಟ್ಟಿಸುತ್ತಿವೆ. ಭಾರತೀಯರ ಮನಸ್ಸಿನಲ್ಲಿ ಮನರಂಜನೆಯ ಜತೆಗೆ ಹಣದ ವೈಭವೀಕರಣ ಮಾಡಿದಂತಹ ಕಾರ್ಯಕ್ರಮಕ್ಕೆ ಉದಾಹರಣೆಯೆಂದರೆ ಕೌನ್‌ಬನೇಗಾ ಕರೋಡ್‌ಪತಿ. ಮಾಹಿತಿ ತಿಳಿಸುವ ಜೊತೆಗೆ ಹಣಕ್ಕೆ ಮಹತ್ವ ನೀಡಿದ್ದ ಕಾರ್ಯಕ್ರಮ ಕರೋಡ್‌ಪತಿಯಲ್ಲಿ ಮಧ್ಯಮವರ್ಗದ ಹಾಗೂ ಸಾಮಾನ್ಯ ಜನರ ಬದುಕಿಗೆ ಭಯವನ್ನು ಹುಟ್ಟಿ ಹಾಕಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಇಂದಿನ ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಿಂದ ಮನುಷ್ಯನ ನಡುವಿನ ಸಂವಹನ ಗೌಣವಾಗುತ್ತಿದ್ದು, ಎಲ್ಲರೂ ಅಪರಿಚಿತರಂತೆ ಬದುಕುತ್ತಿದ್ದೇವೆ. ಇಂಗ್ಲಿಷ್ ಮಾತಾಡಬೇಕು ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ವ್ಯವಹರಿಸಬೇಕು ಎಂಬ ವ್ಯಾಮೋಹ ಸಾಕಷ್ಟು ಆಭಾಸಗಳಿಗೂ ಕಾರಣವಾಗಿದೆ ಎಂದರು. ಕರ್ನಾಟಕ ಸಂಘದ ಅಧ್ಯಕ್ಷೆ ವಿಜಯಾ ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. 11 ಸಾಹಿತಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. 

ಪ್ರಶಸ್ತಿ ವಿವರ: ಒಟ್ಟು ಹನ್ನೊಂದು ವಿಭಾಗಗಳಲ್ಲಿ ಸಾಹಿತ್ಯ ವಿವಿಧ ವಿಭಾಗಗಳಿಗೆ ಪ್ರಶಸ್ತಿ ನೀಡಲಾಗಿದ್ದು,  ಪ್ರಶಸ್ತಿಯು ತಲಾ ₹5,000 ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.

ಪ್ರಶಸ್ತಿ ಪುರಸ್ಕೃತರು: ಕಾದಂಬರಿ ವಿಭಾಗದಲ್ಲಿ ರಾಷ್ಟ್ರಕವಿ ಕುವೆಂಪು ಪ್ರಶಸ್ತಿಗೆ ವೈ.ಎಸ್.ಹರಗಿಯವರ ‘ಉರಿವ ಜಲ’ ಕಾದಂಬರಿ, ಅನುವಾದ ಪ್ರಕಾರದಲ್ಲಿ ಡಾ.ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿಯು ಕರುಣಾ ಬಿ.ಎಸ್. ಅವರ ‘ಗಾಳಿ ಪಳಗಿಸಿದ ಬಾಲಕ’ ಕೃತಿಗೆ, ಲೇಖಕಿಗೆ ನೀಡಲಾಗುವ ಎಂ.ಕೆ.ಇಂದಿರಾ ಪ್ರಶಸ್ತಿಯು ‘ಕನಸಿನ ಕಾಡಿಗೆ’ ಕೃತಿಯ ಸಿಂಧುಚಂದ್ರ ಹೆಗಡೆಯವರಿಗೆ, ಲಂಕೇಶ್‌ ಹೆಸರಿನಲ್ಲಿ ಮುಸ್ಲಿಂ ಲೇಖಕರಿಗೆ ನೀಡುವ ಪ್ರಶಸ್ತಿ ‘ನಂಬಿಕೆ, ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ’ ಕೃತಿಯ ಲೇಖಕ ಅಬ್ದುಲ್ ರೆಹಮಾನ್ ಪಾಷ, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಹೆಸರಿನಲ್ಲಿ ಕವನ ಸಂಕಲನಕ್ಕೆ ನೀಡಲಾಗುವ ಪ್ರಶಸ್ತಿಯು ಬಸವರಾಜಪ್ಪ ವಿ. (ಬೇವಿನಮರ) ಅವರ ‘ಚಿತ್ತಕಂದರದ ಹೆರಿಗೆ’ ಕವನ ಸಂಕಲನಕ್ಕೆ, ಡಾ.ಹಾ.ಮಾ.ನಾಯಕ ಹೆಸರಿನಲ್ಲಿ ಅಂಕಣ ಬರಹಕ್ಕೆ ನೀಡುವ ಪ್ರಶಸ್ತಿಯು ಕೆ. ನೀಲಾರವರ ‘ಬಾಳಕೌದಿ’ ಪುಸ್ತಕಕ್ಕೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು. ಆರ್.ಅನಂತಮೂರ್ತಿ ಅವರ ಹೆಸರಿನಲ್ಲಿ ಸಣ್ಣ ಕಥಾಸಂಕಲನಕ್ಕೆ ನೀಡುವ ಪ್ರಶಸ್ತಿಯನ್ನು ಸುಮಂಗಲಾರವರ ‘ಹನ್ನೊಂದನೇ ಅಡ್ಡರಸ್ತೆ’ ಕೃತಿಗೆ, ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಹೆಸರಿನಲ್ಲಿ ನೀಡಲಾಗುವ ಪ್ರವಾಸ ಕಥನ ವಿಭಾಗದ ಪ್ರಶಸ್ತಿಯು ‘ಅಪೂರ್ವ ಪೂರ್ವ’ ಕೃತಿಕಾರ ವೆಂಕಟೇಶ ಮಾಚಕನೂರರವರಿಗೆ, ಹಸೂಡಿ ವೆಂಕಟಶಾಸ್ತ್ರಿ ಹೆಸರಿನಲ್ಲಿ ವೈಜ್ಞಾನಿಕ ಕೃತಿಗೆ ನೀಡಲಾಗುವ ಪ್ರಶಸ್ತಿಯು ರೋಹಿತ್ ಚಕ್ರತೀರ್ಥ ‘ಗಣಿತ ಕುತೂಹಲ’ ಕೃತಿಗೆ, ನಾ.ಡಿಸೋಜ ಹೆಸರಿನಲ್ಲಿ ಮಕ್ಕಳ ಸಾಹಿತ್ಯ ವಿಭಾಗಕ್ಕೆ ನೀಡಲಾಗುವ ಪ್ರಶಸ್ತಿಯು ಎಸ್.ಕಲಾಧರರವರ ‘ಶಾಮಂತಿ’ ಕೃತಿಗೆ ಹಾಗೂ ಡಾ.ಎಚ್.ಡಿ.ಚಂದ್ರಪ್ಪ ಗೌಡರವರ ಹೆಸರಿನಲ್ಲಿ ವೈದ್ಯ ಸಾಹಿತ್ಯ ಕ್ಷೇತ್ರಕ್ಕೆ ನೀಡಲಾಗುವ ಪ್ರಶಸ್ತಿಯು ಡಾ.ಪಿ.ಎಸ್.ಶಂಕರ್‌ರ ‘ಸ್ತ್ರೀ ಪ್ರಜನನ ವ್ಯವಸ್ಥೆ’ ಕೃತಿಗೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.