ADVERTISEMENT

ಮೀಟರ್ ಬಡ್ಡಿಗೆ ಕಡಿವಾಣ: ಮುಖ್ಯಮಂತ್ರಿ ಭರವಸೆ

‘ಮೊಬೈಲ್‌ ಬ್ಯಾಂಕಿಂಗ್‌ ವ್ಯವಸ್ಥೆ ಮೂಲಕ ಸಾಲ’

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 19:30 IST
Last Updated 4 ಜೂನ್ 2018, 19:30 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ಕಿರು ಮಾರುಕಟ್ಟೆಗಳಲ್ಲಿ ಹಾಗೂ ಬೀದಿಬದಿಗಳಲ್ಲಿ ವ್ಯಾಪಾರ ಮಾಡುವವರು ಮೀಟರ್ ಬಡ್ಡಿಯಿಂದ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಜನರನ್ನು ಸುಲಿಯುವ ಇಂತಹ ಬಡ್ಡಿ ದಂಧೆಗಳಿಗೆ ಕಡಿವಾಣ ಹಾಕುತ್ತೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ನ್ಯಾಷನಲ್‌ ಕಾಲೇಜಿನ ಹಳೆವಿದ್ಯಾರ್ಥಿಯಾಗಿರುವ ಕಾರಣಕ್ಕೆ ಆಡಳಿತ ಮಂಡಳಿ ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಸಭೆಯಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ‘ವ್ಯಾಪಾರಿಗಳ ಅನುಕೂಲಕ್ಕಾಗಿ  ಮಾರುಕಟ್ಟೆಗಳಲ್ಲಿ ಮೊಬೈಲ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ರೂಪಿಸಿ, ಸುಲಭದಲ್ಲಿ ದಿನಸಾಲ ಸಿಗುವಂತೆ ಮಾಡಲಾಗುವುದು’ ಎಂದು ಹೇಳಿದರು.

ಆದರೆ, ಈ ಕುರಿತ ವಿವರಗಳನ್ನು ಅವರು ಕಾರ್ಯಕ್ರಮದಲ್ಲಿ ನೀಡಲಿಲ್ಲ. ‘ವ್ಯಾಪಾರಿಗಳಿಗೆ ₹1,000ಕ್ಕೂ ಹೆಚ್ಚಿನ ಮೌಲ್ಯವಿರುವ ಕ್ರೆಡಿಟ್‌ ಕಾರ್ಡ್‌ ಮಾದರಿಯ ಕಾರ್ಡ್‌ ನೀಡಲಾಗುವುದು. ಅದನ್ನು ಬಳಸಿಕೊಂಡು ಹಣ ಪಡೆಯಬಹುದು. ವ್ಯಾಪಾರ ಮುಗಿಸಿ, ಅದಕ್ಕೆ ಹಣ ಮರುಪಾವತಿಸಿದರೆ ಮಾತ್ರ ಮರುದಿನ ಮತ್ತೆ ಹಣ ಪಡೆಯಲು ಸಾಧ್ಯವಾಗುತ್ತದೆ. ಈ ರೀತಿಯ ಚಿಂತನೆಯೊಂದಿದೆ’ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ADVERTISEMENT

ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ: ‘ಒಂದನೇ ತರಗತಿಯಿಂದ ಪದವಿಯವರೆಗೆ ಓದುವ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶ ಇದೆ. ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಎದುರಾದರೂ ಅದನ್ನು ಬಗೆಹರಿಸಲು ನಾನು ಸದಾ ಸಿದ್ಧ. ವಿದ್ಯಾರ್ಥಿಗಳಿಗೆ ವಿಧಾನಸೌಧದ ಬಾಗಿಲು ಸದಾ ತೆರೆದಿರುತ್ತದೆ. ಪ್ರತಿಯೊಬ್ಬರಿಗೂ ಶಿಕ್ಷಣ ಕೈಗೆಟುಕಬೇಕು ಎಂಬುದು ನನ್ನಾಸೆ’ ಎಂದು ಮುಖ್ಯಮಂತ್ರಿ ಹೇಳಿದರು.

‘ಹತ್ತು ವರ್ಷಗಳಲ್ಲಿ ಹೊಸದಾಗಿ ಶಿಕ್ಷಕರ ನೇಮಕವಾಗಿಲ್ಲ. ಸದ್ಯ ರಾಜ್ಯದಲ್ಲಿ 23 ಸಾವಿರ ಶಿಕ್ಷಕರ ಕೊರತೆ ಇದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆ ಬಗ್ಗೆ ಚರ್ಚಿಸಿದ್ದೇನೆ. ಕಮಿಷನ್‌ ಆಸೆಗಾಗಿ ಕೇವಲ ಕಟ್ಟಡಗಳನ್ನು ನಿರ್ಮಿಸುವುದು ಮೊದಲು ನಿಲ್ಲಬೇಕು. ಗುಣಮಟ್ಟದ ಶಿಕ್ಷಣದ ಬಗ್ಗೆ ಇಲಾಖೆಗಳು ಗಮನ ಹರಿಸುತ್ತಿಲ್ಲ’ ಎಂದು ಕಿಡಿಕಾರಿದರು.

