ADVERTISEMENT

ಮಾರಿಕಾಂಬಾ ಜಾತ್ರೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST

ಶಿರಸಿ (ಉ.ಕ.ಜಿಲ್ಲೆ):  ನಾಡಿನ ಜಾಗೃತ ಶಕ್ತಿಪೀಠಗಳಲ್ಲಿ ಒಂದಾದ ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರಾ ಮಹೋ­ತ್ಸವವು ಮಂಗಳವಾರ (ಮಾ.11)ದಿಂದ ವಿಧ್ಯುಕ್ತವಾಗಿ ಪ್ರಾರಂಭ-­ವಾಗಲಿದೆ.

ಮಾರಿ ಜಾತ್ರೆ ಎಂದಾಕ್ಷಣ ಪ್ರಾಣಿ­ಬಲಿ ನೀಡುವ ಭಯಾನಕ ದೃಶ್ಯ ಮನ­ದಲ್ಲಿ ಮೂಡುತ್ತದೆ. ಆದರೆ ಈ ಜಾತ್ರೆ­ಯಲ್ಲಿ ಪ್ರಾಣಿ ಬಲಿ ಸಂಪೂರ್ಣ ನಿಷಿದ್ಧ. ಜಾತ್ರೆಯ ಹೆಸರಿನಲ್ಲಿ ಕೋಣ, ಕುರಿ, ಕೋಳಿಯ ನೆತ್ತರು ಹರಿಸುವ ಪದ್ಧತಿ ಇಲ್ಲದಿರುವುದೇ ಇಲ್ಲಿನ ವಿಶೇ­ಷತೆ. ಮಾರಿಕಾಂಬೆಯ ಪತಿ ಮಹಿಷಾ­ಸುರನ ಪ್ರತೀಕವಾಗಿರುವ ಪಟ್ಟದ ಕೋಣ­ವನ್ನು ಪೂಜಿಸಿ, ಆರಾಧಿಸುವ ಸಂಪ್ರ­ದಾಯ ಇಲ್ಲಿ ಆಚರಣೆಯಲ್ಲಿದೆ.

ಈ ಸಂದರ್ಭದಲ್ಲಿ ಪ್ರಾಣಿ ಬಲಿಯ ಬದಲಾಗಿ ಸಾತ್ವಿಕ ಸ್ವರೂಪದ ಬೂದುಗುಂಬಳ ಕಾಯಿಯನ್ನು ಬಲಿ ಕೊಡಲಾಗುತ್ತದೆ.
ಮಾರಿಕಾಂಬಾ ಜಾತ್ರೆ ಈ ಬಾರಿ ಇದೇ 11ರಿಂದ 19ರ ವರೆಗೆ ನಡೆಯ­ಲಿದೆ. ಎರಡು ವರ್ಷಕ್ಕೊಮ್ಮೆ ನಡೆ­ಯುವ ಜಾತ್ರೆಗೆ ರಾಜ್ಯದ ಜನರು ಮಾತ್ರ­ವಲ್ಲದೆ ಗೋವಾ, ಮಹಾ­ರಾಷ್ಟ್ರ, ಕೇರಳಗಳಿಂದ ಭಕ್ತರು ಬರು­ತ್ತಾರೆ.

ಬುಧವಾರ ನಸುಕು ಹರಿಯುತ್ತಲೇ ಬಿಡಕಿಬೈಲಿನ ಜಾತ್ರಾ ಗದ್ದುಗೆಗೆ ಶೋಭಾ­ಯಾತ್ರೆಯಲ್ಲಿ ಸಾಗುವ ದೇವಿ­ಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂ­­ತರ ಜನ ಸೇರುತ್ತಾರೆ. ಗುರು­ವಾರ ಬೆಳಿಗ್ಗೆ­ಯಿಂದ ಹಣ್ಣು–ಕಾಯಿ ಸೇವೆ, ಹರಕೆ, ತುಲಾ­ಭಾರ, ಬೇವಿನ ಉಡುಗೆ ಸೇವೆ­ಗಳು ಪ್ರಾರಂಭವಾಗಿ ಇದೇ 18ರ ತನಕ ನಡೆಯುತ್ತವೆ. ರಥದಲ್ಲಿ ಆಗಮಿ­ಸುವ ದೇವಿ 19ರಂದು ಅಟ್ಟಲಿನಲ್ಲಿ ಮರಳುವ ಮೂಲಕ ಜಾತ್ರೆಗೆ ಸಂಭ್ರಮದ ತೆರೆ ಬೀಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.