ADVERTISEMENT

ಮಾರಾಟ ತೆರಿಗೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 19:30 IST
Last Updated 16 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಪೆಟ್ರೋಲ್ ಬೆಲೆ ವಿಪರೀತ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅದರ ಮೇಲೆ ರಾಜ್ಯ ಸರ್ಕಾರ ವಿಧಿಸುವ ಮಾರಾಟ ತೆರಿಗೆಯ ಪ್ರಮಾಣವನ್ನು ಇಳಿಸುವ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ ನಿರ್ಧಾರಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.

ಕೇಂದ್ರ ಸರ್ಕಾರ ಪದೇ ಪದೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಸುತ್ತಿದೆ. ಇದರಿಂದ ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ಹೀಗಾಗಿ ರಾಜ್ಯ ಸರ್ಕಾರದ ತೆರಿಗೆ ಪ್ರಮಾಣವನ್ನು ಇಳಿಸುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ಅವರು ತಿಳಿಸಿದರು.

ಬೆಲೆ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ತೀರ್ಮಾನವನ್ನು ಅವರು ಖಂಡಿಸಿದರು. ದರ ಇಳಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುವುದಾಗಿ    ಹೇಳಿದರು.

ಕೊಪ್ಪಳ ಪ್ರವಾಸ: `ಮುಖ್ಯಮಂತ್ರಿಯಾದ ನಂತರ ಕೊಪ್ಪಳದಲ್ಲಿ ಮೊದಲ ಚುನಾವಣೆ ನಡೆಯುತ್ತಿದೆ. ಚುನಾವಣಾ ಪ್ರಚಾರದಲ್ಲಿ ಇದೇ 20ರ ನಂತರ ಸಾಮಾನ್ಯ ಕಾರ್ಯಕರ್ತನಾಗಿ ಭಾಗವಹಿಸುತ್ತೇನೆ~ ಎಂದು ಅವರು ಹೇಳಿದರು.

ಎರಡು-ಮೂರು ದಿನ ಕೊಪ್ಪಳದಲ್ಲೇ ಇದ್ದು ಎಲ್ಲಾ ಹಳ್ಳಿಗಳಿಗೂ ಭೇಟಿ ನೀಡಿ ಪ್ರಚಾರ ಕೈಗೊಳ್ಳುವುದಾಗಿ ಅವರು ವಿವರಿಸಿದರು.

ಪೆಟ್ರೋಲ್ ಮೇಲೆ ಎಷ್ಟು ತೆರಿಗೆ?
ಬೆಂಗಳೂರು:
ರಾಜ್ಯ ಸರ್ಕಾರ ಪೆಟ್ರೋಲ್ ಮೇಲೆ ಶೇ 25ರಷ್ಟು ಮಾರಾಟ ತೆರಿಗೆಯನ್ನು ವಿಧಿಸುತ್ತಿದೆ.
ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಪ್ರಸ್ತುತ ಬೆಂಗಳೂರಿನಲ್ಲಿ ರೂ 74.82 ಇದೆ. ಇದರಲ್ಲಿ ಮಾರಾಟ ತೆರಿಗೆಯೇ 14.80 ರೂಪಾಯಿ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

 ಶೇ 25ರ ಮಾರಾಟ ತೆರಿಗೆಯನ್ನು ಇಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೇ ಇದ್ದು, ಆ  ಕುರಿತು ಚಿಂತನೆ ನಡೆಸುವ ಇಂಗಿತವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.