‘ವಿಧಾನಸೌಧದ ಮೂರನೇ ಮಹಡಿಗೆ ಎಲ್ಲರಿಗೂ ಸ್ವಾಗತವಿದೆ. ನನ್ನನ್ನು ಭೇಟಿ ಮಾಡಲು ಯಾವುದೇ ಅನುಮತಿ ಪತ್ರವೂ ಬೇಕಾಗಿಲ್ಲ. ನೇರವಾಗಿ ನನ್ನ ಬಳಿ ಬಂದು ದೂರನ್ನು ಹೇಳಬಹುದು ಎಂದು ಹೇಳಿದರು.

‘ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿ ಇರುವುದು ಹೌದು. ಅವರು ಬೆಂಬಲ ನೀಡಿದ್ದರಿಂದ ಮುಖ್ಯಮಂತ್ರಿ ಆಗಿದ್ದೇನೆ. ಸಾಂದರ್ಭಿಕ ಶಿಶು ಎನ್ನುವ ನನ್ನ ಮಾತು ಸರಿಯಾಗಿಯೇ ಇದೆ.’

– ಎಚ್‌.ಡಿ.ಕುಮಾರಸ್ವಾಮಿ

‘ಹಿರಿಯ ನಾಗರಿಕರಿಗೆ ₹6,000 ಖಚಿತ’

‘65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ₹6,000 ಮಾಸಾಶನ ನೀಡುವ ಭರವಸೆ ನೀಡಿದ್ದೆ. ಯಾರು ಏನೇ ಟೀಕೆ ಮಾಡಿದರೂ ಬೀದಿಗೆ ಬಂದರೂ ಪ್ರಣಾಳಿಕೆಯಲ್ಲಿ ಘೋಷಿಸಿರುವ ಎಲ್ಲ ಭರವಸೆಗಳನ್ನು ಈಡೇರಿಸುವ ಯೋಜನೆಯನ್ನು ಮುಂದಿನ ಬಜೆಟ್ ನಲ್ಲಿ ಜಾರಿಗೆ ತರುತ್ತೇನೆ’ಎಂದು ಕುಮಾರಸ್ವಾಮಿ ಹೇಳಿದರು.

ಹೆಲಿಕಾಪ್ಟರ್‌ನ ₹13.5 ಲಕ್ಷ ಬಿಲ್‌ ವಾಪಸ್‌

‘ಎರಡು ದಿನ ಇದ್ದ ಮುಖ್ಯಮಂತ್ರಿ ಬಾಗಲಕೋಟೆ, ಇಳಕಲ್‌ಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ ವೆಚ್ಚ ₹13.5 ಲಕ್ಷವನ್ನು ಸರ್ಕಾರವೇ ಭರಿಸುವಂತೆ ಕಡತ ಕಳುಹಿಸಿದ್ದರು. ಖಾಸಗಿ ಹೆಲಿಕಾಪ್ಟರ್‌ ಬಾಡಿಗೆ ಪಡೆದರೂ ₹5 ಲಕ್ಷದಲ್ಲಿ ಹೋಗಿ ಬರಬಹುದು. ಹೀಗಾಗಿ ಕಡತವನ್ನು ವಾಪಸ್‌ ಕಳುಹಿಸಿದ್ದೇನೆ’ ಎಂದು ಕುಮಾರಸ್ವಾಮಿ ಹೇಳಿದರು.

‘ನಾನು ದಡ್ಡ ವಿದ್ಯಾರ್ಥಿ’: ‘ನಾನು ಅತ್ಯಂತ ದಡ್ಡ ವಿದ್ಯಾರ್ಥಿಯಾಗಿದ್ದೆ. ಎಲ್ಲಿ ಮೇಷ್ಟ್ರು ಪ್ರಶ್ನೆ ಕೇಳುತ್ತಾರೊ ಎಂದು ಹಿಂದಿನ ಸಾಲಿನಲ್ಲಿ ಅಡಗಿ ಕುಳಿತುಕೊಳ್ಳುತ್ತಿದೆ. ಆಗೆಲ್ಲ ಸಿನಿಮಾದ ಬಗ್ಗೆ ಸಾಕಷ್ಟು ಆಸಕ್ತಿ ಇತ್ತು. ಹಾಗಾಗಿ ಸರಿಯಾಗಿ ಓದಲೇ ಇಲ್ಲ. ಈಗ ದಿನಕ್ಕೆ 20 ಗಂಟೆ ಓದಿದರೂ ಸಮಯ ಸಾಲುತ್ತಿಲ್ಲ. ಈಗಿನ ಮನಸ್ಸು ಆಗ ಇದ್ದಿದ್ದರೆ, ನಾನು ಯಾವುದಾದರೂ ಸರ್ಕಾರಿ ಅಧಿಕಾರಿಯಾಗುತ್ತಿದೆ’ ಎಂದು ಹೇಳಿದ ಅವರು, ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.