ADVERTISEMENT

ಮಾಧ್ಯಮ ವಕೀಲರ ಸಂಘರ್ಷ: ರಾಘವನ್ ನೇತೃತ್ವದ ಎಸ್‌ಐಟಿ ರಚನೆ

​ಪ್ರಜಾವಾಣಿ ವಾರ್ತೆ
Published 16 ಮೇ 2012, 19:30 IST
Last Updated 16 ಮೇ 2012, 19:30 IST
ಮಾಧ್ಯಮ ವಕೀಲರ ಸಂಘರ್ಷ: ರಾಘವನ್ ನೇತೃತ್ವದ ಎಸ್‌ಐಟಿ ರಚನೆ
ಮಾಧ್ಯಮ ವಕೀಲರ ಸಂಘರ್ಷ: ರಾಘವನ್ ನೇತೃತ್ವದ ಎಸ್‌ಐಟಿ ರಚನೆ   

ಬೆಂಗಳೂರು: ವಕೀಲರು ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ಬೆಂಗಳೂರಿನ ಸಿವಿಲ್ ಕೋರ್ಟ್ ಆವರಣದಲ್ಲಿ ಮಾರ್ಚ್ 2ರಂದು ಸಂಭವಿಸಿದ ಅಹಿತಕರ ಘಟನೆಗಳ ಕುರಿತು ತನಿಖೆ ನಡೆಸಲು ಸಿಬಿಐ ಮಾಜಿ ನಿರ್ದೇಶಕ ಆರ್.ಕೆ. ರಾಘವನ್ ನೇತೃತ್ವದಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ತನಿಖೆಯನ್ನು ಮೂರು ತಿಂಗಳಿನಲ್ಲಿ ಪೂರ್ಣಗೊಳಿಸಬೇಕು ಎಂದು ಆದೇಶದಲ್ಲಿ ಹೇಳಿದೆ.

ರಾಘವನ್ ನೇತೃತ್ವದ ಎಸ್‌ಐಟಿ ಸಂಚಾಲಕರಾಗಿ ಅಪರಾಧ ತನಿಖಾ ದಳದ (ಸಿಐಡಿ) ಡಿಜಿಪಿ ರೂಪಕಕುಮಾರ್ ದತ್ತ ಅವರು ಕರ್ತವ್ಯ ನಿರ್ವಹಿಸಲಿದ್ದಾರೆ. ರಾಘವನ್ ಅವರು ರಾಜ್ಯ ಪೊಲೀಸ್ ಇಲಾಖೆಯಿಂದ ಇನ್ನೂ ಮೂವರು ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು. ದತ್ತ ಸೇರಿದಂತೆ ನಾಲ್ವರು ಅಧಿಕಾರಿಗಳು ರಾಘವನ್ ಅವರ ನೇತೃತ್ವದಲ್ಲಿ ಘಟನೆ ಕುರಿತು ತನಿಖೆ ನಡೆಸಬೇಕು ಎಂದು ಕೋರ್ಟ್ ಬುಧವಾರ ನೀಡಿರುವ ಆದೇಶದಲ್ಲಿ ತಿಳಿಸಿದೆ.

ಎಸ್‌ಐಟಿ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಕೋರ್ಟ್ ಆದೇಶದ ಪ್ರತಿ ದೊರೆತ ಹತ್ತು ದಿನಗಳಲ್ಲಿ ಅಧಿಸೂಚನೆ ಪ್ರಕಟಿಸಬೇಕು. ಪ್ರಥಮ ಸಭೆಯಲ್ಲಿ ಎಸ್‌ಐಟಿ ತನಿಖೆಯ ರೂಪುರೇಷೆಗಳ ಕುರಿತು ಚರ್ಚೆ ನಡೆಸಬೇಕು. ನ್ಯಾಯಾಲಯದ ಆವರಣದಲ್ಲಿ ನಡೆದ ಘಟನೆ ಕುರಿತು ಹೇಳಿಕೆ ನೀಡಲು ಯಾರೇ ಮುಂದೆ ಬಂದರೂ, ಅದನ್ನು ಎಸ್‌ಐಟಿ ದಾಖಲಿಸಿಕೊಳ್ಳಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.

ADVERTISEMENT

ತನಿಖಾ ದಳಕ್ಕೆ ಅಗತ್ಯವಿರುವ ಮೂಲ ಸೌಕರ್ಯವನ್ನು ರಾಜ್ಯ ಸರ್ಕಾರ ಒದಗಿಸಬೇಕು. ಪೊಲೀಸರು, ವಕೀಲರು ಹಾಗೂ ಮಾಧ್ಯಮ ಪ್ರತಿನಿಧಿಗಳು ನೀಡಿರುವ ದೂರು ಆಧರಿಸಿ ಎಸ್‌ಐಟಿ ತನಿಖೆ ನಡೆಸಬೇಕು.

ಘಟನೆಯ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಜಿತ್ ಜೆ. ಗುಂಜಾಳ ಹಾಗೂ ಬಿ.ವಿ. ನಾಗರತ್ನಾ ಅವರನ್ನೊಳಗೊಂಡ ವಿಶೇಷ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರನ್ನು ಮಾರ್ಚ್ 2ರಂದು ವಿಚಾರಣೆಗೆ ಹಾಜರುಪಡಿಸಿದ ವೇಳೆ ಕೆಲವು ಮಾಧ್ಯಮ ಪ್ರತಿನಿಧಿಗಳು ಹಾಗೂ ವಕೀಲರ ನಡುವೆ ಸಂಭವಿಸಿದ ಘರ್ಷಣೆ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಬೀರುವಂಥ ಅಪರೂಪದ ಪ್ರಕರಣವಲ್ಲ. ಇದರ ಕುರಿತು ಸಿಬಿಐ ತನಿಖೆ ಅಗತ್ಯವಿಲ್ಲ. ಆದರೆ, ಇದು ಸಾಮಾನ್ಯವಾದ ಘಟನೆ ಅಲ್ಲ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಹಿನ್ನೆಲೆಯಲ್ಲಿ ಘಟನೆ ಕುರಿತು ಸ್ವತಂತ್ರ ಸಂಸ್ಥೆಯೊಂದರಿಂದ ತನಿಖೆ ನಡೆಸುವ ಅಗತ್ಯವಿದೆ ಎಂದು ನ್ಯಾಯಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